ಹೈದರಾಬಾದ್‌ನಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಬಲವಂತದ ಮತಾಂತರ, ಮೋಸದ ಮದುವೆ ಆರೋಪದ ಮೇಲೆ ಬಂಧಿಸಲಾಗಿದೆ. ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ರಾಜಕೀಯ ಚರ್ಚೆಗೂ ಗುರಿಯಾಗಿದೆ.

ಹೈದರಾಬಾದ್ (ಆ.16): ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ಮೌಂಟ್ ಬಂಜಾರ ಕಾಲೋನಿಯ ನಿವಾಸಿ, ಪಾಕಿಸ್ತಾನ ಮೂಲದ ಫಹಾದ್ ಎಂಬ ವ್ಯಕ್ತಿಯನ್ನು ಲಂಗರ್‌ಹೌಸ್ ಪೊಲೀಸರು ಬಂಧಿಸಿದ್ದಾರೆ.

ಫಹಾದ್ ವಿರುದ್ಧ ಪತ್ನಿ ಕೀರ್ತಿ ಅವರು ಬಲವಂತದ ಮತಾಂತರ, ಮೋಸದ ಮದುವೆ ಮತ್ತು ದ್ರೋಹ ಬಗೆದಿರುವ ಆರೋಪದಡಿ ದೂರು ನೀಡಿರುವ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ:

ಕೀರ್ತಿ ಅವರ ಹೇಳಿಕೆಯ ಪ್ರಕಾರ, 1998ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಫಹಾದ್, 2016ರಲ್ಲಿ ತನ್ನನ್ನು ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದರು. ಇದರ ಭಾಗವಾಗಿ, ಕೀರ್ತಿ ತನ್ನ ಹೆಸರನ್ನು ದೋಹಾ ಫಾತಿಮಾ ಎಂದು ಬದಲಾಯಿಸಿಕೊಂಡಿದ್ದರು. ಫಹಾದ್ ತನ್ನ ಪಾಕಿಸ್ತಾನಿ ಮೂಲದ ಬಗ್ಗೆ ಮಾಹಿತಿಯನ್ನು ಮರೆಮಾಚಿದ್ದರು. ಪ್ರತಿವರ್ಷ ನಿಯಮಿತವಾಗಿ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಆಯುಕ್ತರ ಕಚೇರಿಗೆ ಭೇಟಿ ನೀಡುತ್ತಿದ್ದರು. ಈ ವಿಷಯ ಫಹಾದ್ ತನ್ನಿಂದ ಮುಚ್ಚಿಟ್ಟಿರುವುದು ಪತ್ನಿ ಕೀರ್ತಿಗೆ ಗೊತ್ತಾಗಿದೆ. ಅಲ್ಲದೇ ಇತ್ತೀಚೆಗೆ, ಫಹಾದ್ ತನ್ನ ಕಂಪನಿಯ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ತಿಳಿದುಬಂದಿದ್ದರಿಂದ ಪತಿ ಫಹಾದ್‌ನಿಂದ ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಕೀರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಫಹಾದ್ ಮತ್ತು ಆ ಮಹಿಳೆಯನ್ನು ಬಂಧಿಸಲಾಗಿದೆ. ಕೀರ್ತಿ ಹೇಳುವಂತೆ, ನನ್ನ ಮೊದಲ ವಿಚ್ಛೇದನದ ನಂತರ, ನಾನು ದೌರ್ಬಲ್ಯದ ಸ್ಥಿತಿಯಲ್ಲಿದ್ದೆ. ಫಹಾದ್ ಇದರ ಲಾಭ ಪಡೆದು ನನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದರು. ಅವರು ಪಾಕಿಸ್ತಾನಿಗಳು ಎಂದು ನನಗೆ ತಿಳಿದಿರಲಿಲ್ಲ. ಈಗ ಅವರ ಅಕ್ರಮ ಸಂಬಂಧ ತಿಳಿದುಬಂದಿದ್ದು, ನಾನು ವಿಚ್ಛೇದನ ಪಡೆದು ಹಿಂದೂ ಧರ್ಮಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಇನ್ನು ಲಂಗರ್‌ಹೌಸ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ ವೆಂಕಟ್ ರಾಮುಲು ಈ ಬಗ್ಗೆ ಪ್ರತಿಕ್ರಿಯಿಸಿ, 'ಕೀರ್ತಿ ಅವರ ದೂರಿನ ಆಧಾರದ ಮೇಲೆ ಫಹಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

ಇದು 'ವೋಟ್ ಜಿಹಾದ್' ಎಂದ ಮಾಧವಿ ಲತಾ:

ಈ ಘಟನೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕಿ ಮಾಧವಿ ಲತಾ, ಇದನ್ನು 'ವೋಟ್ ಜಿಹಾದ್' ಎಂದು ಕರೆದು, ಹೈದರಾಬಾದ್‌ನಲ್ಲಿ ಸಾವಿರಾರು ರೋಹಿಂಗ್ಯಾ ಕುಟುಂಬಗಳು ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳೊಂದಿಗೆ ಅಕ್ರಮವಾಗಿ ವಾಸಿಸುತ್ತಿರುವುದಕ್ಕೆ ರಾಜಕೀಯ ಬೆಂಬಲವಿದೆ ಎಂದು ಆರೋಪಿಸಿದ್ದಾರೆ. ಇಂತಹ ಚಟುವಟಿಕೆಗಳು ರಾಜಕೀಯ ಬೆಂಬಲವಿಲ್ಲದೆ ಸಾಧ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ. ತನಿಖೆ ಮುಂದುವರಿದಂತೆ, ಈ ಪ್ರಕರಣದ ಹೆಚ್ಚಿನ ವಿವರಗಳು ಬಹಿರಂಗಗೊಳ್ಳುವ ನಿರೀಕ್ಷೆಯಿದೆ.