ದೇಸೀ ನಾಯಿ ತಳಿಗಳಾದ ಕರ್ನಾಟಕದ ಮುಧೋಳ ಮತ್ತು ಉತ್ತರ ಭಾರತದ ರಾಂಪುರ ಬೇಟೆನಾಯಿಗಳನ್ನು ಇದೀಗ ಹೈರಿಸ್ಕ್ ಕಮಾಂಡೋ ಕಾರ್ಯಾಚರಣೆಗಳಲ್ಲೂ ಬಳಸಲು ಭಾರತೀಯ ಗಡಿ ಭದ್ರತಾ ಪಡೆ ಮುಂದಾಗಿದೆ.
ನವದೆಹಲಿ (ಅ.23): ಈಗಾಗಲೇ ಸೇನೆಗೆ ಸೇವೆ ಸಲ್ಲಿಸುತ್ತಿರುವ ದೇಸೀ ನಾಯಿ ತಳಿಗಳಾದ ಕರ್ನಾಟಕದ ಮುಧೋಳ ಮತ್ತು ಉತ್ತರ ಭಾರತದ ರಾಂಪುರ ಬೇಟೆನಾಯಿಗಳನ್ನು ಇದೀಗ ಹೈರಿಸ್ಕ್ ಕಮಾಂಡೋ ಕಾರ್ಯಾಚರಣೆಗಳಲ್ಲೂ ಬಳಸಲು ಭಾರತೀಯ ಗಡಿಭದ್ರತಾ ಪಡೆ ಮುಂದಾಗಿದೆ. ಅದರಂತೆ ಇದೇ ಮೊದಲ ಬಾರಿ ಹೆಲಿಕಾಪ್ಟರ್‌ನಿಂದ ಇಳಿಯುವ ಮತ್ತು ರಿವರ್ ರ್‍ಯಾಪ್ಟಿಂಗ್ ತರಬೇತಿಗಳನ್ನು ಈ ನಾಯಿಗಳಿಗೆ ನೀಡಲಾಗುತ್ತಿದೆ.
ಸೇನೆಗೆ ಸೇರ್ಪಡೆಯಾಗಿರುವ ಮೊದಲ ದೇಸೀ ತಳಿಯಾದ ಮುಧೋಳ ಮತ್ತು ರಾಂಪುರ ಬೇಟೆ ನಾಯಿಗಳ ಸೇವೆ ತೀವ್ರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಈ ತಳಿಗಳಿಗೆ ವಿಶೇಷ ತರಬೇತಿ ನೀಡಲು ಇದೀಗ ಬಿಎಸ್‌ಎಫ್ ಮುಂದಾಗಿದೆ. ಅದರ ಭಾಗವಾಗಿ ಟೇಕಾನ್ಪುರ(ಮಧ್ಯಪ್ರದೇಶ)ದಲ್ಲಿರುವ ರಾಷ್ಟ್ರೀಯ ನಾಯಿಗಳ ತರಬೇತಿ ಕೇಂದ್ರದಲ್ಲಿ ಮೊದಲ ಬಾರಿಗೆ ಈ ನಾಯಿತಳಿಗಳಿಗೆ ಹೈರಿಸ್ಕ್ ಕಮಾಂಡೋ ತರಬೇತಿ ನೀಡಲಾಗುತ್ತಿದೆ.
ಈಗಾಗಲೇ 25ಕ್ಕೂ ಹೆಚ್ಚು ಮುಧೋಳ ಮತ್ತು ರಾಂಪುರ ಬೇಟೆ ನಾಯಿಗಳಿಗೆ ಮೊದಲ ಬಾರಿ ಕಠಿಣ ಕಮಾಂಡೋ ತರಬೇತಿ ನೀಡಲಾಗಿದೆ. ಸಂಘರ್ಷಪೀಡಿತ ಪ್ರದೇಶದಲ್ಲಿ ಕಾಪ್ಟರ್‌ನಿಂದ ಕಮಾಂಡೋಗಳು ಹಗ್ಗದ ಸಹಾಯದಿಂದ ಜಾರಿಕೊಂಡು ಇಳಿಯುವಾಗ ಇವುಗಳನ್ನೂ ಇಳಿಸುವ ತರಬೇತಿ ನೀಡಲಾಗುತ್ತಿದೆ. ಕಮಾಂಡೋಗಳ ಬೆನ್ನಿಗೆ ಕಟ್ಟಿ ಈ ನಾಯಿಗಳನ್ನು ಇಳಿಸಲಾಗುತ್ತದೆ. ನಂತರ ತರಬೇತುದಾರ ಸೂಚನೆ ನೀಡುತ್ತಿದ್ದಂತೆ ಇವು ಕಾರ್ಯಾಚರಣೆಗೆ ಇಳಿಯುತ್ತವೆ. ಉಗ್ರರ ಧಮನ ಕಾರ್ಯಾಚರಣೆಗೆ ಅನುವಾಗುವಂತೆ ಈ ನಾಯಿಗಳಿಗೆ ಡೆಹರಾಡೂನ್‌ನಲ್ಲಿರುವ ಬಿಎಸ್‌ಎಫ್‌ನ ವಿಶೇಷ ಸಾಹಸ ಇನ್ಸ್‌ಟಿಟ್ಯೂಟ್‌ನಲ್ಲಿ ರಿವರ್ ರ್‍ಯಾಪ್ಟಿಂಗ್ ತರಬೇತಿಯನ್ನೂ ನೀಡಲಾಗುತ್ತಿದೆ.
ನಾಯಿಗಳಿಗೆ ತರಬೇತಿ
ಈವರೆಗೆ ಎನ್‌ಎಸ್‌ಜಿ ಮಾತ್ರ ಹೆಲಿಕಾಪ್ಟರ್‌ಗಳಿಂದ ನಾಯಿಗಳನ್ನು ಇಳಿಸುವ ತರಬೇತಿ ನೀಡಿದೆ. ಆದರೆ ದೇಸೀ ನಾಯಿತಳಿಗಳನ್ನು ಅವು ಬಳಸುತ್ತಿಲ್ಲ, ಬದಲಾಗಿ ಬೆಲ್ಜಿಯಂ ತಳಿಯ ನಾಯಿಗಳನ್ನು ಕಾರ್ಯಾಚರಣೆಗೆ ಬಳಸುತ್ತಿವೆ. ಮೋದಿ ಅವರು ಮನ್ ಕೀ ಬಾತ್‌ನಲ್ಲಿ ದೇಸೀ ನಾಯಿತಳಿಗಳನ್ನು ಭದ್ರತಾಪಡೆಗಳಿಗೆ ಬಳಸುವಂತೆ ಕರೆ ನೀಡಿದ ಬಳಿಕ 2020ರಿಂದ ಕೇಂದ್ರ ಮತ್ತು ರಾಜ್ಯದ ಹಲವು ಪೊಲೀಸ್ ಪಡೆಗಳು ಈ ನಾಯಿಗಳನ್ನು ಬಳಸಲು ಆರಂಭಿಸಿವೆ. ನ್ಯಾಷನಲ್ ಟ್ರೈನಿಂಗ್ ಸೆಂಟರ್ ಫಾರ್ ಡಾಗ್(ಎನ್‌ಟಿಸಿಡಿ) ಈಗಾಗಲೇ 150 ಮುಧೋಳ ಮತ್ತು ರಾಂಪುರ ತಳಿಯ ಬೇಟೆ ನಾಯಿಗಳಿಗೆ ತರಬೇತಿ ನೀಡಿದೆ. ಅವುಗಳು ಇದೀಗ ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿವೆ.
