ಸ್ಟಾಪ್‌ ಇಲ್ಲದ ಕಡೆ ಬಸ್‌ ನಿಲ್ಲಿಸಿದ್ದಕ್ಕಾಗಿ ಬಸ್‌ ಹಾಗೂ ಪ್ರಯಾಣಿಕರನ್ನು ಸಂಜಯ್‌ ನಗರ ಟ್ರಾಫಿಕ್‌ ಪೊಲೀಸರು ಸೀಜ್‌ ಮಾಡಿದ್ದಾರೆ. ಪ್ರಯಾಣಿಕರನ್ನು 30 ನಿಮಿಷ ಟ್ರಾಫಿಕ್‌ನಲ್ಲಿ ಸುತ್ತಾಡಿಸಿ, ಪರ್ಯಾಯ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಬಿಟ್ಟಿದ್ದಾರೆ. 

ಬೆಂಗಳೂರು (ಸೆ.1): ಸ್ಟಾಪ್‌ ಇಲ್ಲದ ಕಡೆ ಬಸ್‌ ನಿಲ್ಲಿಸಿದ್ದಕ್ಕಾಗಿ ಟ್ರಾಫಿಕ್‌ ಪೊಲೀಸ್‌ ಬಸ್‌ ಜೊತೆ, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನೂ ಸೀಜ್‌ ಮಾಡಿದ ಘಟನೆ ನಡೆದಿದೆ. ಸಂಜಯ್‌ ನಗರ ಟ್ರಾಫಿಕ್‌ ಪೊಲೀಸರ ದುಂಡಾವರ್ತನೆಗೆ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಚೇರಿಗಳಿಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಉಂಟಾಗಿದೆ. ಬೆಂಗಳೂರಿನ ಟ್ರಾಫಿಕ್‌ ಪೊಲೀಸರ ಅವಾಂತರಕ್ಕೆ ಕೊನೆಯೇ ಇಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಟ್ರಾಫಿಕ್‌ ಪೊಲೀಸ್‌ ಕಮೀಷನರ್‌ ನೋಡಲೇಬೇಕಾದ ಸ್ಟೋರಿ. ಟ್ರಾಫಿಕ್​ ಪೊಲೀಸರ ದುರ್ವತನೆಗೆ ಉತ್ತರ ನೀಡಲೇಬೇಕಾದ ವಿಚಾರ ಇದು ಎಂದು ಜನ ಹೇಳಿದ್ದಾರೆ. ಬೆಂಗಳೂರಿನ ಎಸ್ಟೀಮ್​ ಮಾಲ್​ ಮುಂದೆ ಸ್ಟಾಪ್​​ ನೀಡಿದ ಎಂಬ ಕಾರಣಕ್ಕೆ ಬಸ್​ ಒಳಗೆ ನುಗ್ಗಿದ ಕಾನ್ಸ್‌ಟೇಬಲ್‌, ಇಲ್ಲಿ ಸ್ಟಾಪ್​ ಕೊಡುವಂತಿಲ್ಲ ಎಂದು ಬಸ್‌ಡ್ರೈವರ್‌ಗೆ ಧಮಕಿ ಹಾಕಿದ್ದಾರೆ. ಬಳಿಕ ಇಡೀ ಬಸ್‌ ಹಾಗೂ ಅದರಲ್ಲಿದ್ದ ಪ್ರಯಾಣಿಕರನ್ನೂ ಕಾನ್ಸ್‌ಟೇಬಲ್‌ ಸೀಜ್‌ ಮಾಡಿದ್ದಾರೆ.

ಟ್ರಾಫಿಕ್‌ನಲ್ಲಿ 30 ನಿಮಿಷ ಸುತ್ತಾಟ

ಬಸ್ ಸ್ಟಾಪ್​​ ನೀಡಿದ ಎಂಬ ಒಂದೇ ಕಾರಣಕ್ಕೆ ಇಡೀ ಪ್ರಯಾಣಿಕರನ್ನು ಸೀಸ್​ ಮಾಡಿದ್ದು ಎಷ್ಟು ಸರಿ? ಎಂದು ಜನ ಪ್ರಶ್ನೆ ಮಾಡಿದ್ದಾರೆ. ಸ್ಟಾಪ್​ ನೀಡಿದ ಹಿನ್ನೆಲೆ ಬಸ್​ ಸೀಜ್‌ ಮಾಡುತ್ತೇವೆ ಎಂದು ಟ್ರಾಫಿಕ್‌ ಪೊಲೀಸ್‌ ಹೇಳಿದ್ದಾರೆ. ಸಂಜಯ್​ ನಗರ ಟ್ರಾಫಿಕ್​ ಇನ್ಸ್‌ಪೆಕ್ಟರ್‌ ಸೂಚನೆ ಮೇರೆಗೆ ಕಾನ್ಸ್‌ಟೇಬಲ್‌​​​ ಕುಮಾರ್​​​ ರಿಂದ ಬಸ್​ ಸೀಜ್‌ ಮಾಡಲಾಗಿದೆ.

30 ನಿಮಿಷ ಟ್ರಾಫಿಕ್​​​ ನಲ್ಲಿ ಸುತ್ತಾಡಿಸಿ ಸಂಜಯ್​ ನಗರ ಪೊಲೀಸ್​ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ಈ ವೇಳೆ ಪ್ರಯಾಣಿಕರ ಮನವಿಗೂ ಪೊಲೀಸರು ಬಗ್ಗಿಲ್ಲ. ಬಸ್‌ನಲ್ಲಿದ್ದರುವ ಬಹುತೇಕ ಸರ್ಕಾರಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು. ಈ ಹಂತದಲ್ಲಿ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಎಫ್‌ಐಆರ್‌ ಹಾಕುವ ಬೆದರಿಕೆ

ಪ್ರಯಾಣಿಕರ ಬೈಗುಳಕ್ಕೂ ಕೇರ್​​ ಮಾಡದೆ ಸಂಜಯ್​ ನಗರ ಪೊಲೀಸ್​ ಠಾಣೆ ಮುಂದೆ ಬಂದು ಬಸ್‌ ನಿಲ್ಲಿಸಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ರಸ್ತೆಯಲ್ಲಿ ಬಿಟ್ಟು ಇಲ್ಲಿಂದ ತೆರಳಿ ಎಂದು ಹೇಳಿದ್ದಾರೆ. ಪೊಲೀಸರ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ FIR ಮಾಡೋದಾಗಿ ಸಂಜಯ್​​ ನಗರ ಟ್ರಾಫಿಕ್​​ ಇನ್ಸ್​ಪೆಕ್ಟರ್ ಬೆದರಿಕೆ ಕೂಡ ಹಾಕಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ ಸೀಜ್‌

ಗೌರಿಬಿದನೂರು ಟು ಬೆಂಗಳೂರು ನಡುವೆ ಸಂಚರಿಸುವ , KSRTC ಬಸ್ ಅನ್ನು ಸೀಜ್‌ ಮಾಡಲಾಗಿತ್ತು. ಬಸ್ ಸೀಜ್ ಬಳಿಕ ಬೇರೆ ಬಸ್‌ನಲ್ಲಿ ಪ್ರಯಾಣಿಕರು ತೆರಳಿದ್ದು, ಸೀಜ್ ಆದ ಬಸ್‌ಅನ್ನು ಸ್ಟೇಷನ್ ‌ಬಳಿ ನಿಲ್ಲಿಸಿದ್ದಾರೆ. ಟ್ರಾಫಿಕ್ ‌ಪೊಲೀಸರ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.