ರೈಲಿನಲ್ಲಿ ನಾಯಿಯೊಂದನ್ನು ಕಟ್ಟಿಹಾಕಿ ಮಾಲೀಕ ಪರಾರಿಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಮಾಲೀಕನಿಲ್ಲದೆ ಭಯಭೀತಗೊಂಡ ನಾಯಿ ಪ್ರಯಾಣಿಕರ ಮೇಲೆ ದಾಳಿ ಮಾಡಲು ಯತ್ನಿಸಿದ್ದರಿಂದ ರೈಲು ತಡವಾಗಿ ಹೊರಟಿದೆ.

ದೆಹಲಿ-ಎನ್‌ಸಿಆರ್‌ ಪ್ರದೇಶದಿಂದ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸಾಗಿಸುವಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ದೇಶಾದ್ಯಂತ ಪ್ರಾಣಿಪ್ರಿಯರು ಪ್ರತಿಭಟಿಸುತ್ತಿರುವಾಗಲೇ ಇಲ್ಲೊಂದು ಕಡೆ ಅಮಾನವೀಯ ಘಟನೆ ನಡೆದಿದೆ. ಸಾಕುಪ್ರಾಣಿಯೊಂದನ್ನು ಮಾಲೀಕನೋರ್ವ ರೈಲಿನಲ್ಲಿ ಕಟ್ಟಿಹಾಕಿ ತೊರೆದು ಹೋಗಿದ್ದಾನೆ. ಆದರೆ ತನ್ನ ಮಾಲೀಕನನ್ನು ಕಾಣದೇ ಆತಂಕಗೊಂಡ ನಾಯಿ ಭಯಗೊಂಡು ತನ್ನ ಹತ್ತಿರ ಬಂದ ಇತರ ಪ್ರಯಾಣಿಕರ ಮೇಲೆ ದಾಳಿ ಮಾಡಲು ಮುಂದಾಗಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಹೀಗಾಗಿ ರೈಲು ಸುಮಾರು ಒಂದು ಗಂಟೆ ವಿಳಂಬವಾಗಿ ಹೊರಟಿದೆ. ಬಿಹಾರದ ರಕ್ಸೌಲ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಪ್ರಾಣಿಗಳು ಅದರಲ್ಲೂ ಶ್ವಾನಗಳು ಬಹಳ ಭಾವುಕ ಜೀವಿಗಳು, ತಮ್ಮ ಮಾಲೀಕರ ಜೊತೆ ಬಹಳ ಅವಿನಾಭಾವ ಸಂಬಂಧವನ್ನು ಅವುಗಳು ಹೊಂದಿರುತ್ತವೆ. ಮಾಲೀಕರು ಅಗಲಿದಾಗ ಕೆಲ ದಿನಗಳ ಕಾಲ ಆಹಾರವನ್ನೇ ತ್ಯಜಿಸಿ ನಂತರ ಮಾಲೀಕನಂತೆ ಸಾವಿನ ಹಾದಿ ಹಿಡಿದ ನಾಯಿಗಳು ಇವೆ. ಮಾಲೀಕನ ಒಡನಾಟವಿಲ್ಲದೇ ಹೋದಾಗ ನಾಯಿಗಳು ಖಿನ್ನತೆಗೆ ಜಾರುತ್ತವೆ. ಇಂತಹ ಭಾವುಕ ಜೀವಿಗಳು ನಾಯಿಗಳು. ಹೀಗಿರುವಾಗ ವ್ಯಕ್ತಿಯೊಬ್ಬ ರೈಲೊಂದರ ಸ್ಲೀಪರ್ ಕೋಚ್‌ನಲ್ಲಿ ನಾಯಿಯನ್ನು ಕಟ್ಟಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಚಾರ ತಿಳಿದ ರೈಲಿನ ಕೆಲ ಪ್ರಯಾಣಿಕರು ನಾಯಿಯ ಬಳಿ ಹೋಗಿ ಅದನ್ನು ಸಮಾಧಾನಪಡಿಸುವ ಯತ್ನ ಮಾಡಿದ್ದಾರೆ. ಆದರೆ ಗುರುತು ಪರಿಚಯವಿಲ್ಲದ ಜನರ ಸಾಮೀಪ್ಯದಿಂದ ಭಯಗೊಂಡ ನಾಯಿ ಅವರ ಮೇಲೆ ದಾಳಿಗೆ ಮುಂದಾಗಿದೆ. ರಕ್ಸೌಲಾ ರೈಲು ನಿಲ್ದಾಣದಲ್ಲಿ ಆಗಸ್ಟ್ 16ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಬಿಹಾರದ ಸಮಸ್ಟಿಪುರಕ್ಕೆ ಹೊರಟಿದ್ದ ಪ್ರಯಾಣಿಕರೊಬ್ಬರು ಟ್ರೈನ್ ಸಂಖ್ಯೆ 55578ರ ರೈಲನ್ನು ಏರಿದಾಗ ಅವರಿಗೆ ರೈಲಿನ ಸೀಟಿನಲ್ಲಿ ನಾಯಿಯನ್ನು ಕಟ್ಟಿ ಹಾಕಿರುವುದು ಗಮನಕ್ಕೆ ಬಂದಿದೆ. ಅಲ್ಲಿದ್ದ ಸ್ಥಳೀಯರು ಹೇಳುವಂತೆ ಉದ್ದೇಶಪೂರ್ವಕವಾಗಿ ಅಪರಿಚಿತ ವ್ಯಕ್ತಿಯೊಬ್ಬರು ರೈಲನ್ನೇರಿ ಈ ಸಾಕುಪ್ರಾಣಿಯನ್ನು ಸೀಟಿಗೆ ಕಟ್ಟಿ ಹಾಕಿ ಬಿಟ್ಟು ಹೋಗಿದ್ದಾನೆ. ಆದರೆ ಮಾಲೀಕನಿಲ್ಲದೇ ಚಿಂತೆಗೀಡಾದ ನಾಯಿ ಜೋರಾಗಿ ಬೊಗಳಲು ಪ್ರಾರಂಭಿಸಿದ್ದಲ್ಲದೇ ಕಂಪಾರ್ಟ್‌ಮೆಂಟ್ ಹತ್ತಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕರನ್ನು ಕಚ್ಚಲು ಮುಂದಾಗಿದೆ. ನಾಯಿಯ ಆಕ್ರಮಣಕಾರಿ ವರ್ತನೆಯಿಂದಾಗಿ ಪ್ರಯಾಣಿಕರು ಬೋಗಿಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರೈಲ್ವೆ ಸಿಬ್ಬಂದಿ ಸುಮಾರು 30 ನಿಮಿಷಗಳ ಕಾಲ ರೈಲನ್ನು ಈ ನಿಲ್ದಾಣದಲ್ಲಿ ನಿಲ್ಲಿಸಿ ನಾಯಿಯನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಆದರೆ ಹಲವು ಬಾರಿ ಪ್ರಯತ್ನಿಸಿದರೂ, ರೈಲ್ವೆ ಅಧಿಕಾರಿಗಳಿಗೆ ಬೋಗಿಯಿಂದ ನಾಯಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಅವರು ನಂತರ ಆ ಕೋಚ್ ಅನ್ನು ಮುಚ್ಚಿ ರೈಲಿನ ಒಳಗೆ ನಾಯಿ ಇರುವಾಗಲೇ ಪ್ರಯಾಣ ಮುಂದುವರಿಸಲು ನಿರ್ಧರಿಸಿದರು. ಇದರಿಂದಾಗಿ ಪ್ರಯಾಣಿಕರು ತಮ್ಮ ಲಗೇಜ್‌ಗಾಗಿ ಕಾಯಬೇಕಾಯಿತು ಮತ್ತು ಇತರ ವಿಭಾಗಗಳಲ್ಲಿ ಆ ಬೋಗಿಯ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಬೇಕಾಗಿದ್ದರಿಂದ ಭಾರಿ ಗೊಂದಲ ಉಂಟಾಗಿತ್ತು. ಘಟನೆ ಬಗ್ಗೆ ಈಗ ರೈಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ನಂತರ ಈ ನಾಯಿಯನ್ನು ರೈಲಿನಲ್ಲೇ ಸುರಕ್ಷಿತವಾಗಿ ದರ್ಭಾಂಗಾ ರೈಲು ನಿಲ್ದಾಣಕ್ಕೆ ಸಾಗಿಸಲಾಯಿತು, ಅಲ್ಲಿಗೆ ಬಂದ ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನಾಯಿಯನ್ನು ವಶಕ್ಕೆ ಪಡೆದರು. ನಂತರ ನಾಯಿಯನ್ನು ಸರಿಯಾದ ಆರೈಕೆ ಮತ್ತು ಪುನರ್ವಸತಿಗಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ ಹಸ್ತಾಂತರಿಸಲಾಯಿತು. ಈ ಘಟನೆಯ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವು ಮೈಮೇಲೆ ಬಿದ್ದಿತ್ತು ಆದ್ರೆ ಕಚ್ಚಿರಲಿಲ್ಲ : ಯುವಕನ ಭ್ರಮೆಗೆ ಹಾವಿನ ಜೀವವೇ ಹೋಯ್ತು

ಇದನ್ನೂ ಓದಿ: ರಜೆ ಮುಗಿಸಿ ಹೊರಟ ಯೋಧನ ಮೇಲೆ ಟೋಲ್ ಸಿಬ್ಬಂದಿಯಿಂದ ಹಲ್ಲೆ: ಟೋಲ್ ಪ್ಲಾಜಾ ಧ್ವಂಸ ಮಾಡಿದ ಸ್ಥಳೀಯರು

View post on Instagram