Life Imprisonment for Dog: ಯುಪಿಯಲ್ಲಿ ಎರಡು ಬಾರಿ ಕಚ್ಚಿದ ನಾಯಿಗೆ ಜೀವಾವಧಿ ಶಿಕ್ಷೆ ವಿಧಿಸುವ ಹೊಸ ನಿಯಮ ಜಾರಿಯಾಗಿದೆ. ಮತ್ತೊಂದೆಡೆ, ರಾಹುಲ್ ಗಾಂಧಿ ಮತಚೋರಿ ಬಗ್ಗೆ 'ಹೈಡ್ರೋಜನ್ ಬಾಂಬ್' ಸಿಡಿಸುವ ನಿರೀಕ್ಷೆ ಇದೆ. ಹಾಗೆಯೇ ಇವಿಎಂಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋ ಮುದ್ರಿಸಲು ಆಯೋಗ ನಿರ್ಧರಿಸಿದೆ.
ಉತ್ತರ ಪ್ರದೇಶದಲ್ಲಿ 2 ಸಾರಿ ಕಚ್ಚಿದ ನಾಯಿಗೆ ಜೀವಾವಧಿ ಶಿಕ್ಷೆ
ಲಖನೌ: ದೆಹಲಿಯನ್ನು ಬೀದಿನಾಯಿ ಮುಕ್ತ ಮಾಡಿ ಎಂಬ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ದೇಶಾದ್ಯಂತ ಸಂಚಲನ ಸೃಷ್ಟಿಸಿ ಚರ್ಚೆ ಹುಟ್ಟು ಹಾಕಿದ್ದ ನಿರಾಶ್ರಿತ ಶ್ವಾನಗಳಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಅದರ ಪ್ರಕಾರ, ಒಮ್ಮೆ ಒಬ್ಬರಿಗೆ ಕಚ್ಚಿದ ನಾಯಿ 2ನೇ ಬಾರಿ ಯಾರ ಕಾಲಿಗಾದರೂ ಬಾಯಿ ಹಾಕಿದರೆ, ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಉತ್ತರ ಪ್ರದೇಶ ಸರ್ಕಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅಮೃತ್ ಅಭಿಜಿತ್ ಅವರು ಈ ಆದೇಶ ಹೊರಡಿಸಿದ್ದಾರೆ. ಯಾರಿಗಾದರೂ ನಾಯಿ ಕಚ್ಚಿದ್ದು ತಿಳಿದುಬಂದರೆ, ಆ ಶ್ವಾನವನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲಾಗುವುದು. ಬಳಿಕ 10 ದಿನ ಅದರ ನಡವಳಿಕೆಯ ಮೇಲೆ ನಿಗಾ ವಹಿಸಲಾಗುವುದು. ಬಿಡುಗಡೆ ಮಾಡುವಾಗ, ಮೈಕ್ರೋಚಿಪ್ ಅಳವಡಿಸಲಾಗುವುದು. ಇನ್ನೊಮ್ಮೆ ಅದು ಯಾರಿಗಾದರೂ ಕಚ್ಚಿದ್ದು ಕಂಡುಬಂದರೆ ಶಾಶ್ವತ ಸೆರೆವಾಸ ಖಚಿತ ಎಂದು ಆದೇಶದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಯಾರಾದರೂ ಅದನ್ನು ದತ್ತು ತೆಗೆದುಕೊಂಡರೆ ಮಾತ್ರವೇ ನಾಯಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ ಎಂದು ಆದೇಶದಲ್ಲಿ ಇದೆ ಎಂದು ಮಾಹಿತಿ ಇದೆ.
ಮತಗಳವು: ಇಂದು ರಾಗಾ ಹೈಡೋಜನ್ ಬಾಂಬ್ ?
ನವದೆಹಲಿ: ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಮತಚೋರಿ ನಡೆದಿದೆ ಎಂದು ಆರೋಪಿಸಿ ಭಾರೀ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಅದಕ್ಕೂ ದೊಡ್ಡ ಹೈಡೋಜನ್ ಬಾಂಬ್ ಸಿಡಿಸುವ ಸಾಧ್ಯತೆಯಿದೆ. 'ಸೆ.18ರಂದು ಇಂದಿರಾ ಭವನ ಸಭಾಂಗಣದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿಶೇಷ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ತಿಳಿಸಿದ್ದಾರೆ. ಯಾವ ವಿಷಯದ ಬಗ್ಗೆ ರಾಹುಲ್ ಮಾತಾಡಲಿದ್ದಾರೆ ಎಂದು ಅವರು ಹೇಳಿಲ್ಲವಾದರೂ, ಮತಗಳವಿನ ಬಗ್ಗೆಯೇ ಚರ್ಚೆಯಾಗುವ ನಿರೀಕ್ಷೆಯಿದೆ.
ವೋಟ್ ಅಧಿಕಾರ ಯಾತ್ರೆಯ ಕೊನೆಯ ದಿನ ರಾಹುಲ್ ಅವರು, 'ಕಾಂಗ್ರೆಸ್ ದೊಡ್ಡ ಹೈಡೋಜನ್ ಬಾಂಬ್ ಸ್ಫೋಟಿಸಲಿದೆ. ಬಳಿಕ ಪ್ರಧಾನಿ ಮೋದಿ ಅವರು ದೇಶಕ್ಕೆ ಮುಖ ತೋರಿಸಲು ಯೋಗ್ಯರಿರುವುದಿಲ್ಲ' ಎಂದಿದ್ದರು.
ಇವಿಎಂನಲ್ಲಿನ್ನು ಅಭ್ಯರ್ಥಿಗಳ ಕಲರ್ ಫೋಟೋ ಮುದ್ರಣ
ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಇನ್ನು ಮುಂದೆ ಅಭ್ಯರ್ಥಿಗಳ ಕಲರ್ ಫೋಟೋ ಮುದ್ರಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಹೊಸ ನೀತಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಿಂದ ಜಾರಿಯಾಗಲಿದೆ. 2015 ರಿಂದಲೂ ಇವಿಎಂಗಳಲ್ಲಿ ಅಭ್ಯರ್ಥಿಗಳ ಕಪ್ಪು ಬಿಳುಪಿನ ಚಿತ್ರವನ್ನೇ ಮುದ್ರಿಸಲಾಗುತ್ತಿತ್ತು. ಆದರೆ ಈ ಫೋಟೋ ಗುರುತಿಸಲು ಕಷ್ಟವಾಗುತ್ತಿದ್ದ ಕಾರಣ ಇನ್ನು ಮುಂದೆ ಕಲರ್ ಫೋಟೋವನ್ನು, ಈಗಿರುವುದಕ್ಕಿಂತ ದೊಡ್ಡ ಗಾತ್ರದಲ್ಲಿ ಮುದ್ರಿಸಲು ಆಯೋಗ ನಿರ್ಧರಿಸಿದೆ. ಇದಲ್ಲದೆ ಅಭ್ಯರ್ಥಿಗಳ ಕ್ರಮ ಸಂಖ್ಯೆಯನ್ನು ಇನ್ನಷ್ಟು ದೊಡ್ಡ ಗಾತ್ರದಲ್ಲಿ ಹಾಗೂ ನೋಟಾ ಆಯ್ಕೆಯನ್ನು ಇತರೆ ಅಭ್ಯರ್ಥಿಗಳ ಹೆಸರಿನ ಗಾತ್ರದಲ್ಲೇ ಮುದ್ರಿಸಲೂ ನಿರ್ಧರಿಸಿದೆ. ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಇದ್ದಾಗ, ಮತದಾರರಿಗೆ ಆಗಬಹುದಾದ ಗೊಂದಲ ತಪ್ಪಿಸಲು 10 ವರ್ಷಗಳ ಹಿಂದೆ ಮತಪತ್ರದಲ್ಲಿ ಅಭ್ಯರ್ಥಿಗಳ ಫೋಟೋ ಮುದ್ರಿಸುವ ಕ್ರಮವನ್ನು ಆಯೋಗ ಆರಂಭಿಸಿತ್ತು.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಹೆಸರಲ್ಲಿ ಡಿಜಿಟಲ್ ಸೆರೆ: ಹಣ ಪ್ರಾಣ ಎರಡೂ ಕಳೆದುಕೊಂಡ ನಿವೃತ್ತ ವೈದ್ಯೆ
ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥನ ಮಾತಿನಂತೆ ಉಗ್ರರ ಅಂತ್ಯಸಂಸ್ಕಾರಕ್ಕೆ ಪಾಕ್‌ನಿಂದ ಸೇನಾಗೌರವ: ಜೈಷ್ ಕಮಾಂಡರ್
