Supreme Court Rebukes Wife for Demanding ₹5 Cr Alimony After One Year of Marriage ಕೇವಲ ಒಂದು ವರ್ಷದ ದಾಂಪತ್ಯವನ್ನು ಕೊನೆಗೊಳಿಸಲು ಪತ್ನಿ 5 ಕೋಟಿ ರೂಪಾಯಿ ಜೀವನಾಂಶ ಕೇಳಿದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಆಕೆಯ ಬೇಡಿಕೆಯನ್ನು ಅಸಮಂಜಸ ಎಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಿದೆ.

ನವದೆಹಲಿ (ಸೆ.22): ವಿವಾಹ ವಿಚ್ಛೇದನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಒಂದು ವರ್ಷದ ದಾಂಪತ್ಯವನ್ನು ಕೊನೆಗೊಳಿಸಲು ಪತ್ನಿ 5 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದನ್ನು ಕೇಳಿ ಸುಪ್ರೀಂ ಕೋರ್ಟ್‌ ಕಠಿಣ ಎಚ್ಚರಿಕೆ ನೀಡಿರೆ. ಹೆಚ್ಚಿನ ಇತ್ಯರ್ಥ ಚರ್ಚೆಗಾಗಿ ಎರಡೂ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಮರಳುವಂತೆ ಪೀಠವು ನಿರ್ದೇಶನ ನೀಡಿದ್ದು, ಅಂತಹ ಬೇಡಿಕೆಗಳು ಮುಂದುವರಿದರೆ ನ್ಯಾಯಾಲಯವು "ತುಂಬಾ ಕಠಿಣ ಆದೇಶ" ಹೊರಡಿಸಬಹುದು ಎಂದು ಹೇಳಿದೆ.

ಮದುವೆ ಕೇವಲ ಒಂದು ವರ್ಷ ಮಾತ್ರವೇ ಇತ್ತು ಎಂದು ಪೀಠ ಗಮನಿಸಿದೆ. ಬರೀ ಒಂದೇ ವರ್ಷ ಮದುವೆಯಾಗಿದ್ದರೂ, ಆಕೆಯ ಹೆಚ್ಚಿನ ಆರ್ಥಿಕ ಬೇಡಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪತಿಯ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿ ಪಾರ್ದಿವಾಲಾ, 'ಆಕೆಯನ್ನು ನೀವು ಮತ್ತೆ ಸಂಸಾರಕ್ಕೆ ಕರೆಯುವ ಮೂಲಕ ನೀವು ತಪ್ಪು ಮಾಡುತ್ತಿದ್ದೀರಿ. ಆಕೆಯನ್ನು ಉಳಿಸಿಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ. ಆಕೆಯ ಕನಸುಗಳು ತುಂಬಾ ದೊಡ್ಡದಾಗಿವೆ' ಎಂದು ಹೇಳಿದರು.

5 ಕೋಟಿ ಜೀವನಾಂಶ ಬೇಡಿಕೆ ಅಸಮಂಜಸ

5 ಕೋಟಿ ರೂಪಾಯಿಗಳ ಬೇಡಿಕೆಯನ್ನು ಅಸಮಂಜಸ ಎಂದು ವಿವರಿಸಿದ ನ್ಯಾಯಾಲಯ, ಅಂತಹ ನಿಲುವು ಪ್ರತಿಕೂಲ ಆದೇಶಗಳನ್ನು ಆಹ್ವಾನಿಸಬಹುದು ಎಂದು ಹೇಳಿದೆ. "ಇತ್ಯರ್ಥ ಮಾಡಿಕೊಳ್ಳಲು ಕಕ್ಷಿದಾರರು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಹಿಂತಿರುಗಬೇಕೆಂದು ನಾವು ನಿರ್ದೇಶಿಸುತ್ತೇವೆ. ಮದುವೆಯನ್ನು ಮುರಿಯಲು ಪತ್ನಿ 5 ಕೋಟಿ ರೂಪಾಯಿಗಳನ್ನು ಕೇಳಿದ್ದಾರೆಂದು ನಮಗೆ ತಿಳಿಸಲಾಗಿದೆ. ಕಕ್ಷಿದಾರರ ನಡುವಿನ ವೈವಾಹಿಕ ಜೀವನವು ಕೇವಲ ಒಂದು ವರ್ಷ ಮಾತ್ರವೇ ನಡೆದಿದೆ" ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದರು.

"ಹೆಂಡತಿಯ ನಿಲುವು ಹೀಗಿದ್ದರೆ, ಆಕೆಗೆ ಇಷ್ಟವಾಗದ ಕೆಲವು ಆದೇಶಗಳನ್ನು ನಾವು ಹೊರಡಿಸಬೇಕಾಗಬಹುದು. ಸರಿಯೇ? ಪತ್ನಿ ಸಮಂಜಸವಾದ ಬೇಡಿಕೆಯನ್ನು ಮುಂದಿಟ್ಟು ಈ ಮೊಕದ್ದಮೆಯನ್ನು ಕೊನೆಗೊಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದರು.

35-40 ಲಕ್ಷ ನೀಡುವುದಾಗಿ ಹೇಳಿರುವ ಪತಿ

ನ್ಯಾಯಾಲಯದ ಮುಂದೆ ಸಲ್ಲಿಕೆಯಾಗಿರುವ ಮಾಹಿತಿಯ ಪ್ರಕಾರ, ಅಮೆಜಾನ್‌ನಲ್ಲಿ ಎಂಜಿನಿಯರ್ ಆಗಿರುವ ಪತಿ, ಕಾನೂನು ವಿವಾದವನ್ನು ಕೊನೆಗೊಳಿಸಲು ಪೂರ್ಣ ಮತ್ತು ಅಂತಿಮ ಇತ್ಯರ್ಥವಾಗಿ 35 ರಿಂದ 40 ಲಕ್ಷ ರೂ.ಗಳವರೆಗೆ ಕೊಡುಗೆ ನೀಡಿದ್ದಾರೆ. ಆದರೆ, ಪತ್ನಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.

ಅಕ್ಟೋಬರ್ 5 ರಂದು ಬೆಳಿಗ್ಗೆ 11.30 ಕ್ಕೆ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾಗುವಂತೆ ನ್ಯಾಯಾಲಯ ಎರಡೂ ಕಡೆಯವರನ್ನು ಕೇಳಿದೆ. ಮಧ್ಯಸ್ಥಿಕೆ ವರದಿ ಸಲ್ಲಿಸಿದ ನಂತರ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು ಎಂದಿದೆ.

ವಿಚಾರಣೆಯ ಸಮಯದಲ್ಲಿ, ಪತ್ನಿಯ ಪರ ವಕೀಲರು ಹಿಂದಿನ ಮಧ್ಯಸ್ಥಿಕೆ ಪ್ರಯತ್ನಗಳು ವಿಫಲವಾಗಿವೆ ಎಂದು ಪೀಠಕ್ಕೆ ತಿಳಿಸಿದರು. ವೈಫಲ್ಯದ ಹಿಂದಿನ ಕಾರಣಗಳನ್ನು ನ್ಯಾಯಾಲಯ ಪ್ರಶ್ನಿಸಿತು ಮತ್ತು ಪರಿಹಾರವನ್ನು ಸುಲಭಗೊಳಿಸಲು ಹೆಚ್ಚು ಸಮಂಜಸವಾದ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಪತ್ನಿಗೆ ತಿಳಿಸಿದೆ.