ಪುಣೆಯ ಸಾಫ್ಟ್‌ವೇರ್ ಎಂಜಿನಿಯರ್ ಜುಬೈರ್ ಹಂಗರ್ಗೇಕರ್‌ನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಈತ, ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಾ, ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬಹಿರಂಗಗೊಂಡಿದೆ.

ಮೊದಲಿನಿಂದಲೂ ಟಾಪರ್​ ಆಗಿದ್ದು, ಕಾಲೇಜು ಕ್ರಿಕೆಟ್​ ತಂಡದ ನಾಯಕನೂ ಆಗಿದ್ದೂ ಅಲ್ಲದೇ ಪುಣೆಯ ಕಂಪೆನಿಯೊಂದರಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿ ಲಕ್ಷ ಲಕ್ಷ ರೂಪಾಯಿಗಳ ಹಣ ಗಳಿಸುತ್ತಿದ್ದವನೊಬ್ಬ ಈಗ ಉಗ್ರ ಎನ್ನುವ ಶಾಕಿಂಗ್​ ವರದಿಯೊಂದು ಬಹಿರಂಗಗೊಂಡಿದೆ. ಸೋಲಾಪುರದ ನಿವಾಸಿ ಜುಬೈರ್ ಹಂಗರ್ಗೇಕರ್ (Zubair Hangargekar) ಎಂಬ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಈತ ಸಂಪರ್ಕ ಹೊಂದಿರುವ ಬಗ್ಗೆ ಶಂಕೆ ಇದ್ದ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ ಸಿಬ್ಬಂದಿ ಕಳೆದೊಂದು ತಿಂಗಳಿಂದ ಈತನ ಮೇಲೆ ತೀವ್ರ ನಿಗಾ ವಹಿಸಿದ್ದರು. ವಿಚಾರಣೆ ವೇಳೆ ಈತನ ಅಸಲಿ ಮುಖ ಬಹಿರಂಗಗೊಂಡಿದೆ.

ದುಷ್ಕೃತ್ಯಗಳಿಗೆ ಹೊಂಚು

ಪುಣೆಯ ಕೊಂಧ್ವಾದಲ್ಲಿ ಈತನನ್ನು ಬಂಧಿಸಲಾಗಿದ್ದು, ಕೋರ್ಟ್​ಗೆ ಹಾಜರು ಪಡಿಸಲಾಗಿದೆ. ಈತ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಮಾತ್ರವಲ್ಲದೇ, ಹಲವಾರು ದುಷ್ಕೃತ್ಯಗಳಿಂದ ಹೊಂಚು ಹಾಕಿರುವ ಆತಂಕಕಾರಿ ವಿಷಯಗಳು ಬಹಿರಂಗಗೊಂಡಿವೆ. ವಿವಿಧ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಬಗ್ಗೆ ತನಿಖಾ ದಳವು ಕೋರ್ಟ್​ಗೆ ಮಾಹಿತಿ ನೀಡಿದೆ. ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ 9ನೇ ತಾರೀಖಿನಂದು ಭಯೋತ್ಪಾದನಾ ನಿಗ್ರಹ ದಳವು ಪುಣೆಯ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಕಾರಣ, ಉಗ್ರ ಸಂಘಟನೆ ಕಾರ್ಯಪ್ರವೃತ್ತರಾಗಿರುವುದು ತಿಳಿದಿತ್ತು. ಈ ಸಂದರ್ಭದಲ್ಲಿ, ಭಯೋತ್ಪಾದಕ ಜಾಲದ ಸುಳಿವು ನೀಡುವ ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳು ಮತ್ತು ವಸ್ತುಗಳೂ ಪತ್ತೆಯಾಗಿದ್ದವು. ಇದರ ಬೆನ್ನಟ್ಟಿ ಹೋದಾಗ ಈ ಸಾಫ್ಟ್​ವೇರ್​ ಎಂಜಿನಿಯರ್​ ಮುಖ ಬಹಿರಂಗಗೊಂಡಿದೆ.

ಬಾಂಬ್​ ತಯಾರಿಕೆ

ಬಂಧಿತ ಟೆಕ್ಕಿಯ ಬಳಿ ಒಸಾಮಾ ಬಿನ್ ಲಾಡೆನ್ ಭಾಷಣಗಳು ಮತ್ತು ಬಾಂಬ್ ತಯಾರಿಕೆ ಮಾರ್ಗದರ್ಶಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯು ಅಲ್-ಖೈದಾ ಸಂಪರ್ಕಗಳಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಎಕೆ -47 ರೈಫಲ್ ಹಿಡಿದು ಬಾಂಬ್ ತಯಾರಿಸುತ್ತಿರುವುದನ್ನು ತೋರಿಸುವ ಫೋಟೋಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಇದಾಗಲೇ ತನಿಖಾಧಿಕಾರಿಗಳು ಹಲವಾರು ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.