ಅಮಿತಾಭ್ ಬಚ್ಚನ್ ಅವರ ಕೆಬಿಸಿ ಶೋನಲ್ಲಿ ಗುಜರಾತ್‌ನ ಬಾಲಕ ಇತೀಶ್ ಭಟ್‌ನ ವರ್ತನೆ ವೈರಲ್ ಆಗಿದೆ. ಕೆಲವರು ಇದನ್ನು ಬ್ರಾಹ್ಮಣ ಸಮುದಾಯದ ದುರಹಂಕಾರವೆಂದು ಟೀಕಿಸಿದ್ದು, ಬಾಲಕನ ವರ್ತನೆಗೆ ಜಾತಿಯ ಲೇಪ ಮಾಡಿರುವುದಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಲಕನ ಉದ್ಧಟತನಕ್ಕೆ ಬ್ರಾಹ್ಮಣ ಸಮುದಾಯದ ಟೀಕೆ:
ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‌ಪತಿ ಶೋ ಕೆಲದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಇದಕ್ಕೆ ಕಾರಣವಾಗಿದ್ದು, ಗುಜರಾತ್‌ನ ಪುಟ್ಟ ಬಾಲಕ ಇತೀಶ್ ಭಟ್ ಈ ಶೋದಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ನಡೆದುಕೊಂಡ ರೀತಿ. ಅನೇಕರು ಆ ಬಾಲಕನ ವರ್ತನೆಗೆ ಆತನ ಪೋಷಕರನ್ನು ಬೈಯುತ್ತಿರುವುದನ್ನು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಬಾಲಕನ ವರ್ತನೆಯ ಕಾರಣಕ್ಕೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪುಟ್ಟ ಬಾಲಕನ ವರ್ತನೆಗೆ ಕೆಲ ಕಿಡಿಗೇಡಿಗಳು ಜಾತಿಯ ಲೇಪ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಬಾಲಕನ ವರ್ತನೆಗೆ ಏನು ಕಾರಣ ಅಮಿತಾಭ್ ಬಚ್ಚನ್ ಅವರ ಶೋದಲ್ಲಿ ಏನು ನಡೆಯಿತು? ವೀಡಿಯೋ ವೈರಲ್ ಆಗ್ತಿದ್ದಂತೆ ಜನ ಏನಂದರು ಎಂದು ವಿಶ್ಲೇಷಣೆ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣ ಥ್ರೆಡ್‌ನಲ್ಲಿ ಹಂಚಿಕೊಂಡ jeevanpauld ಎಂಬುವವರು, 'ಬ್ರಾಹ್ಮಣರು ತಮ್ಮ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ಎಷ್ಟು ದುರಹಂಕಾರದಲ್ಲಿ ಬೆಳೆಸ್ತಾರೆ ಅನ್ನೋದಕ್ಕೆ ಈ ಹುಡುಗ ಒಂದು ಉದಾಹರಣೆ. ಅವನ ಅಹಂಕಾರ ಎರಡೇ ನಿಮಿಷಕ್ಕೆ ನುಚ್ಚುನೂರಾಗಿದ್ದು ಮಾತ್ರ ಪ್ರಕೃತಿ ನಿಯಮ ಎಂದು ಬರೆದಿದ್ದಾರೆ. ಇವರ ಪೋಸ್ಟ್ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಮಕ್ಕಳ ವರ್ತನೆಗೆ ಜಾತಿಯ ಲೇಪ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಆ ಹುಡುಗನ ದುರಹಂಕಾರ,ತಂದೆ ತಾಯಿಯ ತಪ್ಪು , ಇದು ಎಲ್ಲರಿಗೂ ಗೊತ್ತು. ಇಲ್ಲಿ ಬ್ರಾಹ್ಮಣ, ಬ್ರಾಮ್ಹಣ್ಯ , ತೂರಿಸುವ ಅಗತ್ಯ ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ಇದರೊಳಗೆ ಏಕೆ ಎಳೆದು ತರುವಿರಿ ಬ್ರಾಹ್ಮಣರು ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ವಿಶ್ಲೇಷಣೆ ತಪ್ಪು ನೀವು ಬ್ರಾಹ್ಮಣ ದ್ವೇಷಿಗಳು ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಅಮಿತಾಭ್ ಬಚ್ಚನ್ ಕೆಬಿಸಿ ಶೋದಲ್ಲಿ ಏನಾಗಿತ್ತು?
ಕೆಬಿಸಿ ಶೋದ ಚೇರ್‌ನಲ್ಲಿ ಕುಳಿತ ಕೂಡಲೇ ನನಗೆ ಈ ಶೋದ ನಿಯಮಗಳನ್ನೆಲ್ಲಾ ಹೇಳುವುದಕ್ಕೆ ಹೋಗಬೇಡಿ ನನಗೆ ಎಲ್ಲವೂ ಗೊತ್ತಿದೆ ಎಂದು ಆರಭದಲ್ಲೇ ಉದ್ಧಟತನದಿಂದ ಆದೇಶ ಮಾಡುವಂತೆ ಮಾತನಾಡುತ್ತಾನೆ. ಹಲವು ಪ್ರಶ್ನೆಗಳಿಗೆ ಅಮಿತಾಭ್ ಅವರು ಆಯ್ಕೆ ನೀಡುವ ಮೊದಲೇ ಉತ್ತರಿಸುತ್ತಿದ್ದ ಬಾಲಕ ಇತಿಶ್ 5ನೇ ಪಶ್ನೆಯ ವೇಳೆ ಮಾತ್ರ ಉತ್ತರ ಗೊತ್ತಿಲ್ಲದೇ ಆಪ್ಷನ್ ಕೇಳುತ್ತಾನೆ. ವಾಲ್ಮೀಕಿ ರಾಮಾಯಣದಲ್ಲಿನ 4 ಕಾಂಡಗಳಲ್ಲಿ ಮೊದಲ ಕಾಂಡ ಯಾವುದು ಎಂದು ಕೇಳಿದ ಪ್ರಶ್ನೆ ಅದಾಗಿತ್ತು. ಆದರೆ ಈ ವೇಳೆ ಆತನಿಗೆ ಆಯ್ಕೆ ನೀಡರಲಿಲ್ಲ, ಆತನೇ ಆಯ್ಕೆ ನೀಡುವಂತೆ ಕೇಳಿದಾಗ ಬಾಲಕ ಇಷ್ಟು ಸಮಯ ಮಾಡಿದ ಕಿರಿಕಿರಿ ನೋಡಿದ ಅಲ್ಲಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡಿದ್ದಾರೆ. ನಂತರ ಅಮಿತಾಭ್ ಅವರು ಆಯ್ಕೆಗಳನ್ನು ನೀಡಲು ಬಾಲಕನನ್ನು ಸ್ವಲ್ಪ ಹೊತ್ತು ಕಾಯಿಸಿದಾಗ ಆ ಬಾಲಕ ತಾಳ್ಮೆ ಕಳೆದುಕೊಂಡು ಮೊದಲು ಆಪ್ಷನ್ ನೀಡಿ ಎಂದು ಬೊಬ್ಬೆ ಹೊಡೆಯುತ್ತಾನೆ. ನಂತರ ಅಮಿತಾಭ್ ಆಯ್ಕೆಗಳನ್ನು ನೀಡಿದ್ದು, ಆಪ್ಷನ್ ಬರುತ್ತಿದ್ದಂತೆ ಈ ಬಾಲಕ ಆಯೋಧ್ಯಾ ಕಾಂಡ ಎಂದು ಹೇಳಿ ಅದನ್ನು ಲಾಕ್ ಮಾಡುವಂತೆ ಹೇಳಿದ್ದಾನೆ. ಮಧ್ಯೆ ಮಾತನಾಡಲು ಯತ್ನಿಸಿದ ಅಮಿತಾಭ್ ಅವರಿಗೆ ಆತ ಒಳ್ಳೆಯ ರೀತಿಯಲ್ಲಿ ಮೊದಲು ಅದನ್ನು ಲಾಕ್ ಮಾಡಿ ಎಂದು ಹೇಳುವ ಮೂಲಕ ದುರ್ವರ್ತನೆ ತೋರಿದ್ದಾನೆ. ಆದರೆ ಆತನ ಉತ್ತರ ತಪ್ಪಾಗಿದ್ದು, ನಂತರ ಅಮಿತಾಭ್ ಅವರು ಉತ್ತರ ತಪ್ಪು ಎಂದು ಹೇಳುತ್ತಾರೆ.
ಇದು ಪೋಷಕರ ತಪ್ಪಲ್ಲ ಇದೊಂದು ಆರೋಗ್ಯ ಸ್ಥಿತಿ
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ನೆಟ್ಟಿಗರು ಆತನ ಪೋಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆ ಬಾಲಕನಿಗೆ ಇರುವುದು ಆರೋಗ್ಯ ಸಮಸ್ಯೆಯೇ ಅಥವಾ ಅಹಂಕಾರವೇ ಈ ಬಗ್ಗೆ ಯೋಗೇಶ್ ಮೇಷ್ಟು ಎಂಬುವವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದರು. ಇದೊಂದು ADHD(Attention Deficit Hyperactivity Disorder)ಅಥವಾ ಚುರುಕುಗೇಡಿತನದ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಇದೊಂದು ಚುರುಕುಗೇಡಿತನ ಅಂದರೆ ವಿಭಿನ್ನ ಶಕ್ತಿ ಏನಿದರ ಲಕ್ಷಣಗಳು ಎಂದರೆ ಮೊದಲನೇಯದಾಗಿ ಒಂದು ಕೆಲಸಕ್ಕೆ ಹೆಚ್ಚು ಸಮಯ ಏಕಾಗ್ರತೆ ನೀಡುವುದು ಕಷ್ಟವಾಗುವುದು, ಪಾಠ, ಕಥೆ ಅಥವಾ ಮಾತು ಇವುಗಳ ಮಧ್ಯದಲ್ಲೇ ಮನಸ್ಸು ಬೇರೆಡೆ ಹೋಗುವುದು. ಒಂದೇ ಜಾಗದಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳುವುದು ಕಷ್ಟವಾಗುವುದು. ನಿರಂತರ ಚಟುವಟಿಕೆ, ಯಾವುದರ ಬಗ್ಗೆಯೂ ಯೋಚಿಸದೆ ತಕ್ಷಣ ಪ್ರತಿಕ್ರಿಯಿಸುವುದು ಚಿಕ್ಕ ತಪ್ಪುಗಳಿಗೆ ತೀವ್ರ ಬೇಸರ ವ್ಯಕ್ತಪಡಿಸುವುದು ಕೋಪ ಅಥವಾ ನಿರಾಸೆ ಸ್ಫೋಟಗೊಳ್ಳುವುದು. ವಸ್ತುಗಳು, ಪುಸ್ತಕಗಳು, ವಿಷಯಗಳು, ಕೆಲಸಗಳನ್ನು ಮರೆತು ಹೋಗುವುದು ಎಂದು ಅವರು ವಿವರಿಸಿದ್ದಾರೆ. ಅದೇನೆ ಇರಲಿ ಆದರೆ ಈ ಬಾಲಕನ ಬಾಲ್ಯದ ಮೊಂಡುತನಕ್ಕೆ ಜಾತಿಯ ಲೇಪನ ಮಾಡಿರುವುದು ಎಷ್ಟು ಸರಿ...
ಇದನ್ನೂ ಓದಿ: ಯುವ ನಟನಿಗೆ ನೀವು ಹೀರೋ ಮೆಟಿರಿಯಲ್ ಅಲ್ಲ ಎಂದು ಅವಮಾನಿಸಿದ ಪತ್ರಕರ್ತೆ: ಉತ್ತರ ನೀಡಿ ಹೀರೋ ಆದ ನಟ ಶರತ್‌ಕುಮಾರ್
ಇದನ್ನೂ ಓದಿ: ರಹಸ್ಯ ದಾಖಲೆ ಲೀಕ್? ಭಾರತೀಯ ಮೂಲದ ಅಮೆರಿಕಾ ರಕ್ಷಣಾ ತಂತ್ರಜ್ಞನ ಬಂಧನ
