last WhatsApp message:ಯುವತಿಯೊಬ್ಬಳು ತಮ್ಮ ತಾಯಿಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಅಮ್ಮನಿಗೆ ತಾವು ಕಳುಹಿಸಿದ್ದ, ಕೊನೆಯ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಈ ಮನಕಲಕುವ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಆಕೆಗೆ ಸಾಂತ್ವನ ಹೇಳಿದ್ದಾರೆ.
ಅಮ್ಮನ ತಲುಪಲೇ ಇಲ್ಲ ಮಗಳು ಕಳುಹಿಸಿದ ಕೊನೆಯ ಸಂದೇಶ
ಕೆಲವು ಆತ್ಮೀಯರ ಪ್ರೀತಿಪಾತ್ರರ ಸಾವು ಮನುಷ್ಯರನ್ನು ತೀವ್ರ ಆಘಾತಕ್ಕೆ ತಳ್ಳುತ್ತದೆ. ಆ ನೋವಿನಿಂದ ಹೊರಬರುವುದಕ್ಕೆ ಅನೇಕರು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಅದು ಜೀವನಪೂರ್ತಿ ಹೊರಬಾರಲಾಗದಂತಹ ನೋವಾಗಿರುತ್ತದೆ. ಅದರಲ್ಲೂ ಪೋಷಕರ ಸಾವು ಮಕ್ಕಳೆಷ್ಟೇ ದೊಡ್ಡವರಾಗಿರಲಿ, ಅವರಲ್ಲಿ ಖಾಲಿತನವನ್ನು ತುಂಬುತ್ತದೆ, ಅದರಲ್ಲೂ ಅಮ್ಮನ ಸಾವು ಸಹಿಸಲಾಗದ ತುಂಬಲಾಗದ ಖಾಲಿತನವನ್ನು ಮನೆ ಹಾಗೂ ಮನದಲ್ಲಿ ತುಂಬಿ ಬಿಡುತ್ತದೆ. ನಾವು ಭೂಮಿಗೆ ಬರುವುದಕ್ಕೆ ಮೊದಲೇ ಪ್ರೀತಿಸುವ ಅರೈಕೆ ಮಾಡುವ ತಾಯಿಯ ಜೊತೆ ಕಂದನಿಗೆ ಸದಾ ಕಾಲ ಅಳಿಸಲಾಗದ ಬಂಧನವಿರುತ್ತದೆ. ಹೀಗಾಗಿಯೇ ತಾಯಿಯ ಸಾವನ್ನು ಪದಗಳಲ್ಲಿ ವಿವರಿಸಲಾಗದು. ಆಕೆ ಹೊರಟು ಹೋದರೆ ಬದುಕಿನಲ್ಲಿ ಶೂನ್ಯ ಆವರಿಸುತ್ತದೆ. ಅಮ್ಮನ ಕಳೆದುಕೊಂಡ ಅನೇಕ ಮಕ್ಕಳು ಅಮ್ಮನ ಅಗಲಿಕೆಯ ನಂತರ ತಾವು ಅನಾಥರಾದೆವು ಎಂದು ಹೇಳಿಕೊಂಡಿದ್ದಾರೆ. ಅವಳ ಅಗಲಿಕೆಯ ನಂತರ ಬದುಕು ಎಂದು ಮೊದಲಿನಂತಾಗುವುದೇ ಇಲ್ಲ. ಅದೇ ರೀತಿ ಇಲ್ಲೊಬ್ಬರು ಅಮ್ಮನ ಅಗಲಿಕೆಯ ಬಗ್ಗೆ ಮಾಡಿರುವ ಪೋಸ್ಟ್ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಪೋಸ್ಟ್ ನೋಡಿ ಕಣ್ಣೀರು ಹಾಕಿದ್ದು, ಆಘಾತದಿಂದ ಹೊರಬರಲು ಸಾಂತ್ವನ ಹೇಳುತ್ತಿದ್ದಾರೆ.
ನಾನೀಗ ಅನಾಥೆ: ಅಗಲಿದ ಅಮ್ಮನ ನೆನೆದು ಕಣ್ಣೀರಿಟ್ಟ ಮಗಳು
ಟ್ವಿಟ್ಟರ್‌ನಲ್ಲಿ ಅಂಜಲಿ ಎಂಬುವವರು (@MsAnjaliB)ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಸೊಗಸಾದ ಅಮ್ಮ ಹೊರಟು ಹೋದಳು. ಆಕೆ ನಮ್ಮನ್ನು ಸೋಮವಾರ ಬಿಟ್ಟು ಹೋದಳು ಮತ್ತು ಈಗ ಮಂಗಳವಾರ ಬಂದಿದೆ. ನಾನು ಆಕೆಯ ಕೈ ಹಿಡಿದುಕೊಂಡು ಆಕೆಯ ಜೊತೆ ಹೋಗಬೇಕಿತ್ತು ಎಂದು ನನಗನಿಸುತ್ತಿದೆ. ನಾನು ನಿನ್ನ ಪ್ರೀತಿಸುತ್ತಿದ್ದೇನೆ ಅಮ್ಮ ಎಂದು ಪಿಸುಗುಟ್ಟುತ್ತಿದ್ದೇನೆ. ನನ್ನ ಮಾತುಗಳು ಆಕೆಯನ್ನು ತಲುಪಬಹುದು ಹಾಗೂ ಅದು ಓದದೆಯೇ ಬಾಕಿಯಾಗದು. ಈಗ ನಾನು ಅನಾಥೆಯಾಗಿದ್ದೇನೆ. ಆಕೆ ಇಲ್ಲದೇ ಹೇಗೆ ಬದುಕಬೇಕೆಂದೇ ನನ್ನ ಗೊತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ತಾವು ತಮ್ಮ ಅಮ್ಮ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದಾಗ ಆಕೆಯ ವಾಟ್ಆಪ್‌ಗೆ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್‌ಶಾಟ್‌ನ್ನು ಅವರು ಹಂಚಿಕೊಂಡಿದ್ದಾರೆ.
ಒಂದು ಕಡೆ ಕೊನೆಯ ಬಾರಿಗೆ ಆಕೆಗೆ ಕಳುಹಿಸಿದ ಸಂದೇಶದ ಸ್ಕ್ರಿನ್ ಶಾಟ್ ಹಾಗೂ ಮತ್ತೊಂದು ಕಡೆ ಅಮ್ಮನ ಕೈಗಳನ್ನು ತನ್ನ ಕೈಗಳಲ್ಲಿ ಇರಿಸಿಕೊಂಡಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಅಮ್ಮ ನೀವು ಹುಷಾರಾಗಿ ನನ್ನ ಬಳಿ ಬರುವಿರಿ, ನೀನು ಹುಷಾರಾದಾಗ ಈ ಮೆಸೇಜ್ ನೋಡುತ್ತಿಯಾ ಹಾಗೂ ನಾವಿಬ್ಬರು ನಗುತ್ತೇವೆ ಎಲ್ಲವೂ ಸರಿ ಹೋಗಲಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನ ಅಮ್ಮ ದೊಡ್ಡ ಫೈಟರ್ ಎಂದು ಅವರು ಕೊನೆಯದಾಗಿ ತಮ್ಮ ತಾಯಿಗೆ ಸಂದೇಶ ಕಳುಹಿಸಿದ್ದಾರೆ.
ಈ ಪೋಸ್ಟ್ ನೋಡಿದ ಕೂಡಲೇ ಅನೇಕರು ಅಂಜಲಿ ಅವರಿಗೆ ಮಾನಸಿಕವಾಗಿ ಬೆಂಬಲ ನೀಡುವುದಕ್ಕಾಗಿ ಸಂದೇಶಗಳನ್ನು ಕಳುಹಿಸಿದ್ದಾರೆ. ಕಾಮೆಂಟ್ ಮಾಡಿದ್ದಾರೆ. ಈ ವಿಚಾರ ಕೇಳುವುದಕ್ಕೆ ಬೇಸರವಾಗುತ್ತಿದೆ. ನೀವು ಏನು ಅನುಭವಿಸುತ್ತಿದ್ದೀರೋ ಅದನ್ನು ನಾನು ಫೀಲ್ ಮಾಡಬಲ್ಲೇ ಆದರೆ ನಿಮ್ಮ ಅಮ್ಮ ಸದಾ ನಿಮ್ಮ ಜೊತೆಗಿರುತ್ತಾರೆ ನಿಮ್ಮ ಹೃದಯಬಡಿತಗಳಲ್ಲಿ ನಿಮ್ಮ ನೆನಪುಗಳಲ್ಲಿ ಅವರು ಜೀವಂತವಾಗಿರುತ್ತಾರೆ. ಸಂಜೆಯ ವೇಳೆ ಪ್ರಕಾಶಮಾನವಾದ ಬೆಳಕಾಗಿ ಕಾಣುತ್ತಾರೆ. ದೇವರು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅಮ್ಮನ ಕಳೆದುಕೊಂಡ ಮಗಳಿಗೆ ನೆಟ್ಟಿಗರಿಂದ ಸಾಂತ್ವಾನದ ಮಳೆ
ಇದು ಜೀವನದ ಕಹಿ ಸತ್ಯ, ಸುಂದರವಾದ ಆತ್ಮಗಳು ನಮ್ಮ ಜೀವನದಲ್ಲಿ ಹೇಗೆ ಯಾಕೆ ಹಾಗೂ ಯಾವಾಗ ಬಂದು ಹೊರಟು ಹೋಗುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ಆಕೆ ನಿಮ್ಮ ಜೊತೆಗೆ ಯಾವಾಗಲೂ ಇರುತ್ತಾಳೆ. ಹಾಗೂ ಆಕೆಯ ಒಳ್ಳೆಯ ನೆನಪುಗಳ ಜೊತೆ ಬದುಕುವುದಕ್ಕೆ ಹಾಗೂ ಆಕೆ ಬಯಸಿದಂತೆ ನೀವು ಬದುಕುವುದಕ್ಕೆ ಕೇಳುತ್ತೇನೆ ನಿಮ್ಮನ್ನು ಆಕೆ ಮೇಲಿನಿಂದಲೇ ನೋಡಿ ಖುಷಿಪಡುವಳು ಎಂದು ಮತ್ತೊಬ್ಬರು ಅಂಜಲಿಗೆ ಸಂತೈಸಿದ್ದಾರೆ.
ನಿಮ್ಮ ತಾಯಿಯ ಅಗಲಿಕೆಗೆ ಹೃದಯದಾಳದಿಂದ ಸಂತಾಪ ಸಲ್ಲಿಸುವೆ. ನಿಮಗೆ ಈ ಕಷ್ಟದ ಸಮಯದಲ್ಲಿ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಅಮ್ಮ ನೀವು ಧೈರ್ಯದಿಂದ ಇರಬೇಕು ಎಂದು ಬಯಸಿರುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಹಾಗೇಯೇ ಇನ್ನೂ ಅನೇಕರು ತಮ್ಮ ಪ್ರೀತಿಪಾತ್ರರ ಸಾವನ್ನು ನೆನಪು ಮಾಡಿಕೊಂಡಿದ್ದಾರೆ. ನಿಮ್ಮ ನೋವಿಗೆ ನಮ್ಮ ಸಂತಾಪಗಳು, ಕೆಲ ವರ್ಷಗಳ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಈ ನೋವು ತುಂಬಾ ನಿಜವಾಗಿರುವಂತಹದ್ದು, ನಾನು ಈಗಲೂ ಬಹಳ ಬೇಜಾರಾದಾಗ ಆಕೆಯ ವಾಟ್ಸಾಪ್‌ಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತಿದ್ದೇನೆ. ಈ ನೋವಿಗೆ ಯಾವುದೇ ಔಷಧಿ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಪ್ರೀತಿಪಾತ್ರರ ಅಗಲಿಕೆಯ ನೋವಿಗೆ ಯಾವುದೇ ಕಾಲಮಿತಿ ಇಲ್ಲ, ಮತ್ತು ಅಂಜಲಿಯವರ ಪೋಸ್ಟ್ ತಾಯಿಯ ಪ್ರೀತಿ ಆಕೆ ಅಗಲಿದ ನಂತರವೂ ಎಷ್ಟು ಆಳವಾಗಿ ಉಳಿಯುತ್ತದೆ ಎಂಬುದನ್ನು ನೆನಪಿಸುತ್ತದೆ. ಕೆಲವು ನಷ್ಟಗಳು ಭರಿಸಲಾಗದವು, ಆದ್ದರಿಂದ ನಿಮಗೆ ಸಾಧ್ಯವಾದಾಗಲೆಲ್ಲಾ ನಿಮ್ಮ ಪ್ರೀತಿಪಾತ್ರರನ್ನು ಪ್ರೀತಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ಎರಡು ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೀಪಾವಳಿಗೆ ಬಂಪರ್ ಕೊಡುಗೆ
ಇದನ್ನೂ ಓದಿ: ನಾಡಿಗೆ ಬಂದ ಕಾಡಾನೆಯ ಬಾಲ ಎಳೆದ ಕಿಡಿಗೇಡಿ: ಕಾಡುಪ್ರಾಣಿಗಳಂತೆ ವರ್ತಿಸಿದ ಜನರ ಬಗ್ಗೆ ತೀವ್ರ ಆಕ್ರೋಶ
