ಧರ್ಮಸ್ಥಳದ ಬುರುಡೆ ಗ್ಯಾಂಗ್ ಸದಸ್ಯರಿಗೆ SIT ನೋಟಿಸ್ ಭೀತಿ ಎದುರಾಗಿದೆ. ಇತ್ತ ಸುಜಾತಾ ಭಟ್ ವಿಚಾರಣೆ ಇಂದೂ ನಡೆಯಲಿದೆ. ಟ್ರಂಪ್ ಹೇರಿದ ತೆರಿಗೆ ನೀತಿ ಜಾರಿಯಾಗಿದೆ. ಪರಿಣಾಮ ಭಾರತದ ಕೆಲವು ಜವಳಿ ಉತ್ಪಾದನೆ ಸ್ಥಗಿತಗೊಂಡಿದೆ. ಜಮ್ಮು ಕಾಶ್ಮೀರ ಪ್ರವಾಹ ಸೇರಿದಂತೆ ಇಂದಿನ ಟಾಪ್ ಸುದ್ದಿ ಇಲ್ಲಿವೆ.

ಬೆಂಗಳೂರು (ಆ.27) ಧರ್ಮಸ್ಥಳ ಪ್ರಕರಣ ಹಲವು ತಿರುವು ಪಡೆದುಕೊಂಡು ಇದೀಗ ಬುರಡೆ ಕತೆ ಹೇಳಿದ ಗ್ಯಾಂಗ್ ಸದಸ್ಯರ ಮೇಲೆ ತೂಗುಗತ್ತಿ ನೇತಾಡುವಂತೆ ಮಾಡಿದೆ. ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೇಲೆ ಎಸ್ಐಟಿ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹ ಮಾಡಿತ್ತು. ಇಂದು ಸುಜಾತಾ ಭಟ್ ವಿಚಾರಣೆ ನಡೆಯಲಿದೆ. ಇಷ್ಟೇ ಅಲ್ಲ ತಿಮರೋಡಿ ಗ್ಯಾಂಗ್ ಸದಸ್ಯರು ವಿಚಾರಣೆ ನೋಟಿಸ್ ಪಡೆಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಡೋನಾಲ್ಡ್ ಟ್ರಂಪ್ ಹೇರಿದ ತೆರಿಗೆ ನೀತಿ ಭಾರಿ ಚರ್ಚೆಯಾಗುತ್ತಿದೆ. ಶೇಕಡಾ 50ರಷ್ಟು ತೆರಿಗೆ ವಿಧಿಸಿದ ಪರಿಣಾಮ, ಭಾರತದ ಕೆಲ ಜವಳಿ ಉದ್ಯಮ ಸ್ಥಗಿತಗೊಂಡಿದೆ. ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

ಟ್ರಂಪ್‌ ತೆರಿಗೆ : ತಿರುಪ್ಪುರ್‌ ಸೇರಿ 3 ಕಡೆ ಜವಳಿ ಉತ್ಪಾದನೆ ಬಂದ್‌

ಜವಳಿ ಉದ್ಯಮಗಳ ಉತ್ಪಾದನೆ ಸ್ಥಗಿತದ ಬಗ್ಗೆ ಮಂಗಳವಾರ ಇಲ್ಲಿ ಮಾಹಿತಿ ನೀಡಿರುವ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ), ‘ಅಮೆರಿಕದ ಹೆಚ್ಚುವರಿ ತೆರಿಗೆಯಿಂದಾಗಿ ಅಲ್ಲಿಗೆ ಭಾರತದ ವಸ್ತುಗಳ ರಫ್ತು ದುಬಾರಿಯಾಗಲಿದೆ. ತೀವ್ರ ಸ್ಪರ್ಧಾತ್ಮಕವಾದ ಮಾರುಕಟ್ಟೆಯಲ್ಲಿ ಇಷ್ಟು ತೆರಿಗೆ ಇಟ್ಟುಕೊಂಡು ಚೀನಾ ಸೇರಿದಂತೆ ಇತರೆ ಪ್ರಮುಖ ಜವಳಿ ರಫ್ತು ದೇಶಗಳೊಂದಿಗೆ ಸ್ಪರ್ಧೆ ಅಸಾಧ್ಯ. ಇದೇ ಕಾರಣಕ್ಕಾಗಿ ತಿರುಪ್ಪುರ್‌, ನೋಯ್ಡಾ ಮತ್ತು ಸೂರತ್‌ನಲ್ಲಿನ ಜವಳಿ ಉದ್ಯಮಗಳು ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ’ ಎಂದು ಹೇಳಿದೆ.

ಬುರುಡೆ ಕೇಸ್‌ನ ಆರೋಪಿ ಚಿನ್ನಯ್ಯನಿಂದ ಮತ್ತೊಂದು ಸ್ಫೋಟಕ ಮಾಹಿತಿ

ಬುರುಡೆ ಕೇಸ್‌ನ ಆರೋಪಿ ಚಿನ್ನಯ್ಯ, ಇದೀಗ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಎಸ್‌ಐಟಿ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬುರುಡೆ ಗ್ಯಾಂಗ್ ಸ್ವಾಮೀಜಿಯೊಬ್ಬರನ್ನು ಭೇಟಿ ಮಾಡಿತ್ತು ಎನ್ನುವ ಸ್ಫೋಟಕ ಮಾಹಿತಿಯನ್ನು ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಸ್ವಾಮೀಜಿಯನ್ನು ಈ ಗ್ಯಾಂಗ್ ಭೇಟಿ ಮಾಡಿ, ಇಡೀ ಪ್ರಕರಣವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿತ್ತು.

ಬುರುಡೆ ಕೇಸ್‌ ಎಸ್‌ಐಟಿ ಬದಲು ಸಿಐಡಿ ಸುಪರ್ದಿಗೆ?

ತಲೆಬರುಡೆ’ ಸುಳ್ಳಿನ ಸಂಕಥನ ಬಹಿರಂಗವಾದ ಬೆನ್ನಲ್ಲೇ ದಶಕಗಳ ಹಿಂದೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಹತ್ಯೆ ಹಾಗೂ ನಾಪತ್ತೆ ಪ್ರಕರಣಗಳ ಕುರಿತು ಮರು ತನಿಖೆ ವಿಚಾರದಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ರಾಜ್ಯ ಸರ್ಕಾರ ರೆಡ್‌ ಸಿಗ್ನಲ್‌ ತೋರಿಸಿದೆ ಎಂದು ತಿಳಿದು ಬಂದಿದೆ.

ಮೈಸೂರು ದಸರಾ ಸರ್ಕಾರಿ ಕಾರ್‍ಯಕ್ರಮ..', ಬಾನು ಮುಷ್ತಾಕ್‌ ವಿರೋಧಕ್ಕೆ ಹರಿಪ್ರಸಾದ್ ಆಕ್ಷೇಪ

ಸಾಹಿತಿ ಬಾನು ಮುಷ್ತಾಕ್‌ ಅವರು ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸುವ ಮೂಲಕ ಬಿಜೆಪಿಯವರ ಮನಸ್ಥಿತಿ ಬಹಿರಂಗವಾಗಿದೆ. ಮೈಸೂರು ದಸರಾ ಆಚರಣೆ ಸರ್ಕಾರದ ಕಾರ್ಯಕ್ರಮ, ಅದು ಮೈಸೂರು ಮಹಾರಾಜರ ವಂಶದವರ ಕಾರ್ಯಕ್ರಮವಲ್ಲ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಿರುಗೇಟು ನೀಡಿದ್ದಾರೆ.

ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ - ಹತ್ಯೆ

ಭ್ರೂಣ ಲಿಂಗ ಪತ್ತೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಅನ್ನು ಸೀಜ್ ಮಾಡಲಾಗಿದೆ.ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಉಪನಿರ್ದೇಶಕ ಡಾ.ವಿವೇಕ್ ದೊರೈ ಅವರು ಸ್ಕ್ಯಾನಿಂಗ್ ಕೇಂದ್ರವನ್ನು ಸೋಮವಾರ ಸಂಜೆ ಸೀಜ್ ಮಾಡಿದ್ದಾರೆ. ಈ ಘಟನೆಯಿಂದಾಗಿ ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲ ರಾಮನಗರದಲ್ಲಿಯೂ ಸಕ್ರಿಯವಾಗಿರುವ ಅನುಮಾನಗಳು ದಟ್ಟವಾಗಿದೆ.