Navi Mumbai Airport Inaugurated ದೇಶದ ಮೊದಲ ಸಂಪೂರ್ಣ ಡಿಜಿಟಲ್ ಏರ್ ಪೋರ್ಟ್ ಇದಾಗಿದ್ದು, ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎನಿಸಿಕೊಂಡಿದೆ. ನಿಲ್ದಾಣದ 1ನೇ ಹಂತಕ್ಕೆ ಮೋದಿ ಚಾಲನೆ ನೀಡಿದ್ದು,ಇದು ಮುಂಬೈನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
ಮುಂಬೈ (ಅ.9): ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 19,650 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಏರ್‌ಪೋರ್ಟ್ ಮೊದಲನೇ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ. ಮುಂಬೈ ನಗರದ ಪಾಲಿಗೆ ಎರಡನೆಯ ಹಾಗೂ ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಇದಾಗಿದೆ. ಅಲ್ಲದೆ, ದೇಶದ ಮೊದಲ ಸಂಪೂರ್ಣ ಡಿಜಿಟಲೀಕೃತ ವಿಮಾನ ನಿಲ್ದಾಣವಾಗಿದೆ. ಈ ರೀತಿ 2 ಗರಿಗಳನ್ನು ಇದು ಹೊತ್ತುಕೊಂಡಿದೆ.
ಈ ಹೊಸ ವಿಮಾನ ನಿಲ್ದಾಣವು 1,160 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದು, ಖಾಸಗಿ ಮತ್ತು ಸರ್ಕಾರಿ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈ ಮೆಟ್ರೋಪಾಲಿಟನ್ ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ಮೂಲಕ ಮುಂಬೈನಲ್ಲಿ ಹಾಲಿ ಇರುವ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಆಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಓಡಾಡಿ ಪರಿಶೀಲನೆ ನಡೆಸಿದರು.ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇಂದು ದೇಶದಲ್ಲಿ 160 ಏರ್‌ಪೋರ್ಟ್
ನಂತರ ಮಾತನಾಡಿದ ಅವರು, 2014ರಲ್ಲಿ ದೇಶದಲ್ಲಿ 74 ಏರ್ಪೋರ್ಟ್‌ಗಳಿದ್ದವು. ಈಗ ಅವುಗಳ ಸಂಖ್ಯೆ 160 ದಾಟಿದೆ. ಈ ದಶಕದ ಅಂತ್ಯದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ವೈಮಾನಿಕ ಕೇಂದ್ರ ಮಾಡುವ ಗುರಿ ಇದೆ ಎಂದರು.
