ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಲಾಪತಾ ಲೇಡಿಸ್‌ ಹಿಂದಿ ಚಿತ್ರದ ರೀತಿಯಲ್ಲೇ ಅವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರ ನೀಡಬೇಕು ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್‌ ಒತ್ತಾಯಿಸಿದ್ದಾರೆ.

ನವದೆಹಲಿ: ದಿಢೀರ್‌ ರಾಜೀನಾಮೆ ಬಳಿಕ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಲಾಪತಾ ಲೇಡಿಸ್‌ ಹಿಂದಿ ಚಿತ್ರದ ರೀತಿಯಲ್ಲೇ ಅವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರ ನೀಡಬೇಕು ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ ಜು.22ರಂದು ಜಗದೀಪ್ ಧನಕರ್ ರಾಜೀನಾಮೆ ನೀಡಿದರು. ಅಂದಿನಿಂದ ಇಂದಿನವರೆಗೆ ಅವರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರು ತಮ್ಮ ಅಧಿಕೃತ ನಿವಾಸದಲ್ಲಿಯೂ ಇಲ್ಲ. ನಾನು ಲಾಪತಾ ಲೇಡಿಸ್‌ ಬಗ್ಗೆ ಕೇಳಿದ್ದೇನೆ. ಆದರೆ ಲಾಪತಾ ವೈಸ್‌ ಪ್ರೆಸಿಡೆಂಟ್‌ ಬಗ್ಗೆ ಎಂದಿಗೂ ಕೇಳಿಲ್ಲ. ನಾವು ಇತರ ದೇಶಗಳಲ್ಲಿ ಈ ಬಗ್ಗೆ ಕೇಳುತ್ತಿದ್ದೆವು. ಆದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಂತಹ ವಿಷಯಗಳು ಸಾರ್ವಜನಿಕ ವಲಯದಲ್ಲಿ ಇರಬೇಕು’ ಎಂದಿದ್ದಾರೆ.

ಜಗದೀಪ್‌ ಧನಕರ್‌ ಅನಾರೋಗ್ಯದ ಕಾರಣ ನೀಡಿ ದಿಢೀರ್‌ ರಾಜೀನಾಮೆ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ಅನಾರೋಗ್ಯದ ಕಾರಣ ನೀಡಿ ದಿಢೀರ್‌ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನಾರೋಗ್ಯಕ್ಕಿಂತ ಬೇರೆಯ ಕಾರಣಗಳೇ ಇವೆ ಎಂದು ವಿಪಕ್ಷಗಳು ಹಾಗೂ ತಜ್ಞರು ಅಂದಾಜಿಸಿದ್ದು, ಪ್ರಮುಖ ಸಂಭಾವ್ಯ ಕಾರಣಗಳ ಪಟ್ಟಿ ಮಾಡಿದ್ದಾರೆ,

ರಾಜೀನಾಮೆಯ ಹಿಂದೆ, ರಾಜ್ಯಸಭೆಯಲ್ಲಿ ನ್ಯಾ.ವರ್ಮಾ ವಿರುದ್ಧ ವಿಪಕ್ಷಗಳು ನೀಡಿದ್ದ ವಾಗ್ದಂಡನೆ ನೋಟಿಸ್‌ಗೆ ಧನಕರ್‌ ಒಪ್ಪಿಗೆ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ವಿರುದ್ಧ ರಾಜ್ಯಸಭೆಯ ಒಳಗೆ ಮತ್ತು ಹೊರಗೆ ನೇರಾನೇರಾ ಸಮರ ಸಾರಿದ್ದು, ಮುಂದಿನ ಬಿಹಾರ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಮತ್ತು ಸಂಸತ್ತಿನ ಕಲಾಪ ಸಮಿತಿಯಲ್ಲಿ ಕೆಲ ಕೇಂದ್ರ ಸಚಿವರು ಧನಕರ್‌ಗೆ ಮಾಡಿದ ಅವಮಾನದ ಘಟನೆಗಳು ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಇದೆಲ್ಲದರ ಜೊತೆಗೆ ಅವರ ಅನಾರೋಗ್ಯದ ಸಮಸ್ಯೆಯೂ ಮೇಲ್ಕಂಡ ಘಟನೆಗಳಿಗೆ ಬಲತುಂಬಿ ಅವರು ಸರ್ಕಾರಕ್ಕೂ ಶಾಕ್‌ ನೀಡುವಂತೆ ರಾಜೀನಾಮೆ ಸಲ್ಲಿಸಿದರು ಎಂದು ದೆಹಲಿ ರಾಜಕೀಯ ವಲಯದಲ್ಲಿ ಭಾರೀ ಗುಲ್ಲೆದಿದ್ದಿದೆ