ಕಡಿಮೆ ರೈಲುಗಳಿಂದಾಗಿ ಯೆಲ್ಲೋ ಲೈನ್‌ನಲ್ಲಿ ಪ್ರಯಾಣಿಕರಿಗೆ ತೊಂದರೆ. ಒಂದು ರೈಲು ತಪ್ಪಿದರೆ 25 ನಿಮಿಷ ಕಾಯಬೇಕಾದ ಪರಿಸ್ಥಿತಿ. ಹೆಚ್ಚುವರಿ ದಂಡದ ಭಾರವೂ ಇದೆ.

ಮೊದಲ ಪ್ರಯಾಣದಲ್ಲೇ ಯೆಲ್ಲೋ ಲೈನ್‌ನಲ್ಲಿ ಅನುಭವಿಸಿದ ಗೊಂದಲದಿಂದ ಬೇಸತ್ತೊಬ್ಬ ಪ್ರಯಾಣಿಕ, ಮುಂದಿನ ಬಾರಿ ಮೆಟ್ರೋ ಪ್ರಯಾಣ ಬೇಡ ಎಂದು ತೀರ್ಮಾನಿಸಿದ್ದಾರೆ. ನಿಯಮ ಪ್ರಕಾರ, ಒಂದು ಸ್ಟೇಷನ್‌ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಳೆಯಲು ಅನುಮತಿ ಇಲ್ಲ. ಆದರೆ, ಕೇವಲ ಮೂರು ರೈಲುಗಳಿಂದ ಸಂಚಾರ ನಡೆಸುತ್ತಿರುವ ಯೆಲ್ಲೋ ಲೈನ್‌ನಲ್ಲಿ, ಒಂದು ರೈಲು ಮಿಸ್ ಮಾಡಿದರೆ ಮುಂದಿನ ರೈಲು ಬರಲು ಸರಾಸರಿ 25 ನಿಮಿಷ ಕಾಯಬೇಕಾಗಿದೆ.

ಇದೇ ಸಮಸ್ಯೆ ಸಿಲ್ಕ್ ಬೋರ್ಡ್ ಸ್ಟೇಷನ್‌ನಲ್ಲಿ ಒಬ್ಬ ಪ್ರಯಾಣಿಕನಿಗೆ ಎದುರಾಗಿದೆ. ಟಿಕೆಟ್ ಪಡೆದು ಒಳಗೆ ಹೋಗಿದ್ದ ಅವರು, ಜನಸಂದಣಿಯಿಂದ ಬಂದ ರೈಲು ಹತ್ತಲು ಸಾಧ್ಯವಾಗದೆ, ಮುಂದಿನ ರೈಲು ಬರಲು ಇಪ್ಪತೈದು ನಿಮಿಷ ಕಾಯಬೇಕಾಯಿತು. ಕಾಯಲು ಇಷ್ಟವಿಲ್ಲದೆ ವಾಪಸ್ ಹೊರಗೆ ಬರುವಾಗ, 20 ನಿಮಿಷ ಮೀರಿದ್ದಕ್ಕಾಗಿ 50 ರೂಪಾಯಿ ದಂಡ ವಿಧಿಸಲಾಯಿತು.

ರೈಲುಗಳ ಅಭಾವ, ಸಮಯ ನಷ್ಟ, ಜೊತೆಗೆ ದಂಡದ ಭಾರ – ಯೆಲ್ಲೋ ಲೈನ್‌ನಲ್ಲಿ ಪ್ರಯಾಣಿಕರಿಗೆ ದಿನದಿಂದ ದಿನಕ್ಕೆ ಹೊಸ ರೀತಿಯ ಗೊಂದಲಗಳು ಎದುರಾಗುತ್ತಿವೆ. ಹಳದಿ ಮಾರ್ಗದಲ್ಲಿ ರೈಲು ಸಂಖ್ಯೆ ಹೆಚ್ಚುವವರೆಗೂ ಬಸ್ ಪ್ರಯಾಣವೇ ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನಿಲ್ದಾಣಗಳ ಹೆಸರೇ ಅದಲು ಬದಲು ಬಸ್‌ ಪ್ರಯಾಣಿಕರು ಎಲ್ಲಿ ಬರಬೇಕು? ಮೆಟ್ರೋ ಪ್ರಯಾಣಿಕರು ಎಲ್ಲಿ ಇಳಿಬೇಕು!

ಇನ್ನು ಹಳದಿ ಮೆಟ್ರೋ ರೈಲಿನ ಪ್ರಯಾಣಿಕರು ಆರಂಭದಲ್ಲಿಯೇ ಸಮಸ್ಯೆಯನ್ನು ಎದುರಿಸುವಂತಾಗಿದೆ. ಎರಡು ಮೆಟ್ರೋ ನಿಲ್ದಾಣಗಳ ಹೆಸರು ಅದಲು-ಬದಲು ಆಗಿದೆ. ಈ ಕುರಿತಂತೆ ಬೆಂಗಳೂರು ದಕ್ಷಿಣ ಸಂಸದ, ತೇಜಸ್ವಿ ಸೂರ್ಯ ಕೂಡ ತನ್ನ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ಬರೆದುಕೊಂಡು ಅಸಮಾಧಾನ ತೋರಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶವನ್ನು ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಎಂದು ಉಲ್ಲೇಖಿಸಲಾಗಿದೆ. ಇನ್ನು ಕೋನಪ್ಪನ ಅಗ್ರಹಾರ ಪ್ರದೇಶವನ್ನು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಎಂದು ಬರೆಯಲಾಗಿದೆ. ಕೋನಪ್ಪನ ಅಗ್ರಹಾರ ಟಿಕೆಟ್ ಖರೀದಿಸಿದ್ರೆ ಎಲೆಕ್ಟ್ರಾನಿಕ್ ಸಿಟಿಗೆ ಹೋಗುತ್ತೀರಿ ನೀವು ಇಳಿಯಬೇಕಾದ ಪ್ರದೇಶದಿಂದ ಮುಂದೆ ಹೋಗುತ್ತೀರಿ. ಈಗ ಮೆಟ್ರೋ ಮತ್ತು ಬಸ್ ನಿಲ್ದಾಣಗಳು ಹೆಸರು ಅದಲು-ಬದಲು ಮಾಡಬೇಕು. ಇಲ್ಲವಾದರೆ ಗೊಂದಲ ಇದ್ದಿದ್ದೇ ಆಗಿದೆ.

ಯೆಲ್ಲೋ ಲೈನ್ ಪ್ರಯಾಣಿಕರಿಗೆ ಶುಭ ಸುದ್ದಿ!

ಹಳದಿ ಮಾರ್ಗಕ್ಕೆ ನಾಲ್ಕನೇ ರೈಲು ಸೆಟ್ ಸೇರ್ಪಡೆಗೊಳ್ಳುತ್ತಿದೆ. ಕೊಲ್ಕತ್ತಾದಿಂದ ನಗರಕ್ಕೆ ಬಂದಿರುವ ಈ ನಾಲ್ಕನೇ ರೈಲು ಸೆಟ್‌ನ ಒಂದು ಬೋಗಿ ಈಗಾಗಲೇ ತಲುಪಿದೆ. ಪ್ರಸ್ತುತ, ಯೆಲ್ಲೋ ಲೈನ್‌ನಲ್ಲಿ ಮೂರು ರೈಲುಗಳಿಂದ ಸಂಚಾರ ನಡೆಯುತ್ತಿದೆ. ಈ ತಿಂಗಳಲ್ಲೇ ನಾಲ್ಕನೇ ರೈಲು ಸೇವೆ ಪ್ರಾರಂಭಿಸುವ ಸಾಧ್ಯತೆ ಇದೆ. ಆರು ಬೋಗಿಗಳನ್ನೊಳಗೊಂಡ ನಾಲ್ಕನೇ ರೈಲು ಸೆಟ್‌ನ ರವಾನೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 3 ಬೋಗಿಗಳು ಮೆಟ್ರೋಗೆ ತಲುಪಿದ್ದು, ಉಳಿದ 3 ಬೋಗಿಗಳು ನಾಳೆ ರವಾನೆ ಆಗಲಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.