Doctor's Negligence:ಕಪ ಹಾಗೂ ಶೀತದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವೈದ್ಯನೋರ್ವ ತಪ್ಪಾದ ಇಂಜೆಕ್ಷನ್ ನೀಡಿದ ಪರಿಣಾಮ 2 ವರ್ಷದ ಮಗು ಸಾವನ್ನಪ್ಪಿದೆ. ಮಧ್ಯಪ್ರದೇಶದ ಶೆಹೋರೆ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ವೈದ್ಯನ ಎಡವಟ್ಟಿಗೆ ಉಸಿರು ಚೆಲ್ಲಿದ ಕಂದಮ್ಮ
ಕಪ್ ಸಿರಪ್ ದುರಂತದಿಂದಾಗಿ ದೇಶದೆಲ್ಲೆಡೆ ಹಲವು ಮಕ್ಕಳು ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಾಸುವ ಮೊದಲೇ ವೈದ್ಯನೋರ್ವನ ಎಡವಟ್ಟಿನಿಂದಾಗಿ ಮಗುವೊಂದು ಪ್ರಾಣ ಬಿಟ್ಟಿದೆ. ಕಪ ಹಾಗೂ ಶೀತದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವೈದ್ಯನೋರ್ವ ತಪ್ಪಾದ ಇಂಜೆಕ್ಷನ್ ನೀಡಿದ ಪರಿಣಾಮ 2 ವರ್ಷದ ಮಗು ಸಾವನ್ನಪ್ಪಿದೆ. ಮಧ್ಯಪ್ರದೇಶದ ಶೆಹೋರೆ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶೆಹೋರ್‌ನ ಪಿಪ್ಲಿಯಾ ಮೀರಾ ಗ್ರಾಮದ 2 ವರ್ಷದ ಮಗು ವೈದ್ಯರ ಎಡವಟ್ಟಿನಿಂದಾಗಿ ಪ್ರಾಣ ಬಿಟ್ಟಿದೆ.
ಜ್ವರ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಇಂಜೆಕ್ಷನ್ ಬಳಿಕ ಚಿಂತಾಜನಕ
ತಪ್ಪಾದ ಇಂಜೆಕ್ಷನ್ ಕೊಟ್ಟಿದ್ದರಿಂದ ಮಗುವಿನ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿ ಮಗು ಕೋಮಾಗೆ ಜಾರಿ ನಂತರ ಪ್ರಾಣ ಬಿಟ್ಟಿದೆ. ಬರ್ಖೆಡಿಯಲ್ಲಿರುವ ಮುಸ್ಕನ್ ಕ್ಲಿನಿಕ್‌ನ ವೈದ್ಯ ಅಶೋಕ್ ವಿಶ್ವಕರ್ಮ ಎಂಬುವವರೇ ಹೀಗೆ ತಪ್ಪು ಇಂಜೆಕ್ಷನ್ ನೀಡಿ ಮಗುವಿನ ಸಾವಿಗೆ ಕಾರಣರಾದವರು. ಘಟನೆಯ ಬಳಿಕ ಈ ವೈದ್ಯ ಹಾಗೂ ಆತನ ಮನೆಯವರು ಎಸ್ಕೇಪ್ ಆಗಿದ್ದಾರೆ.
ಕನ್ಹೇಯ ಲಾಲ್ ಕುಶ್ವಾಹ್ ಅವರ 2 ವರ್ಷದ ಮಗಳು ದೀಕ್ಷಾಗೆ ಜ್ವರ ಹಾಗೂ ಶೀತ ಕಾಣಿಸಿಕೊಂಡಿದ್ದರಿಂದ ಪೋಷಕರು ಮಗುವನ್ನು ಈ ಮುಸ್ಕಾನ್ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಮಗುವಿಗೆ ಇಂಜೆಕ್ಷನ್ ನೀಡಿದ್ದರು. ಇದಾದ ನಂತರವೇ ಮಗುವಿನ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಘಟನೆಯ ಬಳಿಕ ಪೊಲೀಸರು ಮಗುವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಮುಸ್ಕನ್ ಕ್ಲಿನಿಕ್‌ನಲ್ಲಿ ಇಂಜೆಕ್ಷನ್ ನೀಡಿದ ಬಳಿಕ ಅಸ್ವಸ್ಥಗೊಂಡ ಮಗುವನ್ನು ಮೊದಲಿಗೆ ಶಿಹೋರ್ ಜಿಲ್ಲಾ ಆಸ್ಪತ್ರೆಗ ಕರೆದೊಯ್ದಿದ್ದಾರೆ. ಅಲ್ಲಿ ಮಗುವನ್ನು ಭೋಪಾಲ್‌ನಲ್ಲಿರುವ ಹಮಿದಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ ಕುಟುಂಬದವರು ಮಗುವನ್ನು ಭೋಪಾಲ್‌ನ ಲಾಲ್‌ಘಟಿಯಲ್ಲಿರುವ ಮನನ್ ಚೈಲ್ಡ್ ಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದರು ಮಗುವಿಗೆ ಪ್ರಜ್ಞೆ ಬಂದಿಲ್ಲ, ಹಾಗೂ ಇಂದು ಮುಂಜಾನೆ ಮಗು ಸಾವನ್ನಪ್ಪಿದೆ.
ಘಟನೆಯ ಬಳಿಕ ವೈದ್ಯರು ಮತ್ತು ಅವರ ಮಗನ ನಡವಳಿಕೆಯ ಬಗ್ಗೆ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿ ವೈದ್ಯರ ಮಗ ದೇವ್ ವಿಶ್ವಕರ್ಮ ಚಿಕಿತ್ಸೆಯ ಸಮಯದಲ್ಲಿ ಎರಡು ಗಂಟೆಗಳ ಕಾಲ ಜಿಲ್ಲಾ ಆಸ್ಪತ್ರೆಯಲ್ಲಿದ್ದರು. ಆದರೆ ನಂತರ ಅವರು ಸದ್ದಿಲ್ಲದೆ ಗ್ರಾಮಕ್ಕೆ ಮರಳಿದರು ಎಂದು ಕುಟುಂಬ ಹೇಳಿದೆ. ಘಟನೆಯ ಬಳಿಕ ಕ್ಲಿನಿಕ್ ಮುಚ್ಚಿರುವ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ನಂತರ, ಆರೋಪಿ ವೈದ್ಯರು ತಮ್ಮ ಕುಟುಂಬದೊಂದಿಗೆ ಪರಾರಿಯಾಗಿದ್ದಾರೆ ಮತ್ತು ಕ್ಲಿನಿಕ್ ಲಾಕ್ ಆಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ರವೀಂದ್ರ ಯಾದವ್ ಹೇಳಿದ್ದಾರೆ.
