PMShri scheme in Kerala: ಕೇಂದ್ರ ಸರ್ಕಾರದ ಮಹತ್ವದ ಪಿಎಂಶ್ರೀ ಶಾಲಾ ಅಭಿವೃದ್ಧಿ ಯೋಜನೆಗೆ ಕೇರಳದಲ್ಲಿ ಬ್ರೇಕ್ ಬೀಳುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಆಡಳಿತಾರೂಢ ಎಲ್‌ಡಿಎಫ್‌ನ ಮಿತ್ರಪಕ್ಷವಾದ ಸಿಪಿಐನಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಪಿಎಂಶ್ರೀ ಯೋಜನೆಗೆ ಕೇರಳದಲ್ಲಿ ಅಪಸ್ವರ
ತಿರುವನಂತರಪುರ: ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಪಿಎಂಶ್ರೀಗೆ ಕೇರಳದಲ್ಲಿ ಅಧಿಕಾರದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ನ ಅತಿದೊಡ್ಡ ಪಕ್ಷವಾದ ಸಿಪಿಐ(ಎಂ) ನಾಲ್ವರು ಸಚಿವರು ವಿರೋಧ ವ್ಯಕ್ತಪಡಿಸಿದ್ದು, ಇದರಿಂದಾಗಿ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವ ಪಿಎಶ್ರೀ ಯೋಜನೆಯನ್ನು ಕೇರಳ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದಕ್ಕೆ ತಡೆ ನೀಡಲಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಅಕ್ಟೋಬರ್ 29 ಬುಧವಾರ ಅಂದರೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ವರದಿಯಾಗಿದೆ. ಸಿಎಂಐಎಂನ ಮಿತ್ರಪಕ್ಷವಾದ ಸಿಪಿಐನಿಂದ ಈ ಪಿಎಂಶ್ರೀ ಯೋಜನೆಗೆ ಭಾರಿ ವಿರೋಧ ವ್ಯಕ್ತವಾದ ನಂತರ ಸಿಪಿಐ(ಎಂ) ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ರಾಜ್ಯದಲ್ಲಿ ಯೋಜನೆಯ ಅನುಷ್ಠಾನವನ್ನು ಏಳು ಸದಸ್ಯರ ಸಂಪುಟ ಉಪಸಮಿತಿ ಪರಿಶೀಲಿಸಲಿದೆ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಚರ್ಚೆಗೆ 7 ಸದಸ್ಯರ ಸಂಪುಟ ಉಪಸಮಿತಿ ರಚನೆ ಮಾಡಿದ ಕೇರಳ ಸರ್ಕಾರ
ಪಿಎಂಶ್ರೀ ಯೋಜನೆ ರಾಜ್ಯಕ್ಕೆ ಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸುವ ಬಗ್ಗೆ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಯಾಗಲಿದ್ದು, ಕಂದಾಯ ಸಚಿವ ಕೆ. ರಾಜನ್, ಕೃಷಿ ಸಚಿವ ಪಿ. ಪ್ರಸಾದ್, ಜಲಸಂಪನ್ಮೂಲ ಸಚಿವೆ ರೋಶಿ ಆಗಸ್ಟೀನ್, ಕಾನೂನು ಸಚಿವ ಪಿ. ರಾಜೀವ್, ವಿದ್ಯುತ್ ಸಚಿವ ಕೆ. ಕೃಷ್ಣನ್‌ಕುಟ್ಟಿ ಮತ್ತು ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಅವರ ಇದರಲಿದ್ದಾರೆ. ಪಿಎಂಶ್ರೀ ಯೋಜನೆಗೆ ಸಂಬಂಧಿದಂತೆ ಎದ್ದಿರುವ ವಿವಾದಗಳು ಹಾಗೂ ಕಳವಳಗಳಿಗೆ ಸಂಬಂಧಿಸಿದಂತೆ ಸಮಿತಿ ವಿವರವಾದ ಪರಿಶೀಲನೆ ನಡೆಸಲಿದೆ. ಈ ಸಮಿತಿ ವರದಿ ಸಲ್ಲಿಸುವವರೆಗೆ ರಾಜ್ಯದಲ್ಲಿ ಪಿಎಂಶ್ರೀ ಯೋಜನೆ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ರಾಜ್ಯವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಮಿತ್ರಪಕ್ಷಗಳಲ್ಲಿ ಒಡಕು
ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್‌ಡಿಎಫ್‌ನಲ್ಲಿ ಒಡಕುಂಟಾಗಿದ್ದು, ಸಮತೋಲನವನ್ನು ಪುನಃಸ್ಥಾಪಿಸಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಈ ಸಮಿತಿ ನಡೆಸಲಿದೆ. ಈ ಸಮಿತಿಯಲ್ಲಿ ಇಬ್ಬರು ಸಿಪಿಐ(ಎಂ) ಸಚಿವರು, ಇಬ್ಬರು ಸಿಪಿಐ ಸಚಿವರು ಮತ್ತು ಕೇರಳ ಕಾಂಗ್ರೆಸ್ (ಎಂ)ನ ಒಬ್ಬರು, ಜನತಾದಳ (ಜಾತ್ಯತೀತ)ದ ಒಬ್ಬರು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ದಿಂದ ತಲಾ ಒಬ್ಬ ಪ್ರತಿನಿಧಿ ಇರಲ್ಲಿದ್ದಾರೆ. ಇದು ಕೇರಳದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಎಲ್ಲಾ ಪ್ರಮುಖ ಎಲ್‌ಡಿಎಫ್ ಘಟಕಗಳ ಪ್ರಾತಿನಿಧ್ಯವನ್ನು ವಹಿಸಲಿದೆ.
ಇದಕ್ಕೂ ಮೊದಲು ಸಿಪಿಐ(ಎಂ) ಪಿಎಂ ಶ್ರೀ ಯೋಜನೆಯಡಿ ಕೇಂದ್ರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಏಕಪಕ್ಷೀಯ ನಿರ್ಧಾರ ಮಾಡಿದೆ ಎಂದು ಸಿಪಿಐ ಮತ್ತು ಇತರ ಹಲವಾರು ಮಿತ್ರಪಕ್ಷಗಳು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದವು,ಪಕ್ಷದೊಳಗೆ ಸಾಕಷ್ಟು ಸಮಾಲೋಚನೆ ನಡೆಸದೆ ಈ ನಿರ್ಧಾರ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಈ ವಿಚಾರ ಕೇರಳದ ಸಮ್ಮಿಶ್ರ ಸರ್ಕಾರದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿತ್ತು. ಸಿಪಿಐ ಈ ಕ್ರಮವನ್ನು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆಯ ಉಲ್ಲಂಘನೆ ಎಂದು ಆರೋಪಿಸಿತ್ತು.
ಏನಿದು ಪಿಎಂಶ್ರೀ ಯೋಜನೆ?
ಕೇಂದ್ರ ಸರ್ಕಾರವು ಪ್ರಾರಂಭಿಸಿದ ಪಿಎಂ ಶ್ರೀ (ಪ್ರಧಾನ್ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯು ದೇಶಾದ್ಯಂತ ಮಾದರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. 2022ರಲ್ಲಿ ಈ ಯೋಜನೆ ಜಾರಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ 14,500 ಶಾಲೆಗಳನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅನುಷ್ಠಾನವನ್ನು ಪ್ರದರ್ಶಿಸುವ ಮಾದರಿ ಸಂಸ್ಥೆಗಳಾಗಿ ಮಾಡುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ.
ಆದರೆ, ಕೇರಳದ ಎಡಪಂಥೀಯ ಸರ್ಕಾರವು ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಜಾರಿಗೆ ತರಲು ಒಪ್ಪಿಕೊಂಡಿದ್ದಕ್ಕಾಗಿ ಮಿತ್ರಪಕ್ಷಗಳಿಂದ ಟೀಕೆಗಳನ್ನು ಎದುರಿಸಿದೆ. ಇದು ರಾಜ್ಯದ ಸಾರ್ವಜನಿಕ ಶಿಕ್ಷಣ ಮಾದರಿ ಮತ್ತು ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅದರ ಮಿತ್ರಪಕ್ಷಗಳು ಹೇಳಿಕೊಂಡಿವೆ.
ಎಲ್‌ಡಿಎಫ್ ಅಥವಾ ಕ್ಯಾಬಿನೆಟ್ ಅನ್ನು ಸಂಪರ್ಕಿಸದೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಸಂಬಂಧಿತ ಪಿಎಂಶ್ರೀ ಒಪ್ಪಂದಕ್ಕೆ ಸಹಿ ಹಾಕುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ನಾಲ್ವರು ಸಿಪಿಐ ಸಚಿವರಾದ ಕೆ ರಾಜನ್, ಪಿ ಪ್ರಸಾದ್, ಜಿಆರ್ ಅನಿಲ್ ಮತ್ತು ಜೆ ಚಿಂಚುರಾಣಿ ಬುಧವಾರ ನಡೆದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಇದಾದ ನಂತರ ಕೇರಳ ಸರ್ಕಾರ ಈ ಸಮಿತಿ ರಚಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ, ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಮತ್ತು ಎಲ್‌ಡಿಎಫ್ ಸಂಚಾಲಕ ಟಿಪಿ ರಾಮಕೃಷ್ಣನ್ ಸೇರಿದಂತೆ ಸಿಪಿಐ(ಎಂ)ನ ಉನ್ನತ ನಾಯಕರು ಬುಧವಾರ ಎಕೆಜಿ ಸೆಂಟರ್‌ನಲ್ಲಿ ಮುಚ್ಚಿದ ಬಾಗಿಲಿನ ಸಭೆ ನಡೆಸಿ ಮಿತ್ರಪಕ್ಷದೊಳಗೆ ಬಿಕ್ಕಟ್ಟನ್ನು ಶಮನಗೊಳಿಸಲು ಪ್ರಯತ್ನಿಸಿದರು ಎಂದು ವರದಿಯಾಗಿದೆ.
ಇದನ್ನೂ ಓದಿ: ವಿವಾಹಿತ ಮುಸ್ಲಿಂ ವ್ಯಕ್ತಿ ಜೊತೆ ಪ್ರೀತಿ: ಮಗಳ ಗೃಹ ಬಂಧನದಲ್ಲಿಟ್ಟ ಕೇರಳ ಸಿಪಿಎಂ ನಾಯಕ
ಇದನ್ನೂ ಓದಿ: ವಿಮಾನ 36000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಹೃದಯಾಘಾತ: ಪ್ರಯಾಣಿಕನ ಜೀವ ಉಳಿಸಿದ ಕೇರಳದ ನರ್ಸ್‌ಗಳು
