ದೆಹಲಿ - ದಿಮಾಪುರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್‌ನಿಂದ ಹೊತ್ತಿಕೊಂಡ ಬೆಂಕಿ, 6E 2107 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಮತ್ತೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ, ಸದ್ಯದ ಪರಿಸ್ಥಿತಿ ವಿವರ ಇಲ್ಲಿದೆ.

ನವದೆಹಲಿ (ಅ.19) ದಿಮಾಪುರಕ್ಕೆ ಹೊರಟ ಇಂಡಿಗೋ ವಿಮಾನ 6E 2107ದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಪ್ರಯಾಣಿಕರ ಹೊತ್ತು ಸಾಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕನೊಬ್ಬನ ಪವರ್ ಬ್ಯಾಂಕ್‌ನಿಂದ ಈ ಘಟನೆ ಸಂಭವಿಸಿದೆ. ಪವರ್ ಬ್ಯಾಂಕ್ ಏಕಾಏಕಿ ಹೊತ್ತಿ ಉರಿದಿದೆ. ಪ್ರಯಾಣಿಕರ ಬೋರ್ಡಿಂಗ್ ಆಗಿ ರನ್‌ವೇನಲ್ಲಿ ಸಾಗುತ್ತಿದ್ದಂತೆ ಈ ಘಟನೆ ನಡೆದಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಮರಳಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತ ಎಂದು ಇಂಡಿಗೋ ಖಚಿತಪಡಿಸಿದೆ.

ಪವರ್ ಬ್ಯಾಂಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ

ದೆಹಲಿಯಿಂದ ದಿಮಾಪುರಕ್ಕೆ ಹೊರಟ ವಿಮಾನ ಪ್ರಯಾಣಿಕರ ಬೋರ್ಡಿಂಗ್ ಮಾಡಿ ನಿಧಾನವಾಗಿ ರನ್‌ವೇಯತ್ತ ಹೊರಟಿತ್ತು. ಅಷ್ಟರಲ್ಲೇ ಪ್ರಯಾಣಿಕನ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದೇ ಸಮನೆ ಪವರ್ ಬ್ಯಾಂಕ್ ಬೆಂಕಿ ಆವರಿಸಲು ಆಗಮಿಸಿದೆ. ತಕ್ಷಣವೇ ವಿಮಾನದ ಸಿಬ್ಬಂದಿಗಳು ಅಗ್ನಿಶಾಮಕ ಕಿಟ್ ಮೂಲಕ ಬೆಂಕಿ ನಂದಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಸುರಕ್ಷಿತ

ವಿಮಾನದ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಅಗ್ನಿಶಾಮಕ ಕಿಟ್ ಮೂಲಕ ಬೆಂಕಿ ನಂದಿಸಿದ್ದಾರೆ. ಇದರಿಂದ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಆರಂಭಿಕ ಹಂತದಲ್ಲೇ ಬೆಂಕಿ ನಂದಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ. ತುರ್ತು ಸಂದರ್ಭ ಸೃಷ್ಟಿಯಾದ ಕಾರಣ ವಿಮಾನ ಮರಳಿ ದೆಹಲಿ ನಿಲ್ದಾಣಕ್ಕೆ ಬಂದಿತ್ತು. ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ನಿಲ್ದಾಣದಲ್ಲಿ ವಿಮಾನ ಪರಿಶೀಲನೆ ಬಳಿಕ ಮತ್ತೆ ದೆಹಲಿ ವಿಮಾನ ನಿಲ್ದಾಣದಿಂದ ದಿಮಾಪುರಕ್ಕೆ ಪ್ರಯಾಣ ಬೆಳೆಸಿತು.

ತಕ್ಷಣದ ಕಾರ್ಯಾಚರಣೆಯಿಂದ ಯಾವುದೇ ಹಾನಿಯಾಗಿಲ್ಲ

ಘಟನೆ ಕುರಿತು ಇಂಡಿಗೋ ಪ್ರಕಟಣೆ ನೀಡಿದೆ. ಪ್ರಯಾಣಿಕರ ಪವರ್ ಬ್ಯಾಂಕ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ತಕ್ಷಣವೇ ಬೆಂಕಿಯನ್ನು ಸಿಬ್ಬಂದಿಗಳು ನಂದಿಸಿದ್ದಾರೆ. ಯಾವುದೇ ಅನಾಹುತವಾಗಿಲ್ಲ, ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಸಣ್ಣ ಘಟನೆಯನ್ನು ತಕ್ಷಣವೇ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ ಎಂದು ಇಂಡಿಗೋ ಹೇಳಿದೆ.

ಈ ಸಂದರ್ಭದಲ್ಲಿ ತಾಳ್ಮೆಯಿಂದ ಸಹಕರಿಸಿದ ಎಲ್ಲಾ ಪ್ರಯಾಣಿಕರಿಗೆ ಧನ್ಯವಾದ ಎಂದು ಇಂಡಿಗೋ ಹೇಳಿದೆ. ಈ ಘಟನೆಯಿಂದ ವಿಮಾನ ಕೆಲ ಕಾಲ ವಿಳಂಬವಾಗಿತ್ತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಪ್ರಯಾಣಿಕರಿಗೆ ರಿಫ್ರೆಶ್ಮೆಂಟ್ ನೀಡಿದ್ದಾರೆ. ಪ್ರಯಾಣಿಕರು ಉತ್ತಮವಾಗಿ ಸಹಕರಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ಮರು ಪರಿಶೀಲನೆ, ತಪಾಸಣೆ ಮಾಡಲಾಗಿದೆ. ಇದು ವಿಮಾನದ ಹಾರಾಟ ಕೊಂಚ ವಿಳಂಬ ಮಾಡಿದೆ ಎಂದು ಇಂಡಿಗೋ ಹೇಳಿದೆ.