ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಟುಂಬದೊಂದಿಗೆ ಸಫಾರಿಗೆ ತೆರಳಿದ್ದ ನಾಗರಬಾವಿ ನಿವಾಸಿ ನಂಜಪ್ಪ (45) ಎಂಬುವವರು, ಹುಲಿ ಮತ್ತು ಸಿಂಹಗಳನ್ನು ನೋಡುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವು.

ಬೆಂಗಳೂರು (ಸೆ.28): ಬೆಂಗಳೂರಿನ ಹೊರ ವಲಯದಲ್ಲಿರು ಕೃತಕ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಸಫಾರಿಗೆ ಹೋಗಿದ್ದ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಹುಲಿ, ಸಿಂಹಗಳನ್ನು ನೋಡುತ್ತಲೇ ಹೃದಯಾಘಾತ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಟ್ಟಿದ್ದಾರೆ.

ಬೆಂಗಳೂರಿನ ನಾಗರಬಾವಿಯ ನಿವಾಸಿ ನಂಜಪ್ಪ(45) ಮೃತ ವ್ಯಕ್ತಿ ಆಗಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇಂದು ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಫಾರಿಗೆ ಹೋಗಿದ್ದ ಪ್ರವಾಸಿಗನಿಗೆ ಹೃದಯಾಘಾತ ಸಂಭವಿಸಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎಂದಿನಂತೆ ಇಂದೂ ಕೂಡ ಸಫಾರಿ ಆರಂಭಿಸಲಾಗಿತ್ತು. ಭಾನುವಾರ ಆದ್ದರಿಂದ ಸಫಾರಿ ಹೆಚ್ಚು ಜನದಟ್ಟಣೆಯಿಂದ ಕೂಡಿತ್ತು. ಜನಸಂದಣಿ ನಡುವೆ ಟಿಕೆಟ್ ಖರೀದಿಸಿ ಸಫಾರಿ ಬಸ್ಸಿನಲ್ಲಿ ಕುಳಿತುಕೊಂಡು ಹೆಂಡತಿ, ಮಕ್ಕಳೊಂದಿಗೆ ಸಫಾರಿ ಎಂಜಾಯ್ ಮಾಡುತ್ತಿದ್ದಾರೆ.

ಹುಲಿ, ಸಿಂಹಗಳನ್ನು ನೋಡುತ್ತಿದ್ದ ಪ್ರವಾಸಿಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ದಿಢೀರ್ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಹೆಂಡತಿ ಮಕ್ಕಳು ಕೂಡಲೇ ಅವರನ್ನು ಎಬ್ಬಿಸಿ ಕೂರಿಸುವ ಪ್ರಯತ್ನ ಮಾಡಿದ್ದಾರೆ. ನೀರು ಕುಡಿಸುವ ಯತ್ನ ಮಾಡಿದ್ದು, ಕೆಲವರು ಎದೆಯ ಮೇಲೆ ಒತ್ತುತ್ತಾ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಇದರ ಜೊತೆಗೆ ಬನ್ನೇರುಘಟ್ಟ ಮೃಗಾಲಯದ ಆಂಬುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್‌ನಲ್ಲಿ ಕೂಡಲೇ ಹತ್ತಿರದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಂಡತಿ, ಮಕ್ಕಳ ಮಡಿಲಲ್ಲೇ ಜೀವ ಹೋಯ್ತು:

ಕುಟುಂಬದಲ್ಲಿ ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ, ವಾರಕ್ಕೊಮ್ಮೆ ಔಟಿಂಗ್ ಹೋಗುವ ಹವ್ಯಾಸ ಮಾಡಿಕೊಂಡಿದ್ದರು. ಮಕ್ಕಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನ ತೋರಿಸುವ ಉದ್ದೇಶದಿಂದ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ಬನ್ನೇರುಘಟ್ಟಕ್ಕೆ ಬಂದಿದ್ದರು. ಆದರೆ, ದುರಾದೃಷ್ಟವೆಂಬಂತೆ ಹೆಂಡತಿ ಮಕ್ಕಳು ಜೊತೆಗಿರುವಾಗಲೇ ಎಲ್ಲರೂ ಸಂತಸದ ಕ್ಷಣವನ್ನು ಕಳೆಯುವ ವೇಳೆಯೇ ನಂಜಪ್ಪ ಅವರು ಕುಸಿದು ಬಿದ್ದಿದ್ದಾರೆ. ಇವರನ್ನು ಮಡಿಲಿಗೆ ಹಾಕಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆಯೇ ನಂಜಪ್ಪ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎನ್ನಲಾಗುತ್ತಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.