Prayagraj Journalist Brutally Murdered: ಉಪ್ರ ಪ್ರಯಾಗ್‌ರಾಜ್‌ನಲ್ಲಿ ಪತ್ರಕರ್ತ ಪಪ್ಪು ಸಿಂಗ್ ಅಲಿಯಾಸ್ ಲಕ್ಷ್ಮಿ ನಾರಾಯಣ್ ಸಿಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಯಾಗ್‌ರಾಜ್‌ನ ಹೋಟೆಲ್ ಮುಂದೆ ಅವರ ಮೇಲೆ ಹಲ್ಲೆ ನಡೆದಿದೆ. ಈ ಘಟನೆಗೆ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಪ್ರಯಾಗ್‌ರಾಜ್ (ಅ.2): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪತ್ರಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಲಕ್ಷ್ಮಿ ನಾರಾಯಣ್ ಸಿಂಗ್ (ಪಪ್ಪು ಸಿಂಗ್ - 54) ಮೃತಪಟ್ಟವರು. ಇವರು ಉತ್ತರ ಪ್ರದೇಶ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಅಶೋಕ್ ಸಿಂಗ್ ಅವರ ಸೋದರಳಿಯ ಎನ್ನಲಾಗಿದೆ. ಪ್ರಯಾಗ್‌ರಾಜ್‌ನ ಹೋಟೆಲ್ ಬಳಿ ಪಪ್ಪು ಸಿಂಗ್ ಮೇಲೆ ಹಲ್ಲೆ ನಡೆದಿದೆ.

ಪತ್ರಕರ್ತನ ಕೊಲೆಗೆ ಕಾರಣವೇನು?

ಇದೊಂದು ಪೂರ್ವನಿಯೋಜಿತ ಕೃತ್ಯವಾಗಿರಬಹುದು ಎನ್ನಲಾಗಿದೆ. ಪತ್ರಕರ್ತನ ದೇಹದ ಮೇಲೆ ಎರಡು ಡಜನ್‌ಗಿಂತಲೂ ಹೆಚ್ಚು ಇರಿತದ ಗಾಯಗಳು ಪತ್ತೆಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕುತ್ತಿಗೆ, ಹೊಟ್ಟೆ ಮತ್ತು ಕೈಗಳಲ್ಲಿ ಚೂರಿ ಇರಿತದ ಗಾಯಗಳಿವೆ.

ರಸ್ತೆಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಪಪ್ಪು ಸಿಂಗ್

 ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಪ್ರಯಾಗ್‌ರಾಜ್‌ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವಿಶಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.