ಬೆಂಗಳೂರಿನ ತಿಲಕನಗರದಲ್ಲಿ ಸಲ್ಮಾ ಎಂಬ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಲ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು, ಆಕೆ ಬೇರೊಬ್ಬರೊಂದಿಗೆ ಸಂಪರ್ಕದಲ್ಲಿದ್ದಾಳೆಂಬ ಅನುಮಾನದಿಂದ ಕೊಲೆ ಮಾಡಿ, ಶವವನ್ನು ಆಟೋದಲ್ಲಿ ಸಾಗಿಸಿರುವುದು ತನಿಖೆಯಿಂದ ದೃಢಪಟ್ಟಿದೆ. 

ಬೆಂಗಳೂರು: ತಿಲಕನಗರದಲ್ಲಿ ಮಹಿಳೆ ಸಲ್ಮಾ ಹತ್ಯೆ ಪ್ರಕರಣದ ಹಿಂದೆ ನಿಗೂಢ ಸಂಬಂಧ ಮತ್ತು ಅನುಮಾನವೇ ಕಾರಣವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸುಬ್ರಹ್ಮಣಿ ಹಾಗೂ ಸೆಂಥಿಲ್ ಎಂಬ ಇಬ್ಬರು ಯುವಕರು ಸಲ್ಮಾ ಅವರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ತಿಲಕನಗರದ ನಿವಾಸಿಯಾಗಿದ್ದ ಮೃತ ಮಹಿಳೆ ಸಲ್ಮಾ (35) ಎಂಬ ಮಹಿಳೆ ಇಬ್ಬರು ಆರೋಪಿಗಳಾದ ಸುಬ್ರಹ್ಮಣಿ ಮತ್ತು ಸೆಂಥಿಲ್ ಇವರಿಬ್ಬರಿಗೂ ಪರಿಚಿತರಾಗಿದ್ದರು. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಸುಬ್ರಹ್ಮಣಿ ಮತ್ತು ಕೂಲಿ ಕಾರ್ಮಿಕನಾದ ಸೆಂಥಿಲ್ ಇಬ್ಬರೂ ಸಲ್ಮಾ ಅವರೊಂದಿಗೆ ಆಪ್ತ ಸಂಪರ್ಕದಲ್ಲಿದ್ದರು. ಇವರಿಬ್ಬರಿಗೂ ಸಲ್ಮಾ ಜೊತೆಗೆ ಅನೈತಿಕ ಸಂಬಂಧ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇತ್ತೀಚೆಗೆ ಸಲ್ಮಾ ಮತ್ತೊಬ್ಬನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂಬ ಅನುಮಾನದಿಂದ ಕೋಪಗೊಂಡ ಇಬ್ಬರು ಆರೋಪಿಗಳು ಸೇರಿ ಸಲ್ಮಾ ಅವರ ಹತ್ಯೆ ಮಾಡಿದ್ದಾರೆ ಎಂದು ತನಿಖೆಯಿಂದ ಪತ್ತೆಯಾಗಿದೆ.

ಮಧ್ಯರಾತ್ರಿ ನಡೆದ ಕೊಲೆ ಮತ್ತು ಶವ ಸಾಗಾಟ

ಸಲ್ಮಾಳ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿಯೇ ಕೊಲೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ನಡೆದ ಬಳಿಕ ಮಧ್ಯರಾತ್ರಿ ವೇಳೆ, ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು ರಾತ್ರಿ 1.30ರ ಸುಮಾರಿಗೆ ಆರೋಪಿಗಳು ಶವವನ್ನು ಆಟೋದಲ್ಲಿ ಇಟ್ಟು ಸ್ಥಳದಿಂದ ಸಾಗಿಸಿದ್ದಾರೆ. ಈ ಆಟೋ ಸುಮಾರು ಎರಡು ವರ್ಷಗಳಿಂದ ಅದೇ ಜಾಗದಲ್ಲಿ ನಿಂತಿದ್ದರೂ, ಶವ ಪತ್ತೆಯಾದಾಗ ಸ್ಥಳೀಯರು ಬೆಚ್ಚಿಬಿದ್ದರು. ನಿನ್ನೆ ಬೆಳಿಗ್ಗೆ ಆಟೋದಲ್ಲಿ ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಆಗ್ನೇಯ ವಿಭಾಗದ ಡಿಸಿಪಿ ಸಾ.ರಾ. ಪಾತಿಮಾ ಮಾಹಿತಿ

ನಿನ್ನೆ ತಿಲಕನಗರ ಠಾಣಾ ವ್ಯಾಪ್ತಿಯಲ್ಲಿ ನಿಂತಿದ್ದ ಆಟೋದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಯಿತು. ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ ಇದು ಕೊಲೆ ಪ್ರಕರಣವೆಂದು ದೃಢಪಟ್ಟಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ತನಿಖೆಯಲ್ಲಿ ಆರೋಪಿಗಳು ಕೊಲೆ ಮಾಡಿದ ಬಳಿಕ ಬೇರೆ ಜಿಲ್ಲೆಗೆ ಪರಾರಿಯಾಗಿದ್ದರು ಎಂಬುದು ಪತ್ತೆಯಾಗಿದೆ. ಇಬ್ಬರೂ ಕಾರ್ಪೆಂಟರ್ ಮತ್ತು ಪ್ಲಂಬರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸಲ್ಮಾ ಅವರು ಇತ್ತೀಚೆಗೆ ಬೇರೆ ವ್ಯಕ್ತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದುದರಿಂದ ಅನುಮಾನಗೊಂಡ ಆರೋಪಿಗಳು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಲ್ಕು ಮಕ್ಕಳ ಕಣ್ಣೀರು

ವಿಕ್ಟೋರಿಯಾ ಆಸ್ಪತ್ರೆಯ ಶವಗಾರದ ಮುಂದೆ ಸಲ್ಮಾ ಅವರ ಕುಟುಂಬಸ್ಥರು ಮತ್ತು ನಾಲ್ಕು ಮಕ್ಕಳು ಅಳುತ್ತಾ ನ್ಯಾಯಕ್ಕಾಗಿ ಬೇಡಿಕೊಂಡರು. ಒಂಬತ್ತು ತಿಂಗಳ ಹಿಂದೆ ಸಲ್ಮಾ ಅವರ ಪತಿಯ ನಿಧನವಾಗಿತ್ತು. ಈಗ ತಾಯಿಯ ಹತ್ಯೆಯಿಂದ ನಾಲ್ಕು ಮಕ್ಕಳು ಅನಾಥರಾಗಿದ್ದಾರೆ. ಹಿರಿಯ ಮಗಳು ಹೇಳುವಂತೆ, ಅಮ್ಮ ಅಕ್ಟೋಬರ್ 23ರಂದು ಮನೆ ಕೆಲಸಕ್ಕೆ ಹೋಗ್ತೇನೆ ಅಂತ ಹೇಳಿ ಹೊರಟರು. ಹಬ್ಬ ಆಚರಿಸೋಕೆ ಪಟಾಕಿ ಕೊಟ್ಟು ಹೋದರು. ಆದರೆ ಅವರು ಮರಳಿ ಬಂದಿಲ್ಲ. ಈಗ ಅವರ ಶವ ನೋಡ್ತಿದ್ದೇವೆ. ನಮಗೆ ನ್ಯಾಯ ಬೇಕು ಎಂದು ಆಕ್ರಂದನ ವ್ಯಕ್ತಪಡಿಸಿದರು.

ನ್ಯಾಯಕ್ಕಾಗಿ ಕುಟುಂಬದ ಬೇಡಿಕೆ

ಮೃತ ಸಲ್ಮಾ ಅವರ ಬಂಧುಗಳು ಮತ್ತು ನೆರೆಹೊರೆಯವರು ಪೊಲೀಸರು ತ್ವರಿತ ನ್ಯಾಯ ಒದಗಿಸಬೇಕು, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ತಿಲಕನಗರ ಪೊಲೀಸ್ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳಿಂದ ಹೆಚ್ಚಿನ ವಿಚಾರಣೆ ಮುಂದುವರಿಸಿದೆ. ತಿಲಕನಗರದ ಸಲ್ಮಾ ಹತ್ಯೆ ಪ್ರಕರಣವು ಪ್ರೇಮ, ಅನುಮಾನ ಮತ್ತು ಸಂಬಂಧದ ಕಹಿ ಕತೆಯಾಗಿದೆ. ಸುಬ್ರಹ್ಮಣಿ ಹಾಗೂ ಸೆಂಥಿಲ್ ಇಬ್ಬರು ಆರೋಪಿಗಳು ಒಬ್ಬ ತಾಯಿಯ ಜೀವ ತೆತ್ತಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ. ಈಗ ನಾಲ್ಕು ಮಕ್ಕಳು ತಾಯಿಯ ನೆನಪಿನಲ್ಲಿ ಕಣ್ಣೀರು ಸುರಿಸುತ್ತಿದ್ದು, ನ್ಯಾಯಕ್ಕಾಗಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.