ಫಾಸ್ಟ್ ಗಮ್ ವಾಸನೆ ಎಳೆಯುವ ಚಟಕ್ಕೆ ಬಿದ್ದ ಯುವಕನೊಬ್ಬ ತನ್ನ ಅಜ್ಜಿಯನ್ನು ಕೊಂದು ಪೋಷಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದ್ದು, ಯುವಜನರಲ್ಲಿ ಹೆಚ್ಚುತ್ತಿರುವ ಅಂಟು ಚಟದ ಬಗ್ಗೆ ಕಳವಳ ಮೂಡಿಸಿದೆ
ಮಹಾರಾಷ್ಟ್ರ: ಕುಡಿತದ ಚಟ, ಬೀಡಿ ಸಿಗರೇಟ್ ಚಟ, ಇತ್ತೀಚೆಗೆ ಯುವ ಸಮುದಾಯದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಇನ್ನು ವ್ಯಾಪಕವಾಗಿರುವ ಗಾಂಜಾ ಅಫೀಮು ಚಟಗಳ ಜೊತೆಗೆ ಈ ಅಂಟಿನ ವಾಸನೆ ಎಳೆಯುವ ಚಟವೂ ಒಂದು. ಇದು ಹೆಚ್ಚಾಗಿ ಯುವ ಸಮುದಾಯದಲ್ಲಿ ಕಂಡು ಬರುತ್ತಿದೆ. ಕೆಲವರು ವಿಕ್ಸ್, ಅಮೃತಂಜನ್ ಮುಂತಾದ ಶೀತ ನಿವಾರಕ ವಸ್ತುಗಳಿಗೆ ದಾಸರಾಗಿರುವುದನ್ನು ನೀವು ನೋಡಿರಬಹುದು. ಆದರೆ ಅದು ಮನೋವಿಕಾರೆವನ್ನು ತರುವುದು ವಿರಳ. ಆದರೆ ಈ ಅಂಟಿನ ವಾಸನೆ ಎಳೆಯುವ ಚಟ ಬಹಳ ಅಪಾಯಕಾರಿ ಈ ಚಟಕ್ಕೆ ಬಿದ್ದವರು ಯಾರನ್ನಾದರೂ ಸಾಯಿಸಿಯೂ ಬಿಡಬಹುದು. ಅದೇ ರೀತಿ ಇಲ್ಲೊಂದು ಕಡೆ ಫಾಸ್ಟ್ ಗಮ್ ವಾಸನೆ ಎಳೆದುಕೊಳ್ಳುವ ಚಟಕ್ಕೆ ಬಿದ್ದ ಯುವಕನೋರ್ವ ತನ್ನ ಅಜ್ಜಿಯನ್ನೇ ಯಮಪುರಿಗೆ ಕಳುಹಿಸಿದ್ದಾನೆ. ಜೊತೆಗೆ ಈತ ತನ್ನ ಪೋಷಕರ ಮೇಲೆಯೂ ಹಲ್ಲೆ ಮಾಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಫಾಸ್ಟ್ ಗಮ್ ಚಟಕ್ಕೆ ಬಿದ್ದ ಯುವಕನಿಂದ ಅಜ್ಜಿಯ ಹತ್ಯೆ:
ಅಂದಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿ ಎಂಬಲ್ಲಿ ಈ ಫಾಸ್ಟ್ ಗಮ್ ರಾಸಾಯನಿಕದ ಪ್ರಭಾವದಲ್ಲಿ ಇದ್ದ ಯುವಕ ಚಾಕುವಿನಿಂದ ತನ್ನ ಅಜ್ಜಿ ಹಾಗೂ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಈತನ ಅಪ್ಪ ಅಮ್ಮನ ಸ್ಥಿತಿ ಗಂಭೀರವಾಗಿದೆ. ತನ್ನ ಈ ಅಂಟು ವ್ಯಸನಕ್ಕೆ ಹಣ ನೀಡುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಈತ ಕ್ರೋಧಗೊಂಡು ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ.
ಹೀಗೆ ಪೋಷಕರ ಮೇಲೆ ಹಲ್ಲೆ ಮಾಡಿದವನನ್ನು ಅರ್ಬಾಜ್ ರಂಜಾನ್ ಖುರೇಷಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಈತನ ಅಜ್ಜಿ ಜುಬೇದಾ ಖುರೇಶಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈತನ ಪೋಷಕರನ್ನು ಅಂಬಾಜೋಗೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಅರ್ಬಾಜ್ ತನ್ನ ಕುಟುಂಬ ಸದಸ್ಯರ ಬಳಿ ಹಣ ಕೇಳಿದ್ದಾನೆ, ಆದರೆ ಅವರು ಕೊಡಲು ನಿರಾಕರಿಸಿದ್ದಾರೆ. ಆದರೆ ಈ ಗಮ್ ಚಟದ ಅಮಲಿನಲ್ಲಿದ್ದ ಈತ ಕ್ರೋಧಗೊಂಡು ಪೋಷಕರು ಹಾಗೂ ಅಜ್ಜಿಗೆ ಇರಿದಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಏನಿದು ಗಮ್ ಚಟ(Glue intoxication)
ಈ ಫಾಸ್ಟ್ ಗಮ್ ವಾಸನೆಯನ್ನು ಉಸಿರಿನೊಂದಿಗೆ ಎಳೆದುಕೊಳ್ಳುವ ಚಟವೂ ಇತ್ತೀಚೆಗೆ ಯುವ ಸಮುದಾಯದಲ್ಲಿ ಕಂಡು ಬರುವ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. ಹೆಚ್ಚಾಗಿ ಯುವಜನರು ಮತ್ತು ಅಪ್ರಾಪ್ತ ವಯಸ್ಕರೂ ಈ ಚಟಕ್ಕೆ ದಾಸರಾಗುತ್ತಿದ್ದಾರೆ. ಪೇಂಟ್ ತಿನ್ನರ್‌ಗಳು ಹಾಗೂ ಫಾಸ್ಟ್‌ಗಮ್‌ನಲ್ಲಿ ಕಂಡು ಬರುವ ಟೌಲೀನ್ ಎಂಬ ವಿಷಕಾರಿ ರಾಸಾಯನಿಕಕ್ಕೆ ಜನ ಆಕರ್ಷಿತರಾಗುತ್ತಾರೆ. ಇದು ಮೆದುಳಿನ ಕೋಶಗಳಲ್ಲಿ ಕರಗಿ ಭ್ರಮೆಗಳನ್ನು ಉಂಟು ಮಾಡುತ್ತದೆ. ಇದರಿಂದ ಕಿವಿ ಕೇಳದಿರುವುದು, ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿ ಸೇರಿದಂತೆ ಹಲವು ರೀತಿಯ ನರವೈಜ್ಞಾನಿಕ ಸಮಸ್ಯೆಗಳು ಬರುತ್ತವೆ.
