Rajnath Singh Warns Pakistan on Sir Creek Dispute ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಗಡಿ ವಿವಾದವನ್ನು ಕೆರಳಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಅಹಮದಾಬಾದ್ (ಅ.2): ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಗಡಿ ವಿವಾದ ಸೃಷ್ಟಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಆರೋಪಿಸಿದ್ದಾರೆ. "ಸ್ವಾತಂತ್ರ್ಯ ಬಂದು 78 ವರ್ಷಗಳಾದ ನಂತರವೂ, ಸರ್ ಕ್ರೀಕ್ ಪ್ರದೇಶದಲ್ಲಿ ಗಡಿ ವಿವಾದವನ್ನು ಕೆರಳಿಸಲಾಗುತ್ತಿದೆ. ಭಾರತವು ಮಾತುಕತೆಯ ಮೂಲಕ ಅದನ್ನು ಪರಿಹರಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ, ಆದರೆ ಪಾಕಿಸ್ತಾನದ ಉದ್ದೇಶಗಳಲ್ಲೇ ದೋಷವಿದ್ದಂತೆ ಕಾಣುತ್ತಿದೆ. ಆ ದೇಶದ ಉದ್ದೇಶಗಳು ಸ್ಪಷ್ಟವಾಗಿಲ್ಲ. ಪಾಕಿಸ್ತಾನ ಸೇನೆಯು ಇತ್ತೀಚೆಗೆ ಸರ್ ಕ್ರೀಕ್ ಪಕ್ಕದ ಪ್ರದೇಶಗಳಲ್ಲಿ ತನ್ನ ಮಿಲಿಟರಿ ಮೂಲಸೌಕರ್ಯವನ್ನು ವಿಸ್ತರಿಸಿದ ರೀತಿ ಅದರ ಉದ್ದೇಶಗಳನ್ನು ಬಹಿರಂಗಪಡಿಸುತ್ತದೆ" ಎಂದು ವಿಜಯ ದಶಮಿಯ ಸಂದರ್ಭದಲ್ಲಿ ಭುಜ್‌ನಲ್ಲಿ ಸಿಂಗ್ ಹೇಳಿದರು.

ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ಜಂಟಿಯಾಗಿ ಮತ್ತು ಎಚ್ಚರಿಕೆಯಿಂದ ಭಾರತದ ಗಡಿಗಳನ್ನು ರಕ್ಷಿಸುತ್ತಿವೆ ಎಂದು ಸಚಿವರು ಹೇಳಿದರು. "ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಯಾವುದೇ ದುಸ್ಸಾಹಸಕ್ಕೆ ಯತ್ನಿಸಿದರೆ, ಇತಿಹಾಸ ಮತ್ತು ಭೌಗೋಳಿಕತೆ ಎರಡೂ ಬದಲಾಗುವಷ್ಟು ನಿರ್ಣಾಯಕ ಪ್ರತಿಕ್ರಿಯೆಯನ್ನು ಅದು ಪಡೆಯಲಿದೆ. 1965 ರ ಯುದ್ಧದಲ್ಲಿ, ಭಾರತೀಯ ಸೇನೆಯು ಲಾಹೋರ್ ತಲುಪುವ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಇಂದು 2025 ರಲ್ಲಿ, ಕರಾಚಿಗೆ ಹೋಗುವ ಒಂದು ಮಾರ್ಗವು ಸರ್‌ ಕ್ರೀಕ್‌ ಪ್ರದೇಶದಿಂದಲೇ ಹಾದುಹೋಗುತ್ತದೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಅವರು ಹೇಳಿದರು.

ಸರ್ ಕ್ರೀಕ್ ಗುಜರಾತ್‌ನ ಕಚ್ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಡುವೆ ಇರುವ 96 ಕಿ.ಮೀ ಉದ್ದದ ನದೀಮುಖಜ ಪ್ರದೇಶ. ಗಡಿಯು ಕೊಲ್ಲಿಯ ಮಧ್ಯದಲ್ಲಿರಬೇಕೆಂದು ಭಾರತ ಮೊದಲಿನಿಂದಲೂ ಹೇಳುತ್ತಲೇ ಬಂದಿದೆ. ಆದರೆ, ಪಾಕಿಸ್ತಾನವು ಗಡಿಯು ಪೂರ್ವ ದಂಡೆಯಲ್ಲಿ, ಭಾರತಕ್ಕೆ ಹತ್ತಿರದಲ್ಲಿರಬೇಕೆಂದು ಹೇಳುತ್ತಿದೆ. ಇದೇ ಕಾರಣಕ್ಕಾಗಿ ಸರ್ ಕ್ರೀಕ್‌ನ ಮೀನುಗಾರರು ಆಗಾಗ್ಗೆ ಈ ಘರ್ಷಣೆಯಲ್ಲಿ ಸಿಲುಕಿಕೊಳ್ಳುತ್ತಾರೆ.

ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ಶಕ್ತಿಗಳು, ಅವರು ಎಲ್ಲೇ ಅಡಗಿಕೊಂಡಿದ್ದರೂ, ನಿರ್ಮೂಲನೆಯಾಗುತ್ತವೆ ಎಂಬುದನ್ನು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿಸಿವೆ ಎಂದು ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

Scroll to load tweet…

ಆಪರೇಷನ್‌ ಸಿಂದೂರ್‌ ಎಲ್ಲವನ್ನೂ ತೋರಿಸಿದೆ

"ಇಂದಿನ ಭಾರತ ಹೇಳುವುದೇನೆಂದರೆ, ಭಯೋತ್ಪಾದನೆಯಾಗಲಿ ಅಥವಾ ಯಾವುದೇ ರೀತಿಯ ಸಮಸ್ಯೆಯಾಗಲಿ, ಅದನ್ನು ಎದುರಿಸುವ ಮತ್ತು ಸೋಲಿಸುವ ಸಾಮರ್ಥ್ಯ ನಮಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ, ಪಾಕಿಸ್ತಾನವು ಲೇಹ್‌ನಿಂದ ಸರ್ ಕ್ರೀಕ್‌ನ ಈ ಪ್ರದೇಶದವರೆಗೆ ಭಾರತದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ವಿಫಲ ಪ್ರಯತ್ನ ಮಾಡಿತು. ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದವು ಮತ್ತು ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮತ್ತು ಹೇಗೆ ಬೇಕಾದರೂ ಭಾರೀ ಹಾನಿಯನ್ನುಂಟುಮಾಡಬಹುದು ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದವು. ನಮ್ಮ ಸಾಮರ್ಥ್ಯಗಳ ಹೊರತಾಗಿಯೂ, ನಮ್ಮ ಮಿಲಿಟರಿ ಕ್ರಮವು ಭಯೋತ್ಪಾದನೆಯ ವಿರುದ್ಧ ನಿರ್ದೇಶಿಸಲ್ಪಟ್ಟಿದ್ದರಿಂದ ನಾವು ಸಂಯಮವನ್ನು ಕಾಯ್ದುಕೊಂಡೆವು. ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ಮತ್ತು ಯುದ್ಧ ನಡೆಸುವುದು ಆಪರೇಷನ್ ಸಿಂಧೂರ್‌ನ ಉದ್ದೇಶವಾಗಿರಲಿಲ್ಲ. ಭಾರತೀಯ ಪಡೆಗಳು ಆಪರೇಷನ್ ಸಿಂಧೂರ್‌ನ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಿವೆ ಎಂದು ನನಗೆ ಸಂತೋಷವಾಗಿದೆ. ಹಾಗಿದ್ದರೂ, ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟ ಮುಂದುವರೆದಿದೆ," ಎಂದು ಅವರು ಹೇಳಿದರು.