ಅ.3ರಂದು ಇಹಲೋಕ ತ್ಯಜಿಸಿದ ಹಿರಿಯ ಪತ್ರಕರ್ತ, ಭಾರತೀಯ ಪತ್ರಿಕೋದ್ಯಮದ ಭೀಷ್ಮ, ಟಿಜೆಎಸ್‌ (ತಾಯಿಲ್‌ ಜಾಕೋಬ್‌ ಸೋನಿ) ಜಾರ್ಜ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಜ್‌ ಅವರ ಪುತ್ರ ಜೀತ್‌ ತಾಯಿಲ್‌ ಅವರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ: ಅ.3ರಂದು ಇಹಲೋಕ ತ್ಯಜಿಸಿದ ಹಿರಿಯ ಪತ್ರಕರ್ತ, ಭಾರತೀಯ ಪತ್ರಿಕೋದ್ಯಮದ ಭೀಷ್ಮ, ಟಿಜೆಎಸ್‌ (ತಾಯಿಲ್‌ ಜಾಕೋಬ್‌ ಸೋನಿ) ಜಾರ್ಜ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಜ್‌ ಅವರ ಪುತ್ರ ಜೀತ್‌ ತಾಯಿಲ್‌ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಟಿಜೆಎಸ್‌ ಜಾರ್ಜ್‌ ಅವರ ಕೆಲಸಗಳನ್ನು ಪ್ರಶಂಸಿಸಿರುವ ಮೋದಿ, ‘ಅವರ ಸಾವಿನ ಸುದ್ದಿ ಕೇಳಿ ದುಃಖವಾಯಿತು. ಒಬ್ಬ ಪತ್ರಕರ್ತ ಹಾಗೂ ಸಂಪಾದಕನಾಗಿ ಅವರು ಮಾಡಿದ ಕೆಲಸದಿಂದಾಗಿ ಸಹೋದ್ಯೋಗಿಗಳಿಂದ ಬಹಳ ಗೌರವಿಸಲ್ಪಡುತ್ತಿದ್ದರು. ಅವರ ಪತ್ರಿಕೋದ್ಯಮ ಮತ್ತು ಪುಸ್ತಕಗಳು ಯುವ ಪತ್ರಕರ್ತರಿಗೆ ದೃಷ್ಟಿಕೋನ ನೀಡಿ ಮಾರ್ಗದರ್ಶನ ಮಾಡಲಿವೆ’ ಎಂದು ಬರೆದಿದ್ದಾರೆ.

ಜಾರ್ಜ್‌ ಅವರ ಪರಿವಾರಕ್ಕೆ ಧೈರ್ಯ ತುಂಬುತ್ತಾ, ‘ಮಗುವಿನ ಜೀವನದಲ್ಲಿ ತಂದೆ ಆಧಾರ ಸ್ತಂಭ ಇದ್ದಂತೆ. ಅವರ ಇರುವಿಕೆ ರಕ್ಷೆಯಾಗಿದ್ದು, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಲು ಬಲ ಹಾಗೂ ಧೈರ್ಯ ನೀಡುತ್ತದೆ. ಈ ನೋವಿನ ಸಮಯದಲ್ಲಿ, ಜಾರ್ಜ್‌ರೊಂದಿಗೆ ಕಳೆದ ಕ್ಷಣಗಳು ನಿಮಗೆ ಸಮಾಧಾನ ನೀಡಲಿ’ ಎಂದು ಹಾರೈಸಿದ್ದಾರೆ.

ಪತ್ರಿಕೋದ್ಯಮದ ಮಹಾಗುರು ಟಿಜೆಎಸ್ ಜಾರ್ಜ್‌ 

- ಜೋಗಿ

- 7.5.1928 - 3.10.2025

ನೇರಮಾತು, ನಿಷ್ಠುರ ದನಿ, ಪ್ರಖರ ಚಿಂತನೆ, ಸ್ಪಷ್ಟ ರಾಜಕೀಯ ನಿಲುವು ಮತ್ತು ಪ್ರಜಾಪ್ರಭುತ್ವದ ಮೇಲೆ ಗಾಢ ನಂಬಿಕೆ ಇಟ್ಟಿದ್ದ ಪತ್ರಕರ್ತ, ಸಂಪಾದಕ, ಲೇಖಕ, ಜೀವನಚರಿತ್ರಕಾರ, ಪ್ರಬಂಧಕಾರ ಟಿಜೆಎಸ್ ಜಾರ್ಜ್ ಬರೆವಣಿಗೆ ನಿಲ್ಲಿಸಿದ್ದಾರೆ. ಆಧುನಿಕ ಪತ್ರಿಕೋದ್ಯಮದ ಹರಿಕಾರ ಎಂದೇ ಹೆಸರಾಗಿದ್ದ ಅವರು ತಮ್ಮ ಅಂಕಣಗಳಿಂದ ಭ್ರಷ್ಟರಾಜಕಾರಣಿಗಳು ಬೆಚ್ಚಿ ಬೀಳುವಂತೆ ಮಾಡುತ್ತಿದ್ದವರು. ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿದ್ದಾಗೆಲ್ಲ, ತಮ್ಮ ಬರಹಗಳಿಂದ ಎಚ್ಚರಿಸುತ್ತಿದ್ದ ಟಿಜೆಎಸ್ ಜಾರ್ಜ್ ಬರೆಯುತ್ತಿದ್ದ ಪಾಯಿಂಟ್ ಆಫ್ ವ್ಯೂ ಅಂಕಣಕ್ಕಾಗಿ ಲಕ್ಷಾಂತರ ಮಂದಿ ಓದುಗರು ಕಾಯುತ್ತಿದ್ದರು. ಅವರ ಬರಹದ ಚಾಟಿಯೇಟು ತಮ್ಮ ಕಡೆಗೆ ತಿರುಗದಂತೆ ಅವರ ಕಾಲದ ರಾಜಕಾರಣಿಗಳು ಎಚ್ಚರ ವಹಿಸುತ್ತಿದ್ದರು.

 ತಾಯಿಲ್ ಜೇಕಬ್ ಸೋನಿ ಜಾರ್ಜ್ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂತರ ಟಿಜೆಎಸ್ ಜಾರ್ಜ್ ಆದರು. ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಅವರು ಭಾರತದ ಸಾಕ್ಷಿಪ್ರಜ್ಞೆಯಂತಿದ್ದರು. ರಾಮನಾಥ ಗೋಯೆಂಕಾ ಅವರಿಗೆ ಅತ್ಯಂತ ಆಪ್ತರಾಗಿದ್ದ ಟಿಜೆಎಸ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ, ಪತ್ರಿಕೋದ್ಯಮದ ಮೂಲಪಾಠಗಳ ಜತೆಗೇ, ಪತ್ರಕರ್ತರಿಗೆ ಇರಬೇಕಾದ ಶಿಸ್ತು, ಸಂಯಮವನ್ನು ತಮ್ಮ ನಡೆನುಡಿಯ ಮೂಲಕ ತೋರಿಸಿಕೊಟ್ಟವರು. ಪತ್ರಿಕಾ ಜಗತ್ತಿಗೇ ಮಾದರಿಯಾದವರು.