ನೇಪಾಳ ರೀತಿ ಲಡಾಖ್‌ನಲ್ಲಿ ಝೆನ್‌ಜೀ ಪ್ರೊಟೆಸ್ಟ್‌ಗೆ 4 ಸಾವು , ಸೇನಾ ವಾಹನ ಮೇಲೆ ದಾಳಿ, ಹಿಂಸಾಚಾರಕ್ಕೆ ಸೇನಾ ವಾಹನ, ಪೊಲೀಸ್ ವಾಹನಗಳು ಪುಡಿ ಪುಡಿಯಾಗಿದೆ. ನಾಲ್ವರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. 

ಲಡಾಖ್ (ಸೆ.24) ಲಡಾಖ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸೇನಾ ವಾಹನಗಳು, ಪೊಲೀಸ್ ವಾಹನಗಳ ಮೇಲೆ ದಾಳಿಯಾಗಿದೆ. ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಬಹುತೇಕ ರಸ್ತೆಯಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆದಿದೆ. ಸೇನೆಯ ಕಚೇರಿಗಳ ಮೇಲೂ ದಾಳಿಯಾಗಿದೆ. ನೇಪಾಳದ ರೀತಿಯಲ್ಲೇ ಲಡಾಖ್‌ನಲ್ಲಿ ಝೆನ್‌ಜಿ ಪ್ರತಿಭಟನೆ ಮಾಡಿ ಹಿಂಸಾಚಾರಕ್ಕೆ ಕಾರಣವಾಗಿದೆ. ಯುವ ಸಮೂಹದ ಪ್ರತಿಭಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರೆ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲ ಸೇನಾ ವಾಹನಗಳು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದೆ. ಈ ಪ್ರತಿಭಟನೆಗೆ ಮೂಲ ಪ್ರೇರಣೆಯಾಗಿದ್ದು, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ. ಲಡಾಖ್‌ಗೆ ರಾಜ್ಯಸ್ಥಾನ ಮಾನ ನೀಡಬೇಕು ಎಂದು ಸೋನಮ್ ನಡೆಸುತ್ತಿದ್ದ ಧರಣಿಯಿಂದ ಪ್ರೇರಣಿ ಪಡೆದ ಝೆನ್‌ಜಿ ಸಮೂಹ ಭಾರಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.

ಧರಣಿ ಅಂತ್ಯಗೊಳಿಸಿ, ಇದು ನಮ್ಮ ಮಾರ್ಗ ಅಲ್ಲ ಎಂದ ವಾಂಗ್ಚುಕ್

ಲಡಾಖ್ ರಾಜ್ಯಸ್ಥಾನಮಾನ ನೀಡುವಂತೆ ಕಳೆದ 35 ದಿನಗಳಿಂದ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ನಿನ್ನೆ ಸೋನಮ್ ವಾಂಗ್ಚುಕ್ ಆರೋಗ್ಯ ಕ್ಷೀಣಿಸಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಸೋನಮ್ ವಾಂಗ್ಚುಕ್ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಪಡೆದ ಯುವ ಸಮೂಹ ಭಾರಿ ಪ್ರತಿಭಟನೆ ಆರಂಭಿಸಿತ್ತು. ಇಡೀ ಲಡಾಖ್‌ನಲ್ಲಿ ಪ್ರತಿಭಟನೆ ವೇಗವಾಗಿ ಹರಿಡಿತ್ತು. ನೇಪಾಳದ ರೀತಿಯಲ್ಲೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸಿಕ್ಕ ಸಿಕ್ಕ ಕಡೆ ದಾಳಿ ಮಾಡಲಾಗಿದೆ. ಇದರ ಬೆನ್ನಲ್ಲೇ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ನಾವು ಶಾಂತಿಯುತ ಮಾರ್ಗದ ಮೂಲಕ ಪ್ರತಿಭಟನೆ ಮಾಡಬೇಕು. ಇದು ನಮ್ಮ ಮಾರ್ಗ ಅಲ್ಲ ಎಂದು ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

ಯುವ ಸಮೂಹದ ನಿರುದ್ಯೋಗ, ರಾಜ್ಯದಲ್ಲಿ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ. ಹೀಗಾಗಿ ಆಕ್ರೋಶಿತಗೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಯುವ ಸಮೂಹ ಹಿಂಸಾ ಮಾರ್ಗ ಬಿಟ್ಟು ಶಾಂತಿಯುತ ಪ್ರತಿಭಟನೆ ಮಾಡುವಂತೆ ಸೋನಮ್ ವಾಂಗ್ಚುಕ್ ಮನವಿ ಮಾಡಿದ್ದಾರೆ.

163 ಸೆಕ್ಷನ್ ಜಾರಿ

ಲಡಾಖ್‌ನಲ್ಲಿ 163 ಸೆಕ್ಷನ್ ಜಾರಿಯಾಗಿದೆ. ಐದು ಅಥವಾ ಅದಕ್ಕಿಂತ ಹಚ್ಚು ಮಂದಿ ಸೇರುವಂತಿಲ್ಲ. ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಹಲವು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಪಡೆಯಲು ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸರ್ಕಾರ ಅಸ್ಥಿರಗೊಳಿಸಲು ಭಾರತದಲ್ಲೂ ನಡೆಯುತ್ತಿದೆಯಾ ಪ್ರಯತ್ನ?

ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದ ರೀತಿಯಲ್ಲಿ ಭಾರತದಲ್ಲಿ ಸರ್ಕಾರ ಅಸ್ಥಿರಗೊಳಿಸಿ ಹೊಸ ಸರ್ಕಾರ, ಮಧ್ಯಂತರ ಸರ್ಕಾರ ರಚನೆಗೆ ಹಲವು ಪ್ರಯತ್ನಗಳು ನಡೆದಿದೆ. ಈ ಪೈಕಿ ಸಿಎಎ ಪ್ರತಿಭಟನೆ, ರೈತ ಪ್ರತಿಭಟನೆ ಸೇರಿದಂತೆ ಕೆಲ ಪ್ರಮುಖ ಪ್ರತಿಭಟನೆಗಳು ಸೇರಿದೆ. ಆದರೆ ಈ ಪ್ರತಿಭಟನೆಗಳು ಜನಾಂದೋಲನವಾಗಿ ಪರಿವರ್ತನೆಗೊಳ್ಳಲಿಲ್ಲ. ಇತ್ತ ಆಯಾ ರಾಜ್ಯದಲ್ಲಿ ಒಂದೊಂದು ವಿಚಾರಕ್ಕೆ ದಂಗೆ ಏಳುವಂತೆ, ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಕೆಲ ವಿಚಾರಗಳನ್ನು ಹಿಡಿದು ಪ್ರತಿಭಟನೆ ಮಾಡುವಂತೆ ಟೂಲ್ ಕಿಟ್ ಕೆಲ ವರ್ಷಗಳ ಹಿಂದೆ ರೆಡಿ ಆಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಲಡಾಖ್‌ನ ಶಾಂತಿಯುತ ಪ್ರತಿಭಟನೆ ದಿಢೀರ್ ಹೈಜಾಕ್ ಆಗುವ ಮೂಲಕ ದಾರಿ ತಪ್ಪಿತ್ತಾ ಅನ್ನೋ ಅನುಮಾನಗಳು ಕಾಡುತ್ತಿದೆ.