ನೌಕರರಿಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪರಿಹಾರ ನೀಡಿಕೆ ಕುರಿತಂತೆ ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ಸಹಸ್ರಾರು ಕಾರ್ಮಿಕರಿಗೆ ಈ ತೀರ್ಪು ವರದಾನವಾಗಿದೆ. ಏನಿದು ತೀರ್ಪು? 

ಸಾಮಾನ್ಯವಾಗಿ ಉದ್ಯೋಗದ ಸ್ಥಳದಲ್ಲಿ ಅಥವಾ ಉದ್ಯೋಗದ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಮಾತ್ರ ಅದಕ್ಕೆ ಸಂಸ್ಥೆಗಳು ಜವಾಬ್ದಾರರಾಗುತ್ತಿದ್ದವು, ಅಥವಾ ಕಚೇರಿಯ ಸಮಯದಲ್ಲಿ ನಡೆದ ಅನಾಹುತ, ಅಪಘಾತಗಳನ್ನಷ್ಟೇ ಉದ್ಯೋಗದ ಸಮಯದಲ್ಲಿ ನಡೆದ ಅಪಘಾತ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಸುಪ್ರೀಂಕೋರ್ಟ್​ ಇದೀಗ ಬಹುದೊಡ್ಡ ತೀರ್ಪನ್ನು ನೀಡಿದ್ದು, ಉದ್ಯೋಗಿಗಳ ಪರವಾಗಿ ನಿಂತಿದೆ. ಸುಪ್ರೀಂಕೋರ್ಟ್​ ಇದೀಗ, ಉದ್ಯೋಗದ ಸ್ಥಳದಲ್ಲಿ ಅಥವಾ ಉದ್ಯೋಗದ ಅವಧಿಯಲ್ಲಿ ನಡೆದ ಅಪಘಾತವನ್ನಷ್ಟೇ ಉದ್ಯೋಗದ ಅವಧಿಯ ಅಪಘಾತ ಎನ್ನುವಂತಿಲ್ಲ. ಬದಲಿಗೆ ನಿವಾಸ ಮತ್ತು ಕೆಲಸದ ಸ್ಥಳದ ನಡುವೆ ಪ್ರಯಾಣಿಸುವಾಗ ಸಂಭವಿಸುವ ಅಪಘಾತಗಳು ಸಹ ಉದ್ಯೋಗದ ಅವಧಿ ಎಂದೇ ಪರಿಗಣಿಸಬೇಕು ಎಂದು ಹೇಳಿದೆ.

ಇದರ ಅರ್ಥ ಮನೆಯಿಂದ ಆಫೀಸ್​ಗೆ ಹೋಗುವ ಸಮಯದಲ್ಲಿ ಅಪಘಾತ ಸಂಭವಿಸಿದರೆ ಅದನ್ನು ಕಚೇರಿಯ ಅವಧಿ ಎಂದು ಪರಿಗಣಿಸಲಾಗುತ್ತಿರಲಿಲ್ಲ, ಕಚೇರಿಯಿಂದ ಹೊರಗೆ ನಡೆದಿರುವ ಅಪಘಾತ ಆಗಿರುವ ಕಾರಣ ಇದಕ್ಕೆ ಕೆಲಸದ ಸಮಯದಲ್ಲಿ ನಡೆಯುವ ಅಪಘಾತಕ್ಕೆ ಸಿಗುವ ಪರಿಹಾರಗಳು ಸಿಗುತ್ತಿರಲಿಲ್ಲ. ಕೆಲವು ಕೋರ್ಟ್​ಗಳು ಕೂಡ ಇದೇ ರೀತಿ ಆದೇಶ ಹೊರಡಿಸಿದ್ದು ಇದೆ. ಆದರೆ ಇದೀಗ ಸುಪ್ರೀಂಕೋರ್ಟ್​ ಇದು ಸರಿಯಲ್ಲ ಎಂದು ಹೇಳಿದೆ. ಮನೆಯಿಂದ ಆಫೀಸ್​ಗೆ ಹೋಗುವ ಸಮಯದಲ್ಲಿ ಅಪಘಾತ ಸಂಭವಿಸಿದರೆ ಅದು ಕೂಡ ಕಚೇರಿಯ ಅವಧಿಯಲ್ಲಿ ನಡೆಯುವ ಅಪಘಾತಕ್ಕೆ ಸಮಾನವಾಗಿದೆ ಎಂದು ಹೇಳಿದೆ.

1923 ರ ನೌಕರರ ಪರಿಹಾರ ಕಾಯ್ದೆಯ ಸೆಕ್ಷನ್ 3 ರ ನಿಬಂಧನೆಯು "ಉದ್ಯೋಗದ ಸಮಯದಲ್ಲಿ ಮತ್ತು ಅದರಿಂದ ಉಂಟಾಗುವ ಅಪಘಾತಗಳು" ನಿವಾಸ ಮತ್ತು ಕೆಲಸದ ಸ್ಥಳದ ನಡುವೆ ಪ್ರಯಾಣಿಸುವಾಗ ಸಂಭವಿಸುವ ಅಪಘಾತಗಳನ್ನು ಸಹ ಒಳಗೊಂಡಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಅಂದರೆ, ಕರ್ತವ್ಯಕ್ಕೆ ಹೋಗುವಾಗ ಅಥವಾ ಬರುವಾಗ ಸಂಭವಿಸಿದ ಅಪಘಾತಗಳನ್ನು ಸಹ ಸೇವೆಯಲ್ಲಿದ್ದಾಗ ಎಂದು ಪರಿಗಣಿಸಲಾಗುತ್ತದೆ. ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಸಾಕಷ್ಟು ಗೊಂದಲ ಮತ್ತು ಅಸ್ಪಷ್ಟತೆ ಇತ್ತು ಎಂದು ಹೇಳಿದೆ.

ಸಕ್ಕರೆ ಕಾರ್ಖಾನೆಯ ಕಾವಲುಗಾರನೊಬ್ಬ ಕೆಲಸಕ್ಕೆ ಹೋಗುವಾಗ ಸಾವನ್ನಪ್ಪಿದ ಪ್ರಕರಣದಲ್ಲಿ ಈ ತೀರ್ಪನ್ನು ಕೋರ್ಟ್​ ನೀಡಿದೆ. ಕಚೇರಿಗೆ ಹೋಗುವ ಸಮಯದಲ್ಲಿ ಅಪಘಾತ ನಡೆದ ಕಾರಣ, ಇದು ಕೆಲಸದ ಅವಧಿಯ ಅಪಘಾತವಲ್ಲ, ಅದಕ್ಕಾಗಿ ಪರಿಹಾರಕ್ಕೆ ಯೋಗ್ಯವಲ್ಲ ಎಂದು ಡಿಸೆಂಬರ್ 2011 ರಂದು ಬಾಂಬೆ ಹೈಕೋರ್ಟ್ ಆದೇಶಿಸಿತ್ತು. ವ್ಯಕ್ತಿಯ ಕುಟುಂಬಕ್ಕೆ 3,26,140 ರೂ. ಪರಿಹಾರವನ್ನು ನೀಡುವಂತೆ ಆದೇಶಿಸಿದ ಕಾರ್ಮಿಕ ಪರಿಹಾರ ಆಯುಕ್ತರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈ ವ್ಯಕ್ತಿ ಕರ್ತವ್ಯಕ್ಕೆ ಹೋಗುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಪರಿಹಾರಕ್ಕೆ ಅರ್ಹರಲ್ಲ ಎಂದಿತ್ತು ಹೈಕೋರ್ಟ್​. ಅದನ್ನು ಪ್ರಶ್ನಿಸಿ ಕುಟುಂಬಸ್ಥರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಅವರು ತಮ್ಮ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದಾಗ ಮತ್ತು ಅವರ ಕೆಲಸದ ಸ್ಥಳದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಸ್ಥಳದಲ್ಲಿ ಅಪಘಾತದಲ್ಲಿ ನಿಧನರಾದರು. ಇದನ್ನು ಕೂಡ ಕಚೇರಿಯ ಅವಧಿ ಎಂದೇ ಪರಿಗಣಿಸಬೇಕು ಎಂದಿದೆ ಕೋರ್ಟ್​.