ಗೆಳೆಯನಿಗೆ ರಕ್ಷಿಸುವಂತೆ ಸಂದೇಶ ಕಳುಹಿಸಿದ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಗೆಳೆಯ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ಅಪ್ಪ ಚಿಕ್ಕಪ್ಪನನ್ನು ಬಂಧಿಸಲಾಗಿದೆ.
ಅಹ್ಮದಾಬಾದ್: ಗೆಳೆಯನಿಗೆ ರಕ್ಷಿಸು ಎಂದು ಮೆಸೇಜ್ ಮಾಡಿದ ಹುಡುಗಿಯೊಬ್ಬಳು ಇದಾಗಿ ಕೆಲ ಗಂಟೆಗಳಲ್ಲಿ ಸಾವನ್ನಪ್ಪಿದಂತಹ ಘಟನೆ ನಡೆದಿದ್ದು, ಸಾವಿನ ಬಗ್ಗೆ ಈಗ ಅನುಮಾನ ಮೂಡಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮರ್ಯಾದಾ ಹತ್ಯೆ ನಡೆದಿರುವ ಅನುಮಾನ ಮೂಡಿದೆ. ಚಂದ್ರಿಕಾ ಚೌಧರಿ ಸಾವನ್ನಪ್ಪಿದ ಯುವತಿ. ಈಕೆ ಮಧ್ಯರಾತ್ರಿ ತನ್ನ ಗೆಳೆಯನಿಗೆ ಇನ್ಸ್ಟಾಗ್ರಾಂನಲ್ಲಿ ರಕ್ಷಿಸುವಂತೆ ಸಂದೇಶ ಕಳುಹಿಸಿದ್ದಾಳೆ. ಇದಾದ ಕೆಲ ಗಂಟೆಗಳಲ್ಲಿ ಅವಳ ಸಾವು ಸಂಭವಿಸಿದೆ. ಆರಂಭದಲ್ಲಿ ಇದು ಸಹಜ ಸಾವಿನಂತೆ ಕಾಣುತ್ತಿದ್ದು, ಈಗ ಪೋಷಕರ ಮೇಲೆ ಅನುಮಾನ ಮೂಡಿದೆ.
ನಂತರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗಿಳಿದ ಪೊಲೀಸರು ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮೃತ ಚಂದ್ರಿಕಾ ಚೌಧರಿಯನ್ನು ಆಕೆಯ ತಂದೆ ಸೇಧಾಭಾಯಿ ಪಟೇಲ್ ಮತ್ತು ಚಿಕ್ಕಪ್ಪ ಶಿವಭಾಯಿ ಪಟೇಲ್ ಅವರು ಥರಾಡ್‌ನ ದಾಂಟಿಯಾದಲ್ಲಿರುವ ಅವರ ಮನೆಯಲ್ಲಿ ಕೊಲೆ ಮಾಡಿದ್ದಾರೆ. ಆಕೆಯ ತಂದೆ ನಾಪತ್ತೆಯಾಗಿದ್ದಾರೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ನಾಲಾ ತಿಳಿಸಿದ್ದಾರೆ.
ಮೃತ ಚಂದ್ರಿಕಾ ಚೌಧರಿ ಹರೀಶ್ ಚೌಧರಿ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಳು, ಆದರೆ ಆಕೆಯ ಮನೆಯರಿಗೆ ಇದು ಇಷ್ಟವಿರಲಿಲ್ಲ ಆಕೆ ತಾವು ನೋಡಿದ ಹುಡುಗನನ್ನು ಮದುವೆಯಾಗಬೇಕು ಎಂದು ಅವರು ಬಯಸಿದ್ದರು. ಇತ್ತ ಪೋಷಕರು ತನ್ನ ಪ್ರೀತಿಗೆ ಒಪ್ಪುವುದಿಲ್ಲ ಎಂಬ ವಿಚಾರ ತಿಳಿದ ಚಂದ್ರಿಕಾ ಆ ವಿಚಾರವನ್ನು ಗೆಳೆಯ ಹರೀಶ್‌ಗೆ ತಿಳಿಸಿದ್ದಳು. ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದು ರಾತ್ರಿ ಗೆಳೆಯ ಹರೀಶ್ ಗೆ ಮೆಸೇಜ್ ಮಾಡಿದ್ದ ಆಕೆ ತನ್ನ ಕುಟುಂಬದಿಂದ ತನ್ನನ್ನು ರಕ್ಷಿಸುವಂತೆ ಕೇಳಿದ್ದಳು.
ಬಂದು ನನ್ನನ್ನು ಕರೆದುಕೊಂಡು ಹೋಗಿ ಇಲ್ಲದಿದ್ದರೆ, ನನ್ನ ಮನೆಯವರು ನನ್ನ ಇಚ್ಛೆಗೆ ವಿರುದ್ಧವಾಗಿ ನನಗೆ ಮದುವೆ ಮಾಡುತ್ತಾರೆ. ನಾನು ಮದುವೆಗೆ ಒಪ್ಪದಿದ್ದರೆ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಉಳಿಸಿ ಎಂದು ಆಕೆ ಕೊನೆಯದಾಗಿ ತನ್ನ ಪ್ರಿಯಕರನಿಗೆ ಸಂದೇಶ ಕಳುಹಿಸಿದ್ದಾಳೆ.
ಆಕೆ ಸಂದೇಶ ಕಳುಹಿಸಿದ ಕೆಲವು ಗಂಟೆಗಳ ನಂತರ ಆಕೆ ಮನೆಯಲ್ಲೇ ಶವವಾಗಿದ್ದಳು. ಆರಂಭದಲ್ಲಿ, ಇದು ಆತ್ಮ8ತ್ಯೆಯಂತೆ ಕಂಡುಬಂದರೂ, ಪೊಲೀಸರಿಗೆ ನೀಡಿದ ದೂರು ತನಿಖೆಗೆ ದಾರಿ ಮಾಡಿಕೊಟ್ಟಿತು. ತನ್ನ ಗೆಳತಿಯ ಮರಣದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಹರೀಶ್, ಚಂದ್ರಿಕಾ ಸ್ವಾಭಾವಿಕವಾಗಿ ಸಾಯಲಿಲ್ಲ, ಬದಲಾಗಿ ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಎಎಸ್ಪಿ ನಳ, ಇದು ಚಂದ್ರಿಕಾಳ ತಂದೆ ಮತ್ತು ಚಿಕ್ಕಪ್ಪ ಪ್ಲಾನ್ ಮಾಡಿ ಕಾರ್ಯಗತಗೊಳಿಸಿದ ಕೊಲೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದರು. ಕೊಲೆಗೆ ಕೆಲವು ದಿನಗಳ ಮೊದಲು, ಚಂದ್ರಿಕಾ, ಹರೀಶ್ ಜೊತೆ ಮನೆಯಿಂದ ಹೊರಟು ಹೋಗಿದ್ದಳು, ಆದರೆ ಪೊಲೀಸರು ಅವಳನ್ನು ಪತ್ತೆ ಮಾಡಿದರು ಮತ್ತು ಆಕೆಯ ಕುಟುಂಬವು ನಾಪತ್ತೆ ದೂರು ದಾಖಲಿಸಿದ್ದರಿಂದ ಚಂದ್ರಿಕಾಳನ್ನು ವಾಪಸ್ ಪೋಷಕರ ಜೊತೆಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ತನ್ನನ್ನು ತನ್ನ ಹೆತ್ತವರು ಕೊಲ್ಲಬಹುದೆಂದು ಚಂದ್ರಿಕಾ ಭಯದಿಂದ ಹರೀಶ್‌ಗೆ ಸಂದೇಶ ಕಳುಹಿಸಿದ ನಂತರ ಹರೀಶ್ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆಗೂ ಮೊದಲೇ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತು. ಆಕೆಯ ಕುಟುಂಬವು ಅವಳು ನೈಸರ್ಗಿಕವಾಗಿ ಸಾವನ್ನಪ್ಪಿದ್ದಾಳೆಂದು ಹೇಳುವ ಮರಣ ಪ್ರಮಾಣಪತ್ರವನ್ನು ಸಲ್ಲಿಸಿತು.
ಆದರೆ ಹರೀಶ್‌ಗೆ ಮಾತ್ರ ಇದು ಸುಳ್ಳು ಎಂಬುದು ಖಚಿತವಾಗಿತ್ತು. ಚಂದ್ರಿಕಾ ಸಾವಿನ ತನಿಖೆ ಕೋರಿ ಅವರು ಪೊಲೀಸರಿಗೆ ಪತ್ರ ಬರೆದರು. ತನಿಖೆಯ ಸಮಯದಲ್ಲಿ, ಪೊಲೀಸರು ಕೆಲವು ಮಿಸ್ಸಿಂಗ್ ಡಾಟ್‌ಗಳ ಜೊತೆಗೂಡಿಸಿದಾಗ ಅವರಿಗೂ ಅನುಮಾನ ಬಂದಿದೆ.
ನೈಸರ್ಗಿಕ ಸಾವಿನ ಸಂದರ್ಭದಲ್ಲಿಯೂ ಸಹ, ಕುಟುಂಬಗಳು ವೈದ್ಯರನ್ನು ಸಂಪರ್ಕಿಸುತ್ತಾರೆ. ಆದರೆ ಹುಡುಗಿಯನ್ನು ಎಂದಿಗೂ ವೈದ್ಯರ ಬಳಿಗೆ ಕರೆದೊಯ್ಯಲಿಲ್ಲ. ಆಕೆಯ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಯಿತು. ಸಾವಿನ ನಂತರ ಯಾವುದೇ ಹತ್ತಿರದ ಸಂಬಂಧಿಕರನ್ನು ಕರೆಯಲಿಲ್ಲ, ಪಾಲನ್‌ಪುರದಲ್ಲಿ ಓದುತ್ತಿರುವ ಆಕೆಯ ಸಹೋದರನನ್ನು ಸಹ ಕರೆಯಲಿಲ್ಲ. ಇದು ಕುಟುಂಬವು ಏನನ್ನೋ ಮರೆಮಾಡಲು ಪ್ರಯತ್ನಿಸುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಯಿತು ಎಂದು ಎಎಸ್‌ಪಿ ನಲಾ ಹೇಳಿದ್ದಾರೆ.
ಹೆಚ್ಚಿನ ತನಿಖೆಯಲ್ಲಿ ಚಂದ್ರಿಕಾ ತಮ್ಮ ಮಾತಿಗೆ ಮಣಿಯದಿದ್ದರೆ ಜೂನ್ 24 ರ ರಾತ್ರಿಯೇ ಆಕೆಯನ್ನು ಕೊಲ್ಲಲು ಆಕೆಯ ತಂದೆ ಮತ್ತು ಚಿಕ್ಕಪ್ಪ ಯೋಜಿಸಿದ್ದರು ಆಕೆಯ ಕೊಲೆ ಯಾವುದೇ ಅನುಮಾನಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಅವರು ಮೂರು ಹಂತದ ಯೋಜನೆಯನ್ನು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು, ಆರೋಪಿಗಳು ಆಕೆಗೆ ನಿದ್ರಾಜನಕಗಳನ್ನು ನೀಡಿ ನಿದ್ದೆಗೆಡಿಸಿದರು. ನಂತರ ಅವರು ಅವಳನ್ನು ಕತ್ತು ಹಿಸುಕಿ, ಆತ್ಮ*ತ್ಯೆ ಎಂದು ಬಿಂಬಿಸಲು ಅವಳ ದೇಹವನ್ನು ನೇತುಹಾಕಿದರು. ರಾತ್ರಿಯಲ್ಲಿ ಅವಳ ದೇಹವನ್ನು ನೋಡಿದವರು ಅವಳು ಆತ್ಮ*ತ್ಯೆ ಮಾಡಿಕೊಂಡಿದ್ದಾಳೆಂದು ನಂಬಿದ್ದರು. ಆದರೆ ಬೆಳಗ್ಗೆ, ಅವಳು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾಳೆಂದು ಅವರು ಇತರರಿಗೆ ಹೇಳಿದರು ಎಂದು ಅಧಿಕಾರಿ ಹೇಳಿದರು.
ತಾಂತ್ರಿಕ ವಿಶ್ಲೇಷಣೆ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ, ಇದು ಯೋಜಿತ ಕೊಲೆ ಎಂದು ತೀರ್ಮಾನಿಸಲಾಯಿತು ಮತ್ತು ಥರಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಆಕೆಯ ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಆಕೆಯ ತಂದೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
