ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ 3 ಮಹತ್ವದ ಅಂಶಗಳ ಬಗ್ಗೆ ಕಾಯ್ದಿರಿಸಲಾಗಿರುವ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಹೊರಡಿಸಲಿದೆ.

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ 3 ಮಹತ್ವದ ಅಂಶಗಳ ಬಗ್ಗೆ ಕಾಯ್ದಿರಿಸಲಾಗಿರುವ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಹೊರಡಿಸಲಿದೆ.

ವಕ್ಫ್‌ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು 3 ದಿನ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ। ಬಿ.ಆರ್‌. ಗವಾಯಿ ಅವರ ಪೀಠ, ಮೇ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದು ಪ್ರಮುಖವಾಗಿ 3 ಗೊಂದಲಗಳ ಕುರಿತಾಗಿದೆ.

ಮೊದಲನೆಯದು, ವಕ್ಫ್‌ ಆಸ್ತಿಗಳ ಡಿನೋಟಿಫಿಕೇಷನ್‌ ಮಾಡಲು ಅವಕಾಶ ಇದೆಯೇ, ಇಲ್ಲವೇ ಎಂಬ ಬಗ್ಗೆ. ಎರಡನೆಯದು ಕೇಂದ್ರ ಹಾಗೂ ರಾಜ್ಯಗಳ ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರ ಒಳಗೊಳ್ಳುವಿಕೆ ಹಾಗೂ ಮೂರನೆಯದು ವಕ್ಫ್ ಆಸ್ತಿಯನ್ನು ಸರ್ಕಾರಿ ಭೂಮಿಯೇ ಎಂದು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿದಾಗ, ಅದನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂಬ ನಿಬಂಧನೆಯ ಬಗ್ಗೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸುವ ನಿರೀಕ್ಷೆಯಿದೆ.

ವಕ್ಫ್‌ ಬೋರ್ಡ್‌ ಉದ್ಘಾಟನಾ ಫಲಕದಲ್ಲಿ ರಾಷ್ಟ್ರೀಯ ಲಾಂಛನಕ್ಕೆ ವಿರೋಧ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನವೀಕರಣಗೊಂಡ ಹಜರತ್‌ ಬಾಲ್‌ ದರ್ಗಾದ ಉದ್ಘಾಟನಾ ಫಲಕದಲ್ಲಿ ರಾಷ್ಟ್ರೀಯ ಲಾಂಛನವಾದ ಅಶೋಕಸ್ತಂಭವನ್ನು ಮುದ್ರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಉದ್ಘಾಟನಾ ಫಲಕದ ಮೇಲೆ ರಾಷ್ಟ್ರೀಯ ಲಾಂಛನ ಇದ್ದಿದ್ದು ಕಾಶ್ಮೀರದಲ್ಲಿನ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಶಾಸಕ ತನ್ವೀರ್‌ ಸಾದಿಕ್‌ ಹಾಗೂ ಬಿಜೆಪಿ ನಾಯಕ ದರಕ್ಷಣ್ ಅಂದ್ರಾಬಿ ನಡುವೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಅಲ್ಲಿಯೇ ಇದ್ದ ಕೆಲ ವ್ಯಕ್ತಿಗಳನ್ನು ಕಲ್ಲುಗಳನ್ನು ಬಳಸಿ, ಲಾಂಛನವನ್ನು ವಿರೂಪಗೊಳಿಸಿರುವ ವಿಡಿಯೋ ವೈರಲ್‌ ಆಗಿದೆ.

ಶಾಸಕ ತನ್ವೀರ್‌ ಸಾದಿಕ್‌ ಆಕ್ಷೇಪ

ದರ್ಗಾದ ಒಳಗಡೆ ಇರುವ ಫಲಕದಲ್ಲಿ ರಾಷ್ಟ್ರೀಯ ಲಾಂಛನವನ್ನು ಇಡುವುದಕ್ಕೆ ಎನ್‌ಸಿ ಮುಖ್ಯ ವಕ್ತಾರ ಮತ್ತು ಶಾಸಕ ತನ್ವೀರ್ ಸಾದಿಕ್ ಆಕ್ಷೇಪ ವ್ಯಕ್ತಪಡಿಸಿದ ನಂತರ ವಿವಾದ ಆರಂಭವಾಯಿತು. "ನಾನು ಧಾರ್ಮಿಕ ವಿದ್ವಾಂಸನಲ್ಲ, ಆದರೆ ಇಸ್ಲಾಂನಲ್ಲಿ, ವಿಗ್ರಹಾರಾಧನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಅತ್ಯಂತ ಗಂಭೀರ ಪಾಪ. ನಮ್ಮ ನಂಬಿಕೆಯ ಅಡಿಪಾಯ ತೌಹೀದ್. ಜರತ್‌ಬಾಲ್ ದರ್ಗಾದಲ್ಲಿ ಕೆತ್ತಿದ ಪ್ರತಿಮೆಯನ್ನು ಇಡುವುದು ಈ ನಂಬಿಕೆಗೆ ವಿರುದ್ಧವಾಗಿದೆ. ಪವಿತ್ರ ಸ್ಥಳಗಳು ತೌಹೀದ್‌ನ ಶುದ್ಧತೆಯನ್ನು ಮಾತ್ರ ಪ್ರತಿಬಿಂಬಿಸಬೇಕು, ಬೇರೇನೂ ಅಲ್ಲ," ಎಂದು ಮುಖ್ಯಮಂತ್ರಿ ಮತ್ತು ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ಆಪ್ತ ಸಹಾಯಕರಾಗಿರುವ ಸಾದಿಕ್, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.