ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಬಳಿ, ಅವೈಜ್ಞಾನಿಕ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಕಾರೊಂದು ಬಿದ್ದು ಚಾಲಕ ಮತ್ತು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಈ ಮಾರ್ಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಬೆಂಗಳೂರು/ಆನೇಕಲ್ (ಅ.10): ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ರಸ್ತೆ ಕಾಮಗಾರಿಗಳ ಕಾರಣದಿಂದಾಗಿ ಮತ್ತೊಂದು ಅನಾಹುತ ಸಂಭವಿಸಿದೆ. ಹಳೆ ಚಂದಾಪುರ ಸಮೀಪ ಹೆದ್ದಾರಿ ಕಾಮಗಾರಿಗೆಂದು ತೆಗೆದಿದ್ದ ಆಳವಾದ ಗುಂಡಿಯೊಂದಕ್ಕೆ ನಿಯಂತ್ರಣ ಕಳೆದುಕೊಂಡ ಕಾರೊಂದು ಬಿದ್ದು, ಕಾರು ಚಾಲಕ ಮತ್ತು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಂದಗತಿಯ ಕಾಮಗಾರಿಯಿಂದಾಗಿ ವಾಹನ ಸವಾರರು ಪ್ರತಿದಿನ ಪ್ರಾಣಭೀತಿಯಲ್ಲೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುರಕ್ಷತಾ ಕ್ರಮಗಳಿಲ್ಲದ ಕಾಮಗಾರಿ:

ಕಳೆದೊಂದು ವರ್ಷದಿಂದಲೂ ಈ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿರುವ ಗುತ್ತಿಗೆದಾರರು ಅಥವಾ ಹೆದ್ದಾರಿ ಪ್ರಾಧಿಕಾರವು ಯಾವುದೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕನಿಷ್ಠ ಪಕ್ಷ ಸರಿಯಾದ ಸೂಚನಾ ಫಲಕಗಳು ಅಥವಾ ಎಚ್ಚರಿಕೆ ದೀಪಗಳನ್ನು ಅಳವಡಿಸದೆ ಇರುವುದು ಘಟನೆಗೆ ಮುಖ್ಯ ಕಾರಣವಾಗಿದೆ. ರಾತ್ರಿ ವೇಳೆಯಲ್ಲಿ ಮತ್ತು ಮಳೆ ಬಂದಾಗ ರಸ್ತೆಯ ಅಂಚು ಎಲ್ಲಿದೆ, ವಾಹನಗಳು ಸಂಚರಿಸಬೇಕಾದ ಮಾರ್ಗ ಯಾವುದು, ಆಳವಾದ ಗುಂಡಿ ಎಲ್ಲಿದೆ ಎಂದು ತಿಳಿಯದೆ ವಾಹನ ಸವಾರರು ಪರದಾಡುತ್ತಿದ್ದಾರೆ.

ಮಳೆ ಬಂದರೆ ನೀರು ತುಂಬಿ ಅವಾಂತರ:

ಮಳೆಗಾಲ ಆರಂಭವಾದಾಗಿನಿಂದ ಇಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕಾಮಗಾರಿಗೆ ತೆಗೆದಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು, ರಸ್ತೆ ಮತ್ತು ಗುಂಡಿಗಳ ವ್ಯತ್ಯಾಸವೇ ತಿಳಿಯದಂತಾಗುತ್ತದೆ. ಇದರಿಂದ ರಸ್ತೆಯ ಅಂಚಿನಲ್ಲಿ ಹೋಗುತ್ತಿದ್ದ ವಾಹನಗಳು, ವಿಶೇಷವಾಗಿ ದ್ವಿಚಕ್ರ ವಾಹನಗಳು ಗುಂಡಿಗೆ ಬಿದ್ದು, ಪ್ರತಿದಿನವೂ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಅನೇಕ ವಾಹನ ಸವಾರರು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಮತ್ತು ಸ್ಥಳೀಯ ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿ:

ಅವೈಜ್ಞಾನಿಕವಾಗಿ ರಸ್ತೆಯನ್ನು ಕಿರಿದುಗೊಳಿಸಿರುವುದರಿಂದ ಮತ್ತು ಕಾಮಗಾರಿಯ ಸಾಮಗ್ರಿಗಳನ್ನು ರಸ್ತೆಯಲ್ಲೇ ಇಟ್ಟಿರುವುದರಿಂದ ಈ ಮಾರ್ಗದಲ್ಲಿ ನಿತ್ಯವೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಾಹನಗಳು ನಿಧಾನವಾಗಿ ತೆವಳುತ್ತಾ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗುತ್ತಿದೆ. ಆನೇಕಲ್, ಚಂದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಮತ್ತು ಈ ಹೆದ್ದಾರಿಯನ್ನು ಬಳಸುವ ಸಾವಿರಾರು ಪ್ರಯಾಣಿಕರು ಈ ದುಃಸ್ಥಿತಿಯಿಂದಾಗಿ ರೋಸಿ ಹೋಗಿದ್ದಾರೆ.

ಸಾರ್ವಜನಿಕರ ಆಗ್ರಹ:

ಕೂಡಲೇ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತುಕೊಂಡು, ಗುತ್ತಿಗೆದಾರರಿಗೆ ಅಗತ್ಯ ಸೂಚನೆಗಳನ್ನು ನೀಡಿ, ಯುದ್ಧೋಪಾದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಸುರಕ್ಷತೆಗಾಗಿ ಗುಂಡಿಗಳ ಸುತ್ತ ಸೂಕ್ತ ಬ್ಯಾರಿಕೇಡ್‌ಗಳು ಮತ್ತು ಬೆಳಕಿನ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಜೀವಕ್ಕೆ ಅಪಾಯ ತಂದೊಡ್ಡಿರುವ ಈ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮತ್ತು ವಾಹನ ಸವಾರರು ಒತ್ತಾಯಿಸಿದ್ದಾರೆ.