ಅಮೆರಿಕದ ತೆರಿಗೆ ಏರಿಕೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಸಿದ್ಧ ಎಂದು ಘೋಷಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದೆ.
ನವದೆಹಲಿ (ಆ.7): ಭಾರತವು ಮೊದಲ ತನ್ನ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ. ತನ್ನ ರೈತರು, ಮೀನುಗಾರರು ಮತ್ತು ಹೈನುಗಾರಿಕೆ ವಲಯವನ್ನು ರಕ್ಷಣೆ ಮಾಡಿಕೊಳ್ಳುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅದಕ್ಕೆ ಭಾರೀ ಬೆಲೆ ತೆರಬೇಕಾದರೂ ನಾವು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ತೆರಿಗೆ ಯುದ್ಧಕ್ಕೆ ತಿರುಗೇಟು ನೀಡಿದ್ದಾರೆ. ಗುರುವಾರ ಮಾತನಾಡಿದ ಪ್ರಧಾನಿ ಮೋದಿ ಈ ಮಾತು ಹೇಳಿದ್ದಾರೆ.ನಿರಂತರವಾಗಿ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕಾಗಿ ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರ ಪ್ರತಿಕ್ರಿಯೆ ನೀಡಿದ್ದಾರೆ.
"ನಮಗೆ, ನಮ್ಮ ರೈತರ ಹಿತಾಸಕ್ತಿ ಪ್ರಮುಖ ಆದ್ಯತೆಯಾಗಿದೆ" ಎಂದು ನವದೆಹಲಿಯಲ್ಲಿ ನಡೆದ ಎಂಎಸ್ ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೋದಿ ಹೇಳಿದ್ದಾರೆ. "ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ ಮತ್ತು ನಾನು ಅದಕ್ಕೆ ಸಿದ್ಧನಿದ್ದೇನೆ. ಭಾರತ ಅದಕ್ಕೆ ಸಿದ್ಧವಾಗಿದೆ." ಎಂದು ಹೇಳುವ ಮೂಲಕ ಅಮೆರಿಕದ ತೆರಿಗೆ ಭೂತಕ್ಕೆ ಬೆದರುವುದಿಲ್ಲ ಎನ್ನುವ ಸೂಚನೆ ನೀಡಿದ್ದಾರೆ.
ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿದ ಕೆಲವೇ ಗಂಟೆಗಳ ನಂತರ ಮೋದಿ ಅವರ ಪ್ರತಿಭಟನೆಯ ಧ್ವನಿ ಹೊರಬಿದ್ದಿದ್ದು, ಒಟ್ಟು ಸುಂಕವನ್ನು ಶೇ. 50 ಕ್ಕೆ ಏರಿಸಿದೆ, ಇದು ಅಮೆರಿಕ ಯಾವುದೇ ದೇಶದ ಮೇಲೆ ವಿಧಿಸಿರುವ ಅತ್ಯಧಿಕ ತೆರಿಗೆಯಾಗಿದೆ.
ರಷ್ಯಾದ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುವ ಬಗ್ಗೆ ಅಮೆರಿಕದ ಮಾರ್ಗವನ್ನು ಅನುಸರಿಸಲು ಭಾರತ ನಿರಾಕರಿಸಿದ್ದಕ್ಕೆ ಈ ಕ್ರಮವು ನೇರ ಶಿಕ್ಷೆಯಾಗಿದೆ ಎಂದು ವ್ಯಾಪಕವಾಗಿ ನೋಡಲಾಗುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಏರಿಳಿತಗೊಳ್ಳುತ್ತಿದ್ದ ಕಾರ್ಯತಂತ್ರದ ಸಂಬಂಧವನ್ನು ಬಿಗಡಾಯಿಸಿದೆ. ಭಾರತವನ್ನು "ಸ್ನೇಹಿತ" ಎಂದು ಕರೆದ ಟ್ರಂಪ್, ಕೆಲವು ದಿನಗಳ ಹಿಂದೆ "ದಂಡ"ದ ಬಗ್ಗೆ ಎಚ್ಚರಿಸಿದ್ದರು. ಬುಧವಾರ, ಇದನ್ನು ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆಗಸ್ಟ್ 27 ರಿಂದ ಹೊಸ ತೆರಿಗೆ ಯಾರಿಗೆ ಬರಲಿದೆ.
