ಪರೀಕ್ಷೆಗೆಂದು ಹೋಗಿದ್ದ ಪಲ್ಲವಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪಲ್ಲವಿ, ಇಷ್ಟಪಟ್ಟವನೊಂದಿಗೆ ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಕಲಬುರಗಿ: ಪರೀಕ್ಷೆ ಬರೆಯಲು ಹೋಗಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಪಲ್ಲವಿ, ಕಾಣೆಯಾಗಿಲ್ಲ. ಇಷ್ಟಪಟ್ಟವನೊಂದಿಗೆ ಮದುವೆಯಾಗಿದ್ದೇನೆ. ಇಲ್ಲಿಯವರೆಗೆ ನಾನು ಸುರಕ್ಷಿತವಾಗಿದ್ದು, ಮುಂದೇನಾದ್ರು ಆದರೆ ಕುಟುಂಬಸ್ಥರು ಮತ್ತು ಹಿಂದೂ ಸಂಘಟನೆ ಕಾರಣ ಎಂದು ಪಲ್ಲವಿ ಹೇಳಿದ್ದಾರೆ. ಕಲಬುರಗಿ ಖಾಸಗಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಪಲ್ಲವಿ ಜುಲೈ 23ರಂದು ಪರೀಕ್ಷೆ ಹೋಗುವದಾಗಿ ಹೇಳಿ ಬಂದಿದ್ದ ಮನೆಗೆ ಹಿಂದಿರುಗಿ ಬಂದಿರಲಿಲ್ಲ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬರು ಬಿ. ಗ್ರಾಮದ ನಿವಾಸಿಯಾಗಿರುವ ಪಲ್ಲವಿ ಜೈನ ಸಮುದಾಯಕ್ಕೆ ಸೇರಿದ್ದು, ಅದೇ ಊರಿನ ಮಶಾಕ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಜುಲೈ 23ರಂದು ಕಾಣೆಯಾಗಿದ್ದ ಪಲ್ಲವಿ, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಎಲ್ಲರ ಮುಂದೆ ಕಾಣಿಸಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಮಶಾಕ್‌ನೊಂದಿಗೆ ಮದುವೆಯಾಗಿರೋದಾಗಿ ಪಲ್ಲವಿ ಹೇಳಿಕೊಂಡಿದ್ದಾರೆ.
ಮಶಾಕ್ ಪಕ್ಕ ಕುಳಿತು ಪಲ್ಲವಿ ಹೇಳಿದ್ದೇನು?
ನಾನು ಕಲಬುರಗಿಯ ಕೊಹಿನೂರು ಕಾಲೇಜಿನಲ್ಲಿ ಬಿಎಸ್‌ಸಿ 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನಾನು ಕಾಣೆಯಾಗಿದ್ದೇನೆ ಎಂದು ಪೋಷಕರು ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಇಷ್ಟಪಟ್ಟ ಹುಡುಗ ಮಶಾಕ್ ಜೊತೆ ಸ್ವಯಿಚ್ಛೆಯಿಂದ ಬಂದಿದ್ದೇನೆ. ಅವನೊಂದಿಗೆ ಮದುವೆ ಸಹ ಆಗಿದ್ದೇನೆ. ನಾನು ಬಂದಿರೋದಕ್ಕೆ ಮಶಾಕ್ ಗೆಳೆಯರು ಮತ್ತು ಅವರ ಕುಟುಂಬಕ್ಕೆ ತೊಂದರೆಯನ್ನು ನೀಡಲಾಗುತ್ತಿದೆ. ಯಾರಿಗೂ ತೊಂದರೆ ಕೊಡಬೇಡಿ. ಇದರಲ್ಲಿ ಅವರ ಹಸ್ತಕ್ಷೇಪವಿಲ್ಲ. ಇದು ನಮ್ಮಿಬ್ಬರ ನಿರ್ಧಾರವಾಗಿದೆ ಎಂದು ಪಲ್ಲವಿ ಮನವಿ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರು ಮತ್ತು ಹಿಂದೂ ಸಂಘಟನೆಯವರೇ ಕಾರಣ
ನಾನು ಮತ್ತು ಮಶಾಕ್ ಪ್ರೀತಿಸುತ್ತಿರುವ ವಿಷಯ ಪೋಷಕರಿಗೆ ಗೊತ್ತಾಯ್ತು. ಈ ವಿಷಯ ತಿಳಿದ ಕೂಡಲೇ ಪೋಷಕರು ನಾನು ಕಾಲೇಜಿಗೆ ಹೋಗುವುದನ್ನು ತಡೆಯಲಾಯ್ತು. ಪೋಷಕರು ಪ್ರತಿದಿನ ನನಗೆ ಕಿರುಕುಳ ನೀಡಲು ಆರಂಭಿಸಿದರು. ಪೋಷಕರ ಹಿಂಸೆಯನ್ನು ತಾಳಲಾರದೇ ನಾನು ಮಶಾಕ್ ಜೊತೆ ಬಂದಿದ್ದೇನೆ. ಇದೀಗ ಮಶಾಕ್ ಜೊತೆಯಲ್ಲಿಯೇ ಮದುವೆಯಾಗಿ ಚೆನ್ನಾಗಿಯೂ ಇದ್ದೇನೆ. ಇಂದು ಬೆಳಗ್ಗೆ ಹಿಂದೂ ಸಂಘಟನೆಗಳು ಇದು ಲವ್ ಜಿಹಾದ್ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಮ್ಮ ಪೋಷಕರ ತಲೆಗೂ ಇದೇ ವಿಷಯ ತುಂಬುವ ಪ್ರಯತ್ನ ನಡೆದಿದೆ. ನಾವಿಬ್ಬರು ಚೆನ್ನಾಗಿದ್ದು, ನಮಗೆ ಯಾವುದೇ ತೊಂದರೆ ಸಹ ಆಗಿಲ್ಲ. ಇನ್ಮುಂದೆ ಏನಾದ್ರೂ ತೊಂದರೆಯಾದ್ರೆ ನಮ್ಮ ಕುಟುಂಬಸ್ಥರು ಮತ್ತು ಹಿಂದೂ ಸಂಘಟನೆಯವರೇ ಕಾರಣ ಎಂದು ಪಲ್ಲವಿ ಹೇಳಿದ್ದಾರೆ.
ಪಲ್ಲವಿ ಪೋಷಕರು ಹೇಳೋದೇನು?
ಪರೀಕ್ಷೆಗೆ ಹೋದ ಮಗಳು ಮನೆಗೆ ಬರಲಿಲ್ಲ. ಮಶಾಕ್ ಜೊತೆ ಮಾತನಾಡುವ ವಿಷಯ ನಮಗೂ ಗೊತ್ತಾಗಿತ್ತು. ಹುಡುಗನನ್ನು ಕರೆಸಿ ಬುದ್ಧಿವಾದ ಸಹ ಹೇಳಲಾಗಿತ್ತು. ನಮ್ಮ ಮಗಳು ನಮಗೆ ಬೇಕು. ಆಕೆಯನ್ನು ಹುಡುಕಿ ಕೊಡಿ. ಮಗಳು ಮತ್ತೆ ನಮ್ಮೊಂದಿಗೆ ಬರುತ್ತಾಳೆ ಎಂಬ ನಂಬಿಕೆ ನಮಗಿದೆ. ಒಂದು ವೇಳೆ ಮಗಳ ಮನಸ್ಸನ್ನು ಅವರು ಬದಲಿಸಿದ್ರೆ ಏನು ಮಾಡಲು ಆಗಲ್ಲ ಎಂದು ಪಲ್ಲವಿ ಪೋಷಕರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.

ಇದು ಲವ್ ಜಿಹಾದ್ ಎಂದ ಹಿಂದೂ ಸಂಘಟನೆ
ಈ ಘಟನೆ ಲವ್ ಜಿಹಾದ್ ಎಂದು ಸ್ಥಳೀಯ ಹಿಂದೂ ಸಂಘಟನೆ ಮುಖಂಡ ಆರೋಪಿಸಿದ್ದಾರೆ. ಯುವತಿಯ ಮೊಬೈಲ್ ಹೈದರಾಬಾದ್‌ನಲ್ಲಿ ಸ್ವಿಚ್ಛ್ ಆಫ್ ಆಗಿದ್ದು, ಹುಡುಕುವ ಕೆಲಸ ನಡೆಯುತ್ತಿದೆ. ಹುಡುಗ ಹುಬ್ಬಳ್ಳಿ ಮೂಲದವನು ಎಂದು ಹೇಳಿ ಪೊಲೀಸರು ದಾರಿ ತಪ್ಪಿಸುತ್ತಿದ್ದಾರೆ. ಆದ್ರೆ ಪೋಷಕರು ಹುಡುಗ ತಮ್ಮದೇ ಗಬ್ಬರೂ ಗ್ರಾಮದವನು ಎಂದು ಹೇಳ್ತಿದ್ದಾರೆ. ಪೊಲೀಸರು ಹುಡುಗ-ಹುಡುಗಿಯನ್ನ ಶೀಘ್ರವೇ ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪರೀಕ್ಷೆಗೂ ಯುವತಿ ಜೊತೆ ಕುಟುಂಬಸ್ಥರು ಬಂದಿದ್ದರು. ಕಾಲೇಜಿನೊಳಗೆ ಹೋದ ಯುವತಿ ಹಿಂದಿರುಗಿ ಬಂದಿರಲಿಲ್ಲ. ಇದೀಗ ವಿಡಿಯೋ ಮೂಲಕ ಯುವತಿ ಸ್ಪಷ್ಟನೆ ನೀಡಿದ್ದಾರೆ.
