how to register a political party in India:ತೇಜ್ ಪ್ರತಾಪ್ ಯಾದವ್ 'ಜನಶಕ್ತಿ ಜನತಾದಳ' ಎಂಬ ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ಭಾರತದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಚುನಾವಣಾ ಆಯೋಗದ ನಿಯಮಗಳು, ಬೇಕಾದ ಕನಿಷ್ಠ ಸದಸ್ಯರು ನೋಂದಣಿ ಶುಲ್ಕ ಒಟ್ಟಾರೆ ಪ್ರಕ್ರಿಯೆಯ ಬಗ್ಗೆ ಈ ಲೇಖನ ವಿವರಿಸುತ್ತದೆ.
new political party formation process: ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಮತ್ತು ಮಾಜಿ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ಬಿಹಾರದಲ್ಲಿ ಹೊಸ ರಾಜಕೀಯ ಪಕ್ಷ 'ಜನಶಕ್ತಿ ಜನತಾದಳ'ವನ್ನು ಆರಂಭಿಸಿದ್ದಾರೆ. ಕಪ್ಪು ಹಲಗೆಯನ್ನು ಚುನಾವಣಾ ಚಿಹ್ನೆಯಾಗಿ ಹೊಂದಿರುವ ಈ ಪಕ್ಷದ ಮೂಲಕ ತೇಜ್ ಪ್ರತಾಪ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪಕ್ಷದ ಪೋಸ್ಟರ್‌ನ್ನು ಹಂಚಿಕೊಂಡಿರುವ ಅವರು, ಹೊಸ ರಾಜಕೀಯ ದಿಕ್ಕಿನತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಆದರೆ, ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಎಷ್ಟು ಹಣ ಬೇಕು? ಪಕ್ಷದಲ್ಲಿ ಕನಿಷ್ಠ ಎಷ್ಟು ಕಾರ್ಯಕರ್ತರಿರಬೇಕು? ಪ್ರಕ್ರಿಯೆಗಳೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಚುನಾವಣಾ ಆಯೋಗದ ಅನುಮೋದನೆ ಕಡ್ಡಾಯ
ಭಾರತದಲ್ಲಿ ರಾಜಕೀಯ ಪಕ್ಷವನ್ನು ಕಟ್ಟಲು ಹಣ, ಜನಬಲ ಇದ್ದರೆ ಸಾಲದು. ಅದಕ್ಕೆ ಚುನಾವಣಾ ಆಯೋಗದ ಅನುಮೋದನೆ ಕಡ್ಡಾಯವಾಗಿದೆ. ಪಕ್ಷ ರಚನೆಯಾದ 30 ದಿನಗಳ ಒಳಗೆ ಔಪಚಾರಿಕ ಅರ್ಜಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಈ ಅರ್ಜಿಯೊಂದಿಗೆ ₹10,000 ಡಿಮ್ಯಾಂಡ್ ಡ್ರಾಫ್ಟ್ ಶುಲ್ಕವನ್ನು ಪಾವತಿಸಬೇಕು. ಇದರ ಜೊತೆಗೆ, ಪಕ್ಷದ ಸಂವಿಧಾನ, ಪ್ರಧಾನ ಕಚೇರಿಯ ವಿಳಾಸ, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ಕನಿಷ್ಠ 100 ಪ್ರಾಥಮಿಕ ಸದಸ್ಯರ ಪಟ್ಟಿಯನ್ನು ಸಲ್ಲಿಸಬೇಕು. ಈ ಸದಸ್ಯರ ಹೆಸರು, ವಿಳಾಸ ಮತ್ತು ಅಫಿಡವಿಟ್‌ಗಳನ್ನೂ ಒಳಗೊಂಡಿರಬೇಕು.
ಸ್ಥಳೀಯ ಪತ್ರಿಕೆಗಳಲ್ಲಿ ಮಾಹಿತಿ ನೀಡಬೇಕು:
ಪಕ್ಷದ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು, ಚುನಾವಣಾ ಆಯೋಗವು ಅರ್ಜಿಯನ್ನು ಕನಿಷ್ಠ ಎರಡು ರಾಷ್ಟ್ರೀಯ ಮತ್ತು ಎರಡು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲು ಆದೇಶಿಸುತ್ತದೆ. ಇದು ಸಾರ್ವಜನಿಕರಿಗೆ ಅಥವಾ ಇತರ ಪಕ್ಷಗಳಿಗೆ ಆಕ್ಷೇಪಣೆ ಎತ್ತಲು ಅವಕಾಶ ನೀಡುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಥವಾ ಆಯೋಗವು ಅವುಗಳನ್ನು ತಿರಸ್ಕರಿಸಿದರೆ, ಪಕ್ಷಕ್ಕೆ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ.
ಹೊಸ ಪಕ್ಷ ಕಟ್ಟಲು ಎಷ್ಟು ಹಣ ಬೇಕು?
ನೋಂದಣಿ ಶುಲ್ಕ ₹10,000 ಆಗಿದ್ದರೂ, ಒಟ್ಟಾರೆ ವೆಚ್ಚವು ದಾಖಲೆಗಳ ನೋಟರೈಸೇಶನ್, ಅಫಿಡವಿಟ್ ತಯಾರಿಕೆ, ಪತ್ರಿಕಾ ಪ್ರಕಟಣೆಗಳು ಮತ್ತು ಕಾನೂನು ಸಲಹೆಯನ್ನು ಒಳಗೊಂಡಿರುತ್ತದೆ. ಈ ವೆಚ್ಚಗಳು ಪಕ್ಷದ ವ್ಯಾಪ್ತಿಯನ್ನು ಅವಲಂಬಿಸಿ ಕೆಲವು ಸಾವಿರದಿಂದ ಲಕ್ಷಾಂತರ ರೂಪಾಯಿಗಳವರೆಗೆ ಇರಬಹುದು.
ಹೊಸ ಪಕ್ಷ ಕಟ್ಟಲು ಎಷ್ಟು ಕಾರ್ಯಕರ್ತರು ಇರಬೇಕು?
ಪಕ್ಷ ರಚನೆಗೆ ಕನಿಷ್ಠ 100 ಪ್ರಾಥಮಿಕ ಸದಸ್ಯರು ಬೇಕು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ರಾಷ್ಟ್ರೀಯ ಅಥವಾ ರಾಜ್ಯ ಪಕ್ಷದ ಮಾನ್ಯತೆ ಪಡೆಯಲು, 6% ಮತಗಳನ್ನು ಗಳಿಸುವುದು ಅಥವಾ ನಿರ್ದಿಷ್ಟ ಸ್ಥಾನಗಳನ್ನು ಗೆಲ್ಲುವಂತಹ ಷರತ್ತುಗಳನ್ನು ಪೂರೈಸಬೇಕು.ತೇಜ್ ಪ್ರತಾಪ್ ಯಾದವ್‌ರ ಈ ಹೊಸ ಪಕ್ಷವು ಬಿಹಾರದ ರಾಜಕೀಯದಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದು ಕಾಲವೇ ಉತ್ತರಿಸಲಿದೆ.
