ಚರ್ಮರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ, ಪತಿ ಡಾ.ಮಹೇಂದ್ರ ರೆಡ್ಡಿ ಅರಿವಳಿಕೆ ಮದ್ದನ್ನು ಅತಿಯಾಗಿ ನೀಡಿ ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಆಸ್ತಿಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು : ಚರ್ಮ ರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆಗೆ ಬಳಸಲಾದ ಔಷಧವನ್ನು ಮೃತಳ ಪತಿ, ಆರೋಪಿ ಡಾ.ಜಿ,ಎಸ್. ಮಹೇಂದ್ರ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ತಂದು ನಿಯಮ ಬಾಹಿರವಾಗಿ ಬಳಸಿದ್ದಾನೆ ಎಂದು ಮಾರತ್ತಹಳ್ಳಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು. ಇದೀಗ Not For Sale ಔಷದಿಗಳನ್ನ ಸರ್ಕಾರಿ ಆಸ್ಪತ್ರೆಯಿಂದ ಮನೆಗೆ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗ್ಯಾಸ್ಟ್ರಿಕ್ ಔಷಧಿ ಸೇರಿ ಗ್ಲೂಕೋಸ್ ಬಾಟಲ್ ಸೇರಿ ರಾಶಿ ರಾಶಿ ಔಷಧಿಗಳು ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ಪತ್ತೆಯಾಗಿದೆ. ಕೃತಿಕಾ ರೂಮನ್ನು ಮಹೇಂದ್ರ ರೆಡ್ಡಿ ಕ್ಲಿನಿಕ್ ರೀತಿ ಬದಲಾಯಿಸಿದ್ದ. ಕೃತಿಕಾಳ ಋತುಚಕ್ರದ ಸಮಯದಲ್ಲೂ ಡ್ರಿಪ್ ಹಾಕಿಕೊಳ್ಳಲು ಮಹೇಂದ್ರ ಒತ್ತಾಯಿಸುತ್ತಿದ್ದ. ಮಾತ್ರವಲ್ಲ ಕ್ಯಾನುವಲ್ ಚುಚ್ಚಿ ಆಕೆಯ ಕೈತುಂಬಾ ಸೂಜಿಯ ಗಾಯ ಮಾಡಿದ್ದ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುಕ್ತವಾಗಿ ವ್ಯವಹರಿಸಲು ಅವಕಾಶ ಇತ್ತು
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹೇಂದ್ರ ರೆಡ್ಡಿ ಜನರಲ್ ಸರ್ಜನ್ ಆಗಿರುವ ಕಾರಣದಿಂದ ಆಸ್ಪತ್ರೆಯಲ್ಲಿ ಮುಕ್ತವಾಗಿ ವ್ಯವಹರಿಸಲು ಆತನಿಗೆ ಸಮಸ್ಯೆಗಳು ಯಾವುದೂ ಇರಲಿಲ್ಲ.ಇದನ್ನು ದುರ್ಬಳಕೆ ಮಾಡಿಕೊಂಡು ಶಸ್ತ್ರ ಚಿಕಿತ್ಸಾ ವಿಭಾಗದಿಂದ ಅರಿವಳಿಕೆ ಚುಚ್ಚು ಮದ್ದನ್ನು ಕೂಡ ತೆಗೆದುಕೊಂಡಿರಬಹುದು ಎಂಬ ಅನುಮಾನ ದಟ್ಟವಾಗಿದೆ. ಯಾಕೆಂದರೆ ಪತ್ನಿಯ ಬಲಗಾಲಿಗೆ ಹೆಚ್ಚಿನ ಪ್ರಮಾಣದ ಅರಿವಳಿಕೆ ನೀಡಿರುವುದು ಬೆಳಕಿಗೆ ಬಂದಿದೆ. ತನ್ನ ಗಂಡನ ಮೇಲೆ ವಿಪರೀತ ನಂಬಿಕೆ ಇಟ್ಟ ವೈದ್ಯೆಗೆ ಮಹೇಂದ್ರನ ಮೇಲೆ ಕಿಂಚಿತ್ತೂ ಅನುಮಾನ ಬಂದಿಲ್ಲ.
ಬೆಡ್ ರೂಮ್‌ನಲ್ಲಿತ್ತು ಹಲವು ಸಾಕ್ಷ್ಯ
ಮಹೇಂದ್ರ ರೆಡ್ಡಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಹಲವು ಸುಳಿವುಗಳು ಸಿಕ್ಕಿದ್ದು, ಆತನ ಬೆಡ್ ರೂಮ್‌ನಲ್ಲಿದ್ದ ಲ್ಯಾಪ್‌ಟಾಪ್ , ಹಾರ್ಡ್ ಡಿಸ್ಕ್ ಹಾಗೂ ಕಂಪ್ಯೂಟರ್ ಸೇರಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ವಿಚಾರಣೆ ಸಮಯದಲ್ಲಿ ನಾನೇನು ಮಾಡಿಲ್ಲ. ನಾನು ಪತ್ನಿಯನ್ನು ಕೊಂದಿಲ್ಲ ಎಂದು ಸಬೂಬು ನೀಡಿದ್ದಾನೆ. ವಿವಾಹಕ್ಕೂ ಮುನ್ನವೇ ಮೃತ ಡಾ. ಕೃತಿಕಾ ರೆಡ್ಡಿಗೆ ತೀವ್ರ ಅನಾರೋಗ್ಯ ಇತ್ತು ಎಂದು ಹೇಳಿದ್ದಾನೆ, ಆದರೆ ಪೋಷಕರು ಗ್ಯಾಸ್ಟ್ರಿಕ್ ಸಮಸ್ಯೆ, ಲೋ ಬಿಪಿ ಬಿಟ್ಟರೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ತನಿಖೆ ಸಮಯದಲ್ಲಿ ಆತನಿಂದ ಹಲವು ಗೊಂದಲದ ಹೇಳಿಕೆಗಳು ಹೊರ ಬಂದಿದೆ. ಹೀಗಾಗಿ ಪೊಲೀಸರಿಗೆ ಅನುಮಾನ ಹೆಚ್ಚಿದೆ.
ವೈದ್ಯ ಕುಟುಂಬದ ಹಿನ್ನೆಲೆ ಇರುವ ಡಾ.ಕೃತಿಕಾ
ಮೃತ ಕೃತಿಕಾಳ ಇಡೀ ಕುಟುಂಬವೇ ವೈದ್ಯ ಕುಟುಂಬವಾಗಿದೆ. ಕೃತಿಕಾ ಚರ್ಮರೋಗ ತಜ್ಞೆ, ಆಕೆಯ ಸೋದರಿ ಡಾ.ನಿಖಿತಾ ಹಾಗೂ ಚಿಕ್ಕಮ್ಮ ಸಹ ವೈದ್ಯರು. ಈ ಹಿನ್ನೆಲೆಯಲ್ಲಿ ಸರ್ಜನ್ ಆಗಿದ್ದ ಮಹೇಂದ್ರ ರೆಡ್ಡಿಗೆ ಆಕೆಯನ್ನು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಮದುವೆ ಬಳಿಕ ಮಹೇಂದ್ರ ವರಸೆ ಬದಲಿಸಿದ್ದು, ಅನಾರೋಗ್ಯ ಇದೆ ಎಂದು ಓವರ್ ಡೋಸ್ ಅನಸ್ತೇಶಿಯಾ ಕೊಟ್ಟು ಕೊಂದಿದ್ದಾನೆ. ಮಾತ್ರವಲ್ಲ ಮಹೇಂದ್ರನಿಗೆ ತನ್ನ ಅಸಿಸ್ಟೆಂಟ್ ವೈದ್ಯೆ ಜತೆ ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧ ಇತ್ತು ಎಂಬ ವಿಚಾರ ಬಯಲಾಗಿದೆ.
ಆಸ್ತಿಗಾಗಿ ಮಾವನ ಜತೆ ಬಾಂಧವ್ಯ ಹೊಂದಿದ್ದ ಮಹೇಂದರ್
ಆರು ತಿಂಗಳ ಹಿಂದೆಯೇ ಕೃತಿಕಾಳನ್ನು ಮುಗಿಸಿದ್ದ ಮಹೇಂದ್ರ ಕೃತಿಕಾ ತಂದೆ ಜತೆಯೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದ. ಯಾಕೆಂದರೆ ಇಬ್ಬರು ಹೆಣ್ಣು ಮಕ್ಕಳ ತಂದೆಯ ಬಳಿ ಕೋಟ್ಯಾಂತರ ರೂ ಆಸ್ತಿ ಇತ್ತು. ಹೀಗಾಗಿ ಕೃತಿಕಾ ಪಾಲಿನ ಆಸ್ತಿ ತನಗೆ ಸಿಗುತ್ತೆ ಎಂಬ ಆಸೆಯಲ್ಲಿದ್ದ. 2024 ಮೇ 06 ರಂದು ಗುಂಜೂರಿನ ಮಂತ್ರ ಕಲ್ಯಾಣಮಂಟಪದಲ್ಲಿ ಕೃತಿಕಾ ಹಾಗೂ ಮಹೇಂದ್ರ ವಿವಾಹ ನಡೆದಿತ್ತು. 2025 ಏಪ್ರಿಲ್ 24 ರಂದು ವೈದ್ಯೆ ಕೃತಿಕಾ ಮೃತಪಟ್ಟಿದ್ದಳು.ಮರಣೋತ್ತರ ಪರೀಕ್ಷೆಯಲ್ಲಿ ಅನಸ್ತೇಷಿಯಾ ಔಷಧದಿಂದ ಕೃತಿಕಾ ಸಾವನ್ನಪ್ಪಿರುವುದು ಬಹಿರಂಗವಾಯ್ತು. ಹೀಗಾಗಿ ಪೊಲೀಸರು ಕರೆ ಮಾಡಿ ಪೋಷಕರನ್ನು ವಿಚಾರಿಸಿದಾಗ, ಕೃತಿಕಾ ಸಾವನ್ನಪ್ಪುವ ಹಿಂದಿನ ದಿನ ಅಳಿಯ ಮಹೇಂದ್ರ ಮಗಳಿಗೆ ಇಂಜೆಕ್ಷನ್ ನೀಡಿದ್ದರ ಬಗ್ಗೆ ಪೊಲೀಸರ ಬಳಿ ತಿಳಿಸಿದ್ದರು. ಅಂದೇ ಪೊಲೀಸರು ಅಲರ್ಟ್ ಆಗಿ ಐವಿ, ಸಿರಂಜ್‌ನ ಸ್ಯಾಂಪಲ್ ಪಡೆದು ಪರಿಶೀಲನೆ ಮಾಡಿದಾಗ ಅನಸ್ತೇಶಿಯಾ ಕೊಟ್ಟಿರುವುದು ದೃಢಪಟ್ಟಿತ್ತು. ಸೀರಂಜ್‌ನಲ್ಲಿರೋ ಔಷಧ ಮತ್ತು ಮರಣೋತ್ತರ ಪರೀಕ್ಷೆಯಲ್ಲಿದ್ದ ಔಷಧ ಒಂದೇ ಎಂಬುದು ಪೊಲೀಸರಿಗೆ ತಿಳಿದಿತ್ತು. ಎಲರೂ ಕೈಗೆ ಐವಿ ಹಾಕಿದ್ರೆ, ಈತ ಮಾತ್ರ ಕಾಲಿಗೆ ಐವಿ ಡ್ರಿಪ್ ಹಾಕಿದ್ದ, ಈ ಮೂಲಕ ಅನುಮಾನ ಬಾರದಂತೆ ಪತ್ನಿಯ ಕಥೆ ಮುಗಿಸಿದ್ದ.
