ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದ ಟ್ರಕ್ ಡಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಪ್ರಿಯಾಂಕಾ ಕುಮಾರಿ ಪೂನಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಣ್ಣನೊಂದಿಗೆ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಬೆಂಗಳೂರು: ನಗರದ ಹೊರವಲಯದ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ರಸ್ತೆ ಬಳಿ ಸಂಭವಿಸಿದ ದುರಂತ ಅಪಘಾತದಲ್ಲಿ ಯುವ ಬ್ಯಾಂಕ್ ಉದ್ಯೋಗಿಯೊಬ್ಬರು ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಮೃತಳನ್ನು ಪ್ರಿಯಾಂಕಾ ಕುಮಾರಿ ಪೂನಿಯಾ (26) ಎಂದು ಗುರುತಿಸಲಾಗಿದೆ.
ಪ್ರಿಯಾಂಕಾ ಬೆಂಗಳೂರಿನ ಯುಕೆ ಮೂಲದ ಒನ್‌ಸೇವಿಂಗ್ಸ್ ಬ್ಯಾಂಕ್ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತಮ್ಮ ಅಣ್ಣ ನರೇಶ್ ಕುಮಾರ್ ಪೂನಿಯಾ ಅವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಶುಕ್ರವಾರವೂ ಎಂದಿನಂತೆ ಅವರು ಅಣ್ಣನೊಂದಿಗೆ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ಮೆಟ್ರೋ ಸ್ಟೇಷನ್ ಗೆ ಅಣ್ಣನೊಂದಿಗೆ ಬರುತ್ತಿದ್ದ ತಂಗಿ
ಘಟನೆ ಬೆಳಿಗ್ಗೆ 10.55ರ ಸುಮಾರಿಗೆ ಲೈಟ್ಸ್ ಮೆಕ್ಯಾನಿಕ್ ಕಂಪನಿ ಹತ್ತಿರ ನಡೆದಿದೆ. ಪ್ರಿಯಾಂಕಾ ಅವರನ್ನು ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಇಳಿಸಲು ನರೇಶ್ ಬೈಕ್ ಚಾಲನೆ ಮಾಡುತ್ತಿದ್ದರು. ಇದೇ ವೇಳೆ ದಾಸನಪುರದ ಎಪಿಎಂಸಿ ಮಾರ್ಕೆಟ್ ದಿಕ್ಕಿಗೆ ಸಾಗುತ್ತಿದ್ದ ಟ್ರಕ್ ಒಂದು ರಸ್ತೆಯಲ್ಲಿದ್ದ ಆಳವಾದ ಗುಂಡಿಯನ್ನು ತಪ್ಪಿಸಲು ಬಲಕ್ಕೆ ತಿರುಗಿತು. ಅಷ್ಟರೊಳಗೆ ಟ್ರಕ್‌ನ ಬದಿ ಭಾಗವು ನರೇಶ್‌ರ ಬೈಕ್ ಹ್ಯಾಂಡಲ್‌ಗೆ ತಾಗಿದ ಪರಿಣಾಮ, ಬೈಕ್‌ನ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದರು.
ದುರಂತವೆಂದರೆ, ಬಲಭಾಗಕ್ಕೆ ಬಿದ್ದ ಪ್ರಿಯಾಂಕಾ ಮೇಲೆ ಟ್ರಕ್‌ನ ಚಕ್ರ ಹರಿದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಎಡಭಾಗಕ್ಕೆ ಬಿದ್ದ ಅಣ್ಣ ನರೇಶ್ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು ಜೀವ ಉಳಿದಿದೆ. ಪ್ರಿಯಾಂಕಾ ದಾಸನಪುರದ ಆಲೂರು ಕ್ರಿಕೆಟ್ ಮೈದಾನದ ಬಳಿ ಇರುವ ಆಲೂರು ಬಿಡಿಎ ಹಂತ 2ರಲ್ಲಿ ವಾಸಿಸುತ್ತಿದ್ದರು. ಅವರು ತಾಂತ್ರಿಕ ಶಿಕ್ಷಣ ಪಡೆದ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದರು.
ಟ್ರಕ್ ನಿಂದ ಜೀವ ಹೋಯ್ತು
ಅಪಘಾತದ ನಂತರ ಮಾತನಾಡಿದ ಅಣ್ಣ ನರೇಶ್ ಪ್ರತಿದಿನದಂತೆ ನಾನು ತಂಗಿಯನ್ನು ಮೆಟ್ರೋ ನಿಲ್ದಾಣದಲ್ಲಿ ಇಳಿಸಲು ಹೋಗಿದ್ದೆ. ರಸ್ತೆಯಲ್ಲಿ ದೊಡ್ಡ ಗುಂಡಿ ಇದ್ದುದರಿಂದ ನಮ್ಮ ಮುಂದೆ ಕಾರು ನಿಧಾನವಾಯ್ತು. ನಾನು ತುರ್ತು ಬ್ರೇಕ್ ಹಾಕಿದ್ದೆ, ಆದರೆ ಆ ಕ್ಷಣದಲ್ಲಿ ಏನಾಗಿತ್ತೆಂದು ಅರ್ಥವಾಗಲಿಲ್ಲ. ನನ್ನ ತಂಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಭಾವುಕರಾದರು.
ನಮ್ಮ ಮೋಟಾರ್ ಸೈಕಲ್ ಹ್ಯಾಂಡಲ್ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಯ್ತು. ಟ್ರಕ್ ನಿಲ್ಲದೇ ಮುಂದುವರಿದ ಪರಿಣಾಮ ನನ್ನ ತಂಗಿ ಟ್ರಕ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದರು. ಆ ರಸ್ತೆ ಕಳೆದ ಏಳು ತಿಂಗಳಿಗೂ ಹೆಚ್ಚು ಕಾಲ ಕೆಟ್ಟ ಸ್ಥಿತಿಯಲ್ಲಿದೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಆಡಳಿತದ ಮೇಲೆ ತೀವ್ರ ಚರ್ಚೆ
ಈ ಘಟನೆ ಬೆಂಗಳೂರಿನ ರಸ್ತೆಗಳ ಕಳಪೆ ಗುಣಮಟ್ಟ ಮತ್ತು ನಿರ್ಲಕ್ಷ್ಯದ ಆಡಳಿತದ ಮೇಲೆ ತೀವ್ರ ಚರ್ಚೆ ಹುಟ್ಟುಹಾಕಿದೆ. ನಾಗರಿಕರು ಹಲವು ಬಾರಿ ದೂರು ನೀಡಿದರೂ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಟ್ರಕ್ ಚಾಲಕನ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ನಗರದಲ್ಲಿ ಕಳೆದ ಕೆಲವು ತಿಂಗಳಲ್ಲಿ ರಸ್ತೆ ಗುಂಡಿಗಳಿಂದಾಗುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷತೆ ಕುರಿತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಹೆಚ್ಚಾಗಿದೆ.
