ಹಾವು ಎಂದರೆ ಹೌಹಾರೋರೆ ಜಾಸ್ತಿ. ಹಾವಿಗೆ ಭಯಪಡದ ಜನರಿಲ್ಲ, ಅದೇ ರೀತಿ ಇಲ್ಲೊಬ್ಬನಿಗೆ ಹಾವಿನ ಬಗ್ಗೆ ಇದ್ದ ಭಯವೇ ಭ್ರಮೆಯಾಗಿ ಕಾಡಿದೆ. ಹಾಗಿದ್ರೆ ಆಗಿದ್ದೇನು ಇಲ್ಲಿದೆ ನೋಡಿ ಸ್ಟೋರಿ…

ಹಾವು ಎಂದರೆ ಹೌಹಾರೋರೆ ಜಾಸ್ತಿ. ಹಾವಿಗೆ ಭಯಪಡದ ಜನರಿಲ್ಲ, ಅದೇ ರೀತಿ ಇಲ್ಲೊಬ್ಬನಿಗೆ ಹಾವಿನ ಬಗ್ಗೆ ಇದ್ದ ಭಯವೇ ಭ್ರಮೆಯಾಗಿ ಕಾಡಿದೆ. 32 ವರ್ಷದ ಯುವಕನೋರ್ವ ಎಂದಿನಂತೆ ಭಾನುವಾರ ಹಗಲಿನ ಸಮಯದಲ್ಲಿ ವಿಶ್ರಾಂತಿಗಾಗಿ ಮಲಗಿದ್ದು, ಎದ್ದು ಹಾಸಿಗೆ ಮಡಚಿಡುತ್ತಿದ್ದ ವೇಳೆ ಆತನ ಮೈಮೇಲೆ ಹಾವೊಂದು ಮೇಲಿನಿಂದ ಬಿದ್ದಿದೆ. ಇದರಿಂದ ತೀವ್ರವಾಗಿ ಭಯಗೊಂಡ ಆತ ಹಾವನ್ನು ಅದರ ತಲೆಯಲ್ಲಿಯೇ ಗಟ್ಟಿಯಾಗಿ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಆದರೆ ಅದನ್ನು ದೂರ ಎಸೆಯುವ ಬದಲು ಉಸಿರಾಡಲು ಸಾಧ್ಯವಾಗದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.

ಹಾವು ಕಚ್ಚುವುದಕ್ಕೂ ಮೊದಲೇ ಆತ ಹಾವನ್ನು ಹಿಡಿದುಕೊಂಡಿದ್ದರಿಂದ ಹಾವು ಅವನಿಗೆ ಕಚ್ಚಿಲ್ಲ. ಆದರೆ ಹಾವಿನ ಭಯದಲ್ಲಿದ್ದ ಆತ ಅದು ತನಗೆ ಕಚ್ಚಿದೆ ಎಂದೇ ಭಯದಿಂದ ನಡುಗುತ್ತಾ ಕೆಳಗೆ ಬಿದ್ದಿದ್ದಾನೆ. ಅದು ನನಗೆ ಕಚ್ಚಿದೆ ನನ್ನನ್ನು ರಕ್ಷಣೆ ಮಾಡಿ ಎಂದು ಜೋರಾಗಿ ಕೂಗಿಕೊಂಡ ಆತ ನೆಲದ ಮೇಲೆ ಬಿದ್ದಿದ್ದಾನೆ. ಆತನ ತಾಯಿ ಹಾಗೂ ಸಹೋದರ ಆತನ ಬಳಿ ಓಡಿ ಬಂದಿದ್ದಾರೆ. ಅವನು ಅಳುತ್ತಿರುವುದನ್ನು ಕಂಡಾಗ, ಹಾವು ಅವನ ಕೈಗೆ ಗಾಯ ಮಾಡಿದೆ ಎಂದೇ ನಾವು ಭಾವಿಸಿದೆವು.

ನಾನು ತುಂಬಾ ಹೆದರಿದೆ, ನನ್ನ ಮಗನ ಹತ್ತಿರವೂ ಹೋಗಲು ಸಾಧ್ಯವಾಗಲಿಲ್ಲ ಎಂದು ಅವನ ತಾಯಿ ಆ ಘಟನೆಯನ್ನು ನೆನಪಿಸಿಕೊಂಡರು ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಹಾವು ಕಚ್ಚಿದೆ ಎಂದು ಅವನು ಪದೇ ಪದೇ ಹೇಳುತ್ತಲೇ ಇದ್ದನು. ನಾನು ಅದನ್ನು ಎಸೆಯುವಂತೆ ಬೇಡಿಕೊಂಡೆ, ಆದರೆ ಅವನು ಬಿಡಲಿಲ್ಲ. ಅವನು ಭಯಗೊಂಡಿದ್ದ ಎಂದು ಅವರು ಹೇಳಿದರು.

ಆ ದೃಶ್ಯ ಹಾಗೂ ಆತನ ಕಿರುಚಾಟ ಕೇಳಿ ಹೊರಗೆ ಬಂದಿದ್ದ ನೆರೆಹೊರೆಯ ಮನೆಯವರು ಆತನ ಬಳಿ ಹಾವನ್ನು ಬಿಟ್ಟು ಬಿಡುವಂತೆ ಕೇಳಿದರು ಆತ ಮಾತ್ರ ಹಾವನ್ನು ಬಿಟ್ಟು ಬಿಡಲಿಲ್ಲ, ಹಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದಿದ್ದ ಗೋವಿಂದ್ ತನ್ನ ಮುಷ್ಟಿಯನ್ನು ತೆರೆಯಲು ನಿರಾಕರಿಸಿದ. ಹೀಗಾಗಿ ಸುಮಾರು 30 ನಿಮಿಷಗಳ ಕಾಲ ಆತನ ಬಿಗಿಯಾದ ಹಿಡಿತಕ್ಕೆ ಸಿಲುಕಿದ ಹಾವು ಉಸಿರಾಡಲಾಗದೇ ಸಾವನ್ನಪ್ಪಿದೆ. ಇದಾದ ನಂತರವೇ ಆತನ ಕೈನಿಂದ ಹಾವನ್ನು ಹೊರಗೆ ತೆಗೆಯುವಲ್ಲಿ ಕುಟುಂಬದವರು ಯಶಸ್ವಿಯಾದರು. ಅಲ್ಲದೇ ನಂತರ ಆತನನ್ನು ಸಮುದಾಯ ಆಸ್ಪತ್ರೆಗೆ ಕರೆದೊಯ್ದರು. ಈ ಸಮಯದಲ್ಲೂ ಗೋವಿಂದ್ ಡಾಕ್ಟ್ರೆ ನಂಗೆ ಹಾವು ಕಚ್ಚಿದೆ ನನ್ನನ್ನು ರಕ್ಷಿಸಿ ಎಂದೇ ಕಿರುಚಾಡುತ್ತಿದ್ದ.

ಆಸ್ಪತ್ರೆಯಲ್ಲಿ ವೈದ್ಯರು ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿದರು. ಆದರೆ ಹಾವು ಕಚ್ಚಿದ ಗುರುತು ಎಲ್ಲಿಯೂ ಆತನ ದೇಹದಲ್ಲಿ ಕಾಣಿಸಲಿಲ್ಲ, ಹೀಗಾಗಿ ವೈದ್ಯರು ಅವರ ಕುಟುಂಬವನ್ನು ಸಮಾಧಾನಿಸುತ್ತಾ, ಯಾವುದೇ ಹಾವು ಕಚ್ಚಿದ ಗುರುತುಗಳು ಕಂಡು ಬಂದಿಲ್ಲ. ಹಾವು ಕಡಿತದ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯ ಡಾ. ವೀರ್‌ಪಾಲ್ ಸಿಂಗ್ ಹೇಳಿದರು. ನಾವು ಅವರಿಗೆ ಇದನ್ನು ವಿವರಿಸಿದೆವು, ಆದರೆ ಅವರು ತುಂಬಾ ಆಘಾತಕ್ಕೊಳಗಾಗಿದ್ದರು. ಅವರು ನಮ್ಮ ಮಾತನ್ನು ನಂಬಲಿಲ್ಲ. ಅವರು ನನ್ನನ್ನು ಉಳಿಸಿ ಉಳಿಸಿ ಎಂದು ಬೇಡಿಕೊಳ್ಳುತ್ತಲೇ ಇದ್ದರು. ನಂತರ ಕುಟುಂಬದ ಒತ್ತಾಯದ ಮೇರೆಗೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಲ್ಲಿಯೂ ವೈದ್ಯರು ಗೋವಿಂದ್ ಸುರಕ್ಷಿತ ಎಂದು ಘೋಷಿಸಿದರೂ ಅವನ ಭಯ ಮಾತ್ರ ಇನ್ನೂ ಹೋಗಿಲ್ಲ. ಮನೆಗೆ ಹಿಂತಿರುಗಿದ ನಂತರವೂ, ಅವನ ಸಹೋದರ ಹಾವು ಅವನನ್ನು ಎಂದಿಗೂ ಕಚ್ಚಲಿಲ್ಲ ಎಂದು ನೆನಪಿಸುತ್ತಲೇ ಇದ್ದಾನೆ. ಅವನ ತಾಯಿಯೂ ಕೂಡ ಅವನ ಪಕ್ಕದಲ್ಲಿ ಕುಳಿತು ಅವನನ್ನು ಸಮಾಧಾನಪಡಿಸುತ್ತಾಳೆ. ಆದರೆ ಗೋವಿಂದ್ ಇನ್ನೂ ಭಯದಿಂದ ಪಿಸುಗುಟ್ಟುತ್ತಲೇ ಇದ್ದಾನೆ.

ಗೋವಿಂದನ ಗ್ರಾಮದ ಜನರಿಗೆ ಇದೊಂದು ವಿಚಿತ್ರ ಘಟನೆಯಾಗಿ ಪರಿಣಮಿಸಿದ್ದು ಅವರು ಈ ವಿಚಾರದ ಬಗ್ಗೆ ಚರ್ಚಿಸುತ್ತಲೇ ಇದ್ದಾರೆ. ಕೆಲವರು ಅವನನ್ನು ಬರಿ ಕೈಗಳಿಂದ ಹಾವನ್ನು ಕೊಂದಿದ್ದಕ್ಕಾಗಿ ಧೈರ್ಯಶಾಲಿ ಎಂದು ಕರೆದರೆ ಇನ್ನು ಕೆಲವರು ಅದು ಭಯವಷ್ಟೇ ಎಂದು ಹೇಳಿದ್ದಾರೆ. ಆದರೆ ಗೋವಿಂದನ ಕುಟುಂಬಕ್ಕೆ ಇದೊಂದು ಭಯಾನಕ ಘಟನೆಯಾಗಿ ಹೊರಹೊಮ್ಮಿದೆ. ಒಟ್ಟಿನಲ್ಲಿ ಈತನ ಭ್ರಮೆಯಿಂದಾಗಿ ಹಾವೊಂದು ಪ್ರಾಣ ಬಿಟ್ಟಿದೆ.