ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಗೌರಿ ಗಣೇಶ ಹಬ್ಬಕ್ಕೆ ತವರು ಮನೆಯವರು ಕರೆಯಲಿಲ್ಲ ಎಂಬ ಕಾರಣಕ್ಕೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತವರಿನವರು ಯಾರೂ ಇಲ್ಲದ ಕಾರಣ ಈಕೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.
ವರದಿ - ಪುಟ್ಟರಾಜು ಆರ್‌ಸಿ, ಏಷ್ಯಾನೆಟ್ ಸುವರ್ಣನ್ಯೂಸ್, ಚಾಮರಾಜನಗರ
ಚಾಮರಾಜನಗರ (ಆ.27): ಇಡೀ ರಾಜ್ಯ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದರೆ, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಒಂದು ಮನೆಯಲ್ಲಿ ಶೋಕ ಆವರಿಸಿದೆ. ಗೌರಿ ಗಣೇಶ ಹಬ್ಬಕ್ಕೆ ತನ್ನ ತವರು ಮನೆಯವರು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಮನನೊಂದಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀವನದಲ್ಲಿ ಭಾರೀ ಜಿಗುಪ್ಸೆಗೊಂಡಿದ್ದ ಗೃಹಿಣಿ, ಹಬ್ಬಕ್ಕೆ ತವರು ಮನೆಗೆ ಹೋಗಿ ಸಂಭ್ರಮ ಪಡುವ ಖುಷಿಯಲ್ಲಿದ್ದಳು. ಆದರೆ, ತವರು ಮನೆಯಿಂದ ಯಾವುದೇ ಆಹ್ವಾನ ಬರದ ಕಾರಣ ಮನನೊಂದು ಈ ಕೃತ್ಯ ಎಸಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು 26 ವರ್ಷದ ರಶ್ಮಿ ಎಂದು ಗುರುತಿಸಲಾಗಿದೆ. ಮಧುವನಹಳ್ಳಿ ಗ್ರಾಮದ ಸಿದ್ದರಾಜು ಅವರನ್ನು ಈಕೆ ವಿವಾಹವಾಗಿದ್ದಳು. ಈಕೆಯ ತಂದೆ, ತಾಯಿ ಹಾಗೂ ಅಣ್ಣ ಈಗಾಗಲೇ ಸಾವು ಕಂಡಿದ್ದಾರೆ. ತವರಿಗೆ ಕರೆದು ಅರಿಶಿನ-ಕುಂಕುಮ ಕೊಡಲು ಯಾರೂ ಇಲ್ಲ ಎನ್ನುವ ಕಾರಣಕ್ಕೆ ಆಕೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಇದರಿಂದಾಗಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತವರುಮನೆ ಅಂದ್ರೆ ಹೆಣ್ಣುಮಕ್ಕಳಿಗೆ ಅಂದ್ರೆ ಬಹಳ ಪ್ರೀತಿ. ಹಬ್ಬ ಹರಿದಿನಗಳಿಗೆ ಕರೆಯಲು ಅಪ್ಪ ಅಮ್ಮ ಬರ್ತಾರೆ ಅಥವಾ ಅಣ್ಣ ಬರ್ತಾನೆ ಅಂತ ಕಾತುರದಿಂದ ಕಾಯುವುದು ಸಾಮಾನ್ಯ. ಅದೇ ರೀತಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕಿನ ಹೊಂಡರಬಾಳು ಗ್ರಾಮದಿಂದ ಮಧುವನಹಳ್ಳಿಯ ಸಿದ್ದರಾಜು ಎಂಬಾತನೊಂದಿಗೆ ಮದುವೆಯಾಗಿದ್ದ ರಶ್ಮಿ ಎಂಬ ಗೃಹಿಣಿಗೆ ತವರು ಮನೆ ಅಂದ್ರೆ ಪಂಚಪ್ರಾಣ. ಅಪ್ಪ ಏಳು ವರ್ಷಗಳ ಹಿಂದೆ, ಅಮ್ಮ ಎಂಟು ತಿಂಗಳ ಹಿಂದೆ ತೀರಿಕೊಂಡಿದ್ದರು. ಇದರಿಂದ ರಶ್ಮಿ ಮನನೊಂದಿದ್ದಳು. ತೀರಾ ಇತ್ತೀಚಿಗೆ ಅಂದ್ರೆ 5 ತಿಂಗಳ ಹಿಂದೆ ಪ್ರೀತಿಯ ಅಣ್ಣ ಸಿದ್ದೇಶ ಸಹ ಸಾವು ಕಂಡಿದ್ದ. ತವರು ಮನೆ ಮೇಲೆ ಅತೀವ ಪ್ರೀತಿ ಇಟ್ಟು ಕೊಂಡಿದ್ದ ರಶ್ಮಿಗೆ ಇದು ಮತ್ತಷ್ಟು ಆಘಾತವುಂಟು ಮಾಡಿತ್ತು. ಆಗಾಗ್ಗೆ ತವರು ಮನೆಗೆ ಹೋಗಿ ಅಪ್ಪ ಅಮ್ಮ ಹಾಗು ಅಣ್ಣನ ಫೋಟೋಗಳಿಗೆ ಪೂಜೆ ಮಾಡಿ ಎಡೆ ಇಟ್ಟು ಬರ್ತಿದ್ದಳು. ಆದರೆ ಗೌರಿ ಹಬ್ಬ ಬರುತ್ತಿದ್ದಂತೆ ಅಪ್ಪ ಅಮ್ಮ ಹಾಗೂ ಅಣ್ಣನ ನೆನಪು ತೀವ್ರವಾಗಿ ಕಾಡತೊಡಗಿತ್ತು. ಈ ಬಾರಿ ತನ್ನನ್ನು ಗೌರಿ ಗಣೇಶ ಹಬ್ಬಕ್ಕೆ ಕರೆದು ಅರಿಶಿನ ಕುಂಕುಮ ಕೊಡುವವರು ಸಹ ಯಾರು ಇಲ್ಲದಂತೆ ಆದ್ರಲ್ಲ ಎಂಬ ಕೊರಗಿನಲ್ಲೇ ಜಿಗುಪ್ಸೆ ಗೊಂಡು ನೇಣಿಗೆ ಶರಣಾಗಿದ್ದಾಳೆ
ಇನ್ನೂ ಗೌರಿ ಹಬ್ಬ ಬರುತ್ತಿದ್ದಂತೆ ಮನೆಯೆಲ್ಲ ಸ್ವಚ್ಚಗೊಳಿಸಿ ಪೂಜೆ ಸಾಮಾನು ತಂದಿದ್ದ ರಶ್ಮಿ ಈ ಬಾರಿ ಕೊಳ್ಳೇಗಾಲಕ್ಕೆ ಹೋಗಿ ತನ್ನ ತಂದೆ, ತಾಯಿ ಹಾಗೂ ಅಣ್ಣನ ಫೋಟೋ ಫ್ರೇಮ್ ಸಹ ಮಾಡಿಸಿಕೊಂಡು ಬಂದಿದ್ದಳು. ಈ ಫೋಟೋ ಇಟ್ಟು ಪೂಜೆ ಮಾಡಲು ಸಹ ಅಣಿಯಾಗುತ್ತಿದ್ದಳು. ಆದರೆ ತಾಯಿ,ತಂದೆ ಅಣ್ಣ ಇಲ್ಲದ ತವರು ಮನೆ ನೆನಸಿಕೊಂಡು ದುಃಖ ತಡೆಯಲಾರದೆ ಸಾವಿಗೆ ಶರಣಾಗಿದ್ದಾಳೆ.ಅಲ್ಲದೇ ಮಗುವನ್ನು ಕೂಡ ಬಿಟ್ಟು ಹೋಗಿದ್ದಾಳೆ.ನಮಗೆಲ್ಲ ಅವಳ ಸಾವು ನೋವು ತಂದಿದೆ ಅಂತಾ ಕುಟುಂಬ ಕಣ್ಣೀರು ಹಾಕುತ್ತಿದೆ.
ಕೇಂದ್ರದಿಂದ ಟೆಲಿ-ಮನಾಸ್: ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಟೆಲಿ-ಮನಾಸ್ ಮತ್ತು ಇತರ ರಾಷ್ಟ್ರೀಯ ಸೇವೆಗಳು ಸೇರಿದಂತೆ ಆತ್ಮಹತ್ಯೆ ಸಹಾಯವಾಣಿ ಸಂಖ್ಯೆಗಳನ್ನು ಹೊಂದಿದೆ.
