Tamil Actor Sarathkumar: 'ಡ್ಯೂಡ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಪ್ರದೀಪ್ ರಂಗನಾಥನ್ ಅವರಿಗೆ ಅವಮಾನಿಸಿದ  ಪತ್ರಕರ್ತೆಗೆ, ಹಿರಿಯ ನಟ ಶರತ್‌ಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಹೀರೋ ಎಂದರೆ ಯಾರು ಎಂಬುದನ್ನು ವಿವರಿಸಿ, ಪತ್ರಕರ್ತೆಯ ಮಾತಿಗೆ ತಿರುಗೇಟು ನೀಡಿದ ಅವರ ವಿಡಿಯೋ ಭಾರಿ ವೈರಲ್ ಆಗಿದೆ.

ಯುವ ನಟನಿಗೆ ನೀವು ಹೀರೋ ಮೆಟಿರಿಯಲ್ ಅಲ್ಲ ಎಂದು ಅವಮಾನಿಸಿದ ಪತ್ರಕರ್ತೆ

ಸಿನಿಮಾದಲ್ಲಿ ಹೀರೋಗಳು ತುಂಬಾ ಜನ ಇರ್ತಾರೆ. ಆದ್ರೆ ರಿಯಲ್ ಲೈಫ್‌ನಲ್ಲೂ ಹೀರೋ ಆಗುವವರು ಬಹಳ ವಿರಳ. ಆದರೆ ತಮಿಳಿನ ಖ್ಯಾತ ನಟ ಆರ್ ಶರತ್‌ಕುಮಾರ್ ಅವರು ನಿಜ ಜೀವನದಲ್ಲೂ ಅವರೊಬ್ಬ ಹೀರೋ ಮಾನವೀಯ ವ್ಯಕ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು, ತೆಲುಗಿನ ಡ್ಯೂಡ್ ಸಿನಿಮಾದ ಪ್ರೆಸ್‌ಮೀಟ್‌. ಈ ಡ್ಯೂಡ್ ಸಿನಿಮಾದ ಹೀರೋ ಪ್ರದೀಪ್ ರಂಗನಾಥನ್ ಅವರನ್ನು ನೋಡಿದ ಮಹಿಳಾ ಪತ್ರಕರ್ತೆಯೊಬ್ಬರು ಸುದ್ದಿಗೋಷ್ಠಿಯಲ್ಲಿ ಅವರನ್ನು ನಯವಾಗಿಯೇ ವ್ಯಂಗ್ಯ ಮಾಡಿದ್ದಾರೆ.

ಡಯೂಡ್ ಸಿನಿಮಾದ ಟ್ರೈಲರ್ ಲಾಂಚ್‌ಗೆ ಆಯೋಜಿಸಿದ್ದ ಈ ಸುದ್ದಿಗೋಷ್ಠಿಯಲ್ಲಿ ಮೈಕ್ ಪಡೆದ ಪತ್ರಕರ್ತೆ ನೀವು ಹೀರೋ ಮೆಟಿರಿಯಲ್ ರೀತಿ ಕಾಣಿಸ್ತಿಲ್ಲ, ಆದರೂ ಹೀರೋ ಆಗಿದ್ದೀರಿ, ಇದರ ಹಿಂದೆ ಹಾರ್ಡ್‌ವರ್ಕ್‌ ಇದ್ಯಾ ಅಥವಾ ಅದೃಷ್ಟ ಇದೆಯಾ ಎಂದು ಆ ಪತ್ರಕರ್ತೆ ಪ್ರಶ್ನಿಸಿದ್ದಾಳೆ. ಈ ವೇಳೆ ಪ್ರದೀಪ್ ರಂಗನಾಥ್ ಅವರು ಮಾತನಾಡಲು ತಡವರಿಸಿದ್ದಾರೆ. ಇದೇ ಸುದ್ದಿಗೋಷ್ಠಿಯಲ್ಲಿ ತಮಿಳಿನ ಖ್ಯಾತ ನಟ ಶರತ್‌ಕುಮಾರ್ ಅವರು ಕೂಡ ಹಾಜರಿದ್ದರು. ಪತ್ರಕರ್ತೆಯ ಪ್ರಶ್ನೆ ಕೇಳಿದ ಅವರು ಕೂಡಲೇ ಪ್ರದೀಪ್ ರಂಗನಾಥನ್ ಅವರ ಕೈನಿಂದ ಮೈಕ್ ಪಡೆದು ಆ ಪ್ರಶ್ನೆಗೆ ಉತ್ತರಿಸಿದ್ದು, ಪತ್ರಕರ್ತೆಯ ಉದ್ಧಟತನಕ್ಕೆ ಚಾಟಿ ಬೀಸಿದ್ದಾರೆ.

ಹೀರೋ ಮೆಟಿರಿಯಲ್ ವಿಚಾರದ ಬಗ್ಗೆ ಶರತ್‌ಕುಮಾರ್ ಹೇಳಿದ್ದೇನು?

ಪ್ರದೀಪ್ ಅವರ ಕೈನಿಂದ ಮೈಕ್ ಪಡೆದ ಶರತ್‌ಕುಮಾರ್ ಅವರು ಸಾರಿ ಪ್ರದೀಪ್ ನಿಮ್ಮ ಕೈನಿಂದ ನಾನು ಮೈಕ್ ತಗೊಂಡೆ ಎಂದು ಅವರಿಗೆ ಕ್ಷಮೆ ಕೇಳುತ್ತಲೇ ಶರತ್‌ಕುಮಾರ್ ಮಹಿಳಾ ಪತ್ರಕರ್ತೆಯ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ನಾನು ಹಲವು ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿ ಇದ್ದೇನೆ. 170 ಸಿನಿಮಾಗಳನ್ನು ಮಾಡಿದ್ದೇನೆ. ನೀವು ಹೀರೋ ಮೆಟಿರಿಯಲ್ ಯಾರು ಎಂಬ ಬಗ್ಗೆ ಎ ಟು ಜೆಡ್ ಹೇಳುವಂತಿಲ್ಲ ಮ್ಯಾಡಮ್, ಇಲ್ಲಿರುವ ಪ್ರತಿಯೊಬ್ಬರೂ ಹೀರೋ ಮೆಟಿರಿಯಲ್‌ಗಳೇ, ಹೀರೋ ರೀತಿ ಕಾಣುವುದಕ್ಕೆ ಹೀರೋಗೆ ಇಂತಹದ್ದೇ ಆದ ನಿರ್ದಿಷ್ಟವಾದ ವಿಶೇಷಣಗಳಿಲ್ಲ. ಸಮಾಜಕ್ಕೆ ಪ್ರಯೋಜನಕಾರಿಯಾದ ಯಾವುದೇ ಕೆಲಸವನ್ನು ಮಾಡುವ ವ್ಯಕ್ತಿ ಹೀರೋ ಎನಿಸುತ್ತಾನೆ ಎಂದು ಹೇಳುವ ಮೂಲಕ ಯಾರು ಬೇಕಾದರೂ ಹೀರೋ ಆಗಬಹುದು ಎಂದು ಶರತ್‌ಕುಮಾರ್ ಹೇಳಿದ್ದಾರೆ. ಹೀರೋ ಆಗಲು ಯಾವುದೇ ಮಾನದಂಡಗಳಿಲ್ಲ ಎಂದು ಅವರು ಉತ್ತರಿಸುತ್ತಾ ಪ್ರದೀಪ್ ರಂಗನಾಥನ್ ಅವರ ಬಳಿ ನೆಗೆಟಿವ್ ಆಗಿ ಪ್ರಶ್ನೆ ಕೇಳಿ ಮುಜುಗರಕ್ಕೀಡು ಮಾಡಿದ ಪತ್ರಕರ್ತೆಗೆ ಚಾಟಿ ಬೀಸಿದ್ದಾರೆ.

ಶರತ್‌ಕುಮಾರ್ ಮಾತಿಗೆ ನೆಟ್ಟಿಗರ ಶಹಭಾಷ್‌

ಡ್ಯೂಡ್ ಸಿನಿಮಾದ ಟ್ರೈಲರ್ ಲಾಂಚ್‌ನಲ್ಲಿ ನಡೆದ ಈಘಟನೆಯಲ್ಲಿ ಶರತ್‌ ಕುಮಾರ್ ಮಾತನಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿದ್ದು, ಅನೇಕರು ಶರತ್‌ ಕುಮಾರ್ ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕರು ಈ ವೀಡಿಯೋ ನೋಡಿದ ನಂತರ ಶರತ್‌ಕುಮಾರ್ ಮೇಲಿನ ಗೌರವ ಜಾಸ್ತಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಶರತ್‌ಕುಮಾರ್ ಉತ್ತರ ಬೆಂಕಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವರ ನಟನೆಯೇ ನಿಮಗೆ ಉತ್ತರ. ಚಿತ್ರದಲ್ಲಿ ಅವರ ನಟನೆ ಅದ್ಭುತ. ನಾಯಕನ ಪಾತ್ರವೂ ವಿಫಲವಾಗಿದೆ. ಲುಕ್‌ಗಾಗಿ ಸಿನಿಮಾಗೆ ಹೋಗಬೇಡಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮಾನದಂಡಕ್ಕೆ ತಕ್ಕಂತೆ ಆತ ಇಲ್ಲ ಎಂಬ ಮಾತ್ರಕ್ಕೆ ಆತ ಹೀರೋ ಅಲ್ಲ ಎಂದಲ್ಲ ಎಂದು ಅನೇಕರು ಪ್ರದೀಪ್ ರಂಗನಾಥನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಸಿನಿಮಾಗಳ ಹೀರೋಗಳು ಎಂದರೆ ಬಹುತೇಕರು ಆತ ಚೆನ್ನಾಗಿರಬೇಕು ಸೊಗಸಾದ ಮೈಕಟ್ಟು ಎತ್ತರವನ್ನು ಹೊಂದಿರಬೇಕು. ಹಾಗಿದ್ದರೆ ಆತ ಹೀರೋ ಎಂಬ ಮನಸ್ಥಿತಿ ಅನೇಕದ್ದು. ಅದೇ ಕಾರಣಕ್ಕೆ ಇಲ್ಲಿ ಪತ್ರಕರ್ತೆ ಯೋಚನೆ ಮಾಡದೇ ಮಿದುಳನ್ನು ಹೊರಗೆ ತೆಗೆದಿಟ್ಟು ಮಾತನಾಡಿ, ಶರತ್‌ಕುಮಾರ್ ಅವರಿಂದ ಬಟ್ಟೆ ಸುತ್ತಿ ಹೊಡೆಸಿಕೊಂಡಿದ್ದಾಳೆ. ಹೀರೋ ಎನ್ನುವವರಿಗೆ ಕೆಲವರು ಬಯಸಿದ ಯಾವುದೇ ಮಾನದಂಡಗಳಿಲ್ಲದೆಯೇ ಅನೇಕರು ತಮ್ಮ ಪ್ರತಿಭೆ ಮ್ಯಾನರಿಸಂನಿಂದ ಹೀರೋಗಳಾಗಿದ್ದಾರೆ. ಅವರನ್ನು ಲಕ್ಷಾಂತರ ಜನ ಹೀರೋ ಎಂದು ಒಪ್ಪಿಕೊಂಡಿದ್ದಾರೆ. ಅದಕ್ಕೊಂದು ಉದಾಹರಣೆ ತಮಿಳು ನಟ ಧನುಷ್. ಅವರೀಗೆ ಜನ ಬಯಸುವಂತಹ ಫಿಸಿಕ್ ಇಲ್ಲ, ಆದರೂ ಅವರು ತಮಿಳು ಚಿತ್ರರಂಗದಲ್ಲಿ ಇಂದು ದೊಡ್ಡ ಹೀರೋ. ಅದೃಷ್ಟಕ್ಕಿಂತಲೂ ಇಲ್ಲಿ ಶ್ರಮ ನಟನೆ ಕಠಿಣ ಪರಿಶ್ರಮ ಸ್ಕ್ರೀನ್ ಪ್ಲೇ ಹಾಗೂ ಚಿತ್ರಕತೆ ತುಂಬಾ ಮುಖ್ಯವಾಗುತ್ತದೆ. ಹಾಗೆಯೇ ಯಾವುದೇ ದೊಡ್ಡ ಹೀರೋಗಳಿಲ್ಲದೆಯೇ ಸಖತ್ ಹಿಟ್ ಆದ ಕನ್ನಡದ ಸುಫ್ರಂಸೋ ಕೂಡ ಹೀರೋಗಳಿಗೆ ಯಾವುದೇ ಮಾನದಂಡ ಇಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಆಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.

ಇದನ್ನೂ ಓದಿ: ರಹಸ್ಯ ದಾಖಲೆ ಲೀಕ್? ಭಾರತೀಯ ಮೂಲದ ಅಮೆರಿಕಾ ರಕ್ಷಣಾ ತಂತ್ರಜ್ಞನ ಬಂಧನ

ಇದನ್ನೂ ಓದಿ: ಕೇರಳ: ಡ್ರಗ್ ಮಾರಿ ಕಂಡವರ ಮಕ್ಕಳ ಬಾವಿಗೆ ತಳ್ಳುತ್ತಿದ್ದ ಮಹಿಳಾ ವಕೀಲೆ, 18 ವರ್ಷದ ಪುತ್ರ ಅರೆಸ್ಟ್

View post on Instagram