Priyank Kharge and Nara Lokesh Trade Barbs Over Bengaluru Potholes IT Shift ಬೆಂಗಳೂರಿನ ರಸ್ತೆ ಗುಂಡಿ ಮತ್ತು ಟ್ರಾಫಿಕ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಂಧ್ರ ಸಚಿವ ನಾರಾ ಲೋಕೇಶ್ ಐಟಿ ಕಂಪನಿಗಳಿಗೆ ತಮ್ಮ ರಾಜ್ಯಕ್ಕೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು (ಅ.3): ಸಿಲಿಕಾನ್ ಸಿಟಿಯ ಮೂಲಸೌಕರ್ಯ ನ್ಯೂನತೆಗಳು ರಾಜಕೀಯ ಜಗಳಕ್ಕೆ ಮತ್ತೆ ವೇದಿಕೆ ಒದಗಿಸಿವೆ. ಮುಖ್ಯವಾಗಿ ಬೆಂಗಳೂರಿನ ರಸ್ತೆ ಗುಂಡಿ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪದೇ ಪದೇ ಕರ್ನಾಟಕವನ್ನು ಕೆಣಕುತ್ತಿರುವ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಮತ್ತು ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನಡುವೆ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಭಾರಿ ಮಾತಿನ ಸಮರವೇ ನಡೆದಿದೆ.
ಐಟಿ ಕಂಪನಿಗಳಿಗೆ ಲೋಕೇಶ್ 'ಓಪನ್ ಇನ್ವಿಟೇಷನ್'
ಕಳೆದ ತಿಂಗಳು ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಗುಂಡಿಗಳಿಂದ ಬೇಸತ್ತು ನಗರ ಬಿಡುವ ಬಗ್ಗೆ ಬ್ಲ್ಯಾಕ್ ಬಕ್ ಸಿಇಒ ಟ್ವೀಟ್ ಮಾಡಿದ್ದರು. ಆಗಲೇ ನಾರಾ ಲೋಕೇಶ್ (ಆಂಧ್ರ ಸಿಎಂ ಪುತ್ರ) ಅವರು ಐಟಿ ಕಂಪನಿಗಳಿಗೆ ಆಂಧ್ರಕ್ಕೆ ಬರುವಂತೆ ಆಹ್ವಾನ ನೀಡಿದ್ದರು.
ಇದೀಗ ಮತ್ತೊಮ್ಮೆ, ಬೆಂಗಳೂರಿನ ಉತ್ತರ ಭಾಗಕ್ಕೆ ಐಟಿ ಕಂಪನಿಗಳು ಶಿಫ್ಟ್ ಆಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿರುವ ಲೋಕೇಶ್, "ಉತ್ತರ ಅನ್ನೋದು ಚೆನ್ನಾಗಿದೆ, ಇನ್ನೂ ಸ್ವಲ್ಪ ಉತ್ತರಕ್ಕೆ ಬನ್ನಿ. ಅನಂತಪುರವು ಅತ್ಯುತ್ತಮ ಆಯ್ಕೆಯಾಗಬಹುದು" ಎಂದು ಹೊಸ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಅವರು ಬೆಂಗಳೂರಿನ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಕರೆದೊಯ್ಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆಯವರಿಂದ ತಿರುಗೇಟು
ನಾರಾ ಲೋಕೇಶ್ ಅವರ ಈ ನಿರಂತರ ಕುಟುಕುವಿಕೆಗೆ ಪ್ರಿಯಾಂಕ್ ಖರ್ಗೆ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. "ದುರ್ಬಲ ವ್ಯವಸ್ಥೆ ಇರೋರು ಬಲಶಾಲಿ ವ್ಯವಸ್ಥೆಗಳ ಮೇಲೆ ಅವಲಂಬಿಸೋದು ಸಹಜ. ಅದರಲ್ಲಿ ತಪ್ಪೇನಿಲ್ಲ. ಆದರೆ ಆ ಪ್ರಯತ್ನ ನಿರಾಶಾದಾಯಕ ಹಂತಕ್ಕೆ ಹೋದಾಗ ಮತ್ತಷ್ಟು ದುರ್ಬಲತೆ ಉಂಟಾಗಬಹುದು" ಎಂದು ಟಾಂಗ್ ಕೊಟ್ಟಿದ್ದಾರೆ.
ಖರ್ಗೆ ಅವರು ಬೆಂಗಳೂರಿನ ಪ್ರಗತಿ ಮತ್ತು ಸಾಧನೆಗಳ ದೀರ್ಘ ಪಟ್ಟಿಯನ್ನೇ ನೀಡಿದ್ದಾರೆ: ಬೆಂಗಳೂರು ಜಿಡಿಪಿ 2035ರವರೆಗೆ ವಾರ್ಷಿಕ 8.5% ರಷ್ಟು ವೇಗವಾಗಿ ಬೆಳೆಯಲಿದೆ. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಲಿದೆ. ಬೆಂಗಳೂರಿನ ಆಸ್ತಿ ಮಾರುಕಟ್ಟೆ 2025ರಲ್ಲಿ 5% ಏರಿಕೆ ಕಾಣಲಿದೆ. Savills Growth Hubs Index ಪ್ರಕಾರ, 2033ರ ವೇಳೆಗೆ ಬೆಂಗಳೂರು ಜಾಗತಿಕ ಪೈಪೋಟಿದಾರರನ್ನು ಮೀರಿಸಲಿದೆ. 2025ರಲ್ಲಿ ಬೆಂಗಳೂರಿನ ನಗರ ಸಮೂಹದಲ್ಲಿ ಸುಮಾರು 14.40 ಮಿಲಿಯನ್ ಜನರು ವಾಸಿಸುವರು ಎಂದು ಅಂದಾಜಿಸಲಾಗಿದೆ. ನಾವು ಅನುಭವಿಸುತ್ತಿರುವ ಈ ವೇಗದ ಬೆಳವಣಿಗೆಗೆ ಮೂಲಸೌಕರ್ಯವನ್ನು ಸರ್ಕಾರ ನಿರ್ಮಿಸುತ್ತಿದೆ ಮತ್ತು ಮುಂದುವರೆಯುತ್ತದೆ ಎಂದು ಖರ್ಗೆ ಬರೆದುಕೊಂಡಿದ್ದಾರೆ.
'ರಸ್ತೆ ಗುಂಡಿಗಳು ಅಹಂಕಾರದಂತೆ' - ಲೋಕೇಶ್ ಮರು ಟಕ್ಕರ್
ಖರ್ಗೆಯವರ ಸಾಧನೆಯ ಪಟ್ಟಿಗೆ ಲೋಕೇಶ್ ಮತ್ತೊಮ್ಮೆ ರಸ್ತೆ ಗುಂಡಿ ವಿಚಾರವನ್ನೇ ಎಳೆದು ಟಕ್ಕರ್ ಕೊಟ್ಟಿದ್ದಾರೆ. "ಭಾರತದ ಕಿರಿಯ ರಾಜ್ಯವಾಗಿರುವ ನಾವು, ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರತಿಯೊಂದು ಅವಕಾಶವನ್ನೂ ಹುಡುಕುತ್ತಿದ್ದೇವೆ. ಅಹಂಕಾರವು ನಮ್ಮ ರಸ್ತೆಯ ಗುಂಡಿಗಳಂತೆ. ಅದನ್ನು ಮೊದಲು ಸರಿಪಡಿಸಬೇಕು, ಇಲ್ಲದಿದ್ದರೆ ನಮ್ಮ ಪ್ರಗತಿಯ ಪ್ರಯಾಣವೇ ಅಡಕವಾಗುತ್ತದೆ" ಎಂದು ಲೋಕೇಶ್ ಪೋಸ್ಟ್ ಮಾಡಿದ್ದಾರೆ.
ಸದ್ಯ ಬೆಂಗಳೂರು ರಸ್ತೆ ಗುಂಡಿಗಳ ವಿಚಾರದಲ್ಲಿ ದೊಡ್ಡ ಮಟ್ಟದ ಸುದ್ದಿಯಲ್ಲಿದೆ. ಐಟಿ ಕಂಪನಿಗಳು ಟೀಕೆ ಮಾಡಿದ್ದವು. ನಗರ ಬಿಟ್ಟು ಬೇರೆ ಕಡೆ ಶಿಫ್ಟ್ ಆಗ್ತೇವೆ ಅಂತ ಕಾಮೆಂಟ್ ಮಾಡಿದ್ದರು. ಇದೇ ಅವಕಾಶವನ್ನು ಬಳಸಿಕೊಳ್ಳಲು ನಾರಾ ಲೋಕೇಶ್ ಪ್ರಯತ್ನ ಮಾಡಿದ್ದಾರೆ. ನಗರದ ಕಂಪನಿಗಳನ್ನ ತಮ್ಮ ರಾಜ್ಯಕ್ಕೆ ಕರೆದೊಯ್ಯುವ ಪ್ರಯತ್ನಕ್ಕೆ ಆಂಧ್ರ ಸಚಿವ ಕೈಹಾಕಿದ್ದಾರೆ.
