ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ 24 ವರ್ಷದ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ತಂದೆ ಗಣೇಶ ಮನು ಆಚಾರಿ ಪೊಲೀಸರಿಗೆ ದೂರು ನೀಡಿದ್ದು, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉತ್ತರ ಕನ್ನಡ (ಆ.20): ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದವಾಗಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ
ಮೃತಪಟ್ಟ ಯುವತಿಯನ್ನು ರಮ್ಯಾ ಸಂಕೇತ್ ಆಚಾರಿ (24) ಎಂದು ಗುರುತಿಸಲಾಗಿದೆ. ಹೊನ್ನಾವರ ತಾಲೂಕಿನ ಮುಗ್ವಾ ಮೂಲದವರಾದ ರಮ್ಯಾ, ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಸಂಕೇತ ಆಚಾರಿ ಎಂಬ ಯುವಕನನ್ನು ಪ್ರೀತಿಸಿ ಕಳೆದ ಏಪ್ರಿಲ್ 21 ರಂದು ವಿವಾಹವಾಗಿದ್ದರು. ಮದುವೆಯಾದ ಬಳಿಕ ದಂಪತಿ ಅಂಕೋಲಾದ ಹಟ್ಟಿಕೇರಿಯಲ್ಲೇ ವಾಸವಾಗಿದ್ದರು.
ನಿನ್ನೆ ಸಂಜೆ ರಮ್ಯಾ ಅವರು ತಮ್ಮ ಮನೆಯಲ್ಲಿ ಫ್ಯಾನ್‌ಗೆ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಕೂಡಲೇ ಪತಿ ಸಂಕೇತ ಆಚಾರಿ ಅವರು ಪತ್ನಿಯನ್ನು ಅಂಕೋಲಾ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಸಾವನ್ನಪ್ಪಿದ್ದಾರೆ.
ಪೋಷಕರಿಂದ ದೂರು
ಮಗಳ ಅಸಹಜ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತರ ತಂದೆ ಗಣೇಶ ಮನು ಆಚಾರಿ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳ ಸಾವಿಗೆ ಕಾರಣವೇನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಯಾವುದೇ ಕಾರಣಕ್ಕೂ ಈ ರೀತಿಯ ಅಹಿತಕರ ಘಟನೆ ನಡೆಯುವ ವ್ಯಕ್ತಿತ್ವ ರಮ್ಯಾ ಅವರದ್ದಾಗಿರಲಿಲ್ಲ ಎಂದು ಪೋಷಕರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮದುವೆಯಾದ ಕೇವಲ 4 ತಿಂಗಳೊಳಗೆ ನಡೆದ ಈ ದುರಂತದ ಕುರಿತು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಮದುವೆ ನಂತರ ದಂಪತಿ ನಡುವೆ ಯಾವುದೇ ವಿವಾದಗಳಿತ್ತೇ ಅಥವಾ ಇನ್ಯಾವುದಾದರೂ ಕಾರಣ ಇತ್ತೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
