Karur Stampede Vijay Delayed Arrival in Tamil nadu ಕರೂರಿನಲ್ಲಿ ನಡೆದ ಟಿವಿಕೆ ಮೆರವಣಿಗೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ನಟ ವಿಜಯ್ ತಡವಾಗಿ ಬಂದಿದ್ದೇ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ.
ಚೆನ್ನೈ (ಸೆ.29): ಶನಿವಾರ ಕರೂರಿನಲ್ಲಿ ಟಿವಿಕೆ ಮೆರವಣಿಗೆ ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆಗೆ, ವಿಜಯ್ ಹೇಳಿದ ಸಮಯಕ್ಕಿಂತ ಭಾರೀ ವಿಳಂಬವಾಗಿ ಆಗಮಿಸಿದ್ದು, ಜೊತೆಗೆ ಆಯೋಜಕರು ನಿಯಮ ಉಲ್ಲಂಘಿಸಿದ್ದು ಕಾರಣ ಎಂದು ಪೊಲೀಸರು ಹೇಳಿದ್ದಾರೆ. 40 ಜನರನ್ನು ಬಲಿಪಡೆದ ಘಟನೆ ಬಗ್ಗೆ ಭಾನುವಾರ ಇಲ್ಲಿ ಮಾಹಿತಿ ನೀಡಿದ ತಮಿಳುನಾಡು ಡಿಜಿಪಿ ಜಿ.ವೆಂಕಟರಮಣನ್, 'ವಿಜಯ್ ಪಕ್ಷದ ಪ್ರಚಾರ ಸಭೆಗೆ ಮಧ್ಯಾಹ್ನ 3ರಿಂದ ರಾತ್ರಿ 10ರ ವರೆಗೆ ಅನುಮತಿ ಕೋರಲಾಗಿತ್ತು. ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಜಯ್ ಮಧ್ಯಾಹ್ನ 12 ಗಂಟೆಗೇ ಆಗಮಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಮಧ್ಯಾಹ್ನ 11 ಗಂಟೆಯಿಂದಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ ವಿಜಯ್ ಆಗಮಿಸಿದ್ದು ರಾತ್ರಿ 7.40ಕ್ಕೆ. ಬಹಳ ಸಮಯದಿಂದ ಹೀಗೆ ಕಾದಿದ್ದ ಅಭಿಮಾನಿಗಳು ವಿಜಯ್ ಅವರನ್ನು ನೋಡಲು ನುಗ್ಗಿದಾಗ ಕಾಲ್ತುಳಿತ ಆಗಿದೆ ಎಂದು ಹೇಳಿದ್ದಾರೆ. ಇದನ್ನು ಪೊಲೀಸರು ತಮ್ಮ ಎಫ್ಐಆರ್‌ನಲ್ಲೂ ಉಲ್ಲೇಖಿಸಿದ್ದಾರೆ.
ವ್ಯವಸ್ಥೆ ಮಾಡದ ಟಿವಿಕೆ ಪಕ್ಷ
ವಿಜಯ್ ನೋಡಲು ಭಾರೀ ಜನಸ್ತೋಮ ಸೇರಿದ್ದರೂ ಅವರಿಗೆ ಆಹಾರ, ನೀರಿನಂಥ ಸೌಲಭ್ಯಗಳನ್ನೂ ಕಲ್ಪಿಸಿರಲಿಲ್ಲ. ಸಂಘಟಕರು 10000ಮಂದಿಸೇರಬಹುದೆಂದುಹೇಳಿದರೂ 27000 ಮಂದಿ ಅಲ್ಲಿ ನೆರೆದಿದ್ದರು. 20,000 ಮಂದಿ ಸೇರಬಹುದು ಎಂಬ ಅಂದಾಜಿನ ಮೇಲೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಹೀಗೆ ನಿರೀಕ್ಷೆಗೆ ಮೀರಿ ಜನರ ಆಗಮನ ಪರಿಸ್ಥಿತಿ ಬಿಗಡಾಯಿಸಿತು ಎಂದಿದ್ದಾರೆ.
ಕರೂರ್ ಕಾಲ್ತುಳಿತದ ಎಫ್‌ಐಆರ್‌ನಲ್ಲಿ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರು ಉದ್ದೇಶಪೂರ್ವಕವಾಗಿ ತಮ್ಮ ಬರುವಿಕೆಯನ್ನು ವಿಳಂಬಗೊಳಿಸಿದರು ಮತ್ತು ಅನುಮತಿಯಿಲ್ಲದೆ ರೋಡ್ ಶೋ ನಡೆಸಿದರು, ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿತು, ಇದು 41 ಜನರ ಸಾವಿಗೆ ಕಾರಣವಾಯಿತು ಎಂದಿದೆ.
ಉದ್ದೇಶಪೂರ್ವಕವಾಗಿ ಬರೋದನ್ನು ವಿಳಂಬ ಮಾಡಿದ ವಿಜಯ್
ಎಫ್‌ಐಆರ್ ಪ್ರಕಾರ, ಜಿಲ್ಲಾ ಕಾರ್ಯದರ್ಶಿ ಮಥಿಯಳಗನ್ 10,000 ಜನರಿಗೆ ಅನುಮತಿ ಕೋರಿದ್ದರು, ಆದರೆ ವಿಜಯ್ ಬರುವ ವರದಿಗಳ ನಂತರ ಜನಸಂದಣಿ 25,000 ಕ್ಕಿಂತ ಹೆಚ್ಚಾಯಿತು. ಜನಸಂದಣಿಯನ್ನು ಹೆಚ್ಚಿಸಲು ವಿಜಯ್ ಆಗಮನವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ವಿಜಯ್ ಸಂಜೆ 4.45 ರ ಸುಮಾರಿಗೆ ವೇಲಾಯುಧಂಪಾಲಯಂನಲ್ಲಿರುವ ಜಿಲ್ಲಾ ಗಡಿಯನ್ನು ತಲುಪಿದರು ಆದರೆ ತಮ್ಮ ಬರುವಿಕೆಯನ್ನು ಮತ್ತಷ್ಟು ವಿಳಂಬಗೊಳಿಸಿದರು ಮತ್ತು ಅನುಮತಿಯಿಲ್ಲದೆ ರೋಡ್ ಶೋ ನಡೆಸಿದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಾವಲು ಪಡೆ ಸಂಜೆ 7 ಗಂಟೆಗೆ ವೇಲುಚಾಮಿಪುರಂ ತಲುಪಿತು, ಆ ಹೊತ್ತಿಗೆ ಜನರನ್ನು ನಿಯಂತ್ರಿಸಲು ಕಷ್ಟವಾಯಿತು ಎಂದು ಅದು ಹೇಳಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದು, ಉಸಿರುಗಟ್ಟುವಿಕೆ ಮತ್ತು ಗಾಯಗಳಿಗೆ ಕಾರಣವಾಗಬಹುದು ಎಂದು ಪೊಲೀಸ್ ಅಧಿಕಾರಿಗಳು ಮಥಿಯಜಗನ್, ಬುಷಿ ಆನಂದ್ ಮತ್ತು ಸಿಟಿಆರ್ ನಿರ್ಮಲ್ ಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ, ಆದರೆ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಯಿತು.
