Kurnool bus fire accident: ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿ 20 ಜನರ ಬಲಿ ಪಡೆದ ಕರ್ನೂಲ್ ಎಸಿ ಬಸ್ ದುರಂತದಲ್ಲಿ ಮಡಿದವರದ್ದು ಒಬ್ಬೊಬ್ಬರದ್ದು ಒಂದೊಂದು ಕತೆಯಾಗಿದೆ. ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಅನೇಕರ ರೋಧನೆ ನೋಡುಗರ ಕಣ್ಣಂಚನ್ನು ತೇವಗೊಳಿಸಿದೆ.

ಕರ್ನೂಲ್ ಬಸ್ ದುರಂತಕ್ಕೆ ಬಲಿಯಾದವರ ಕುಟುಂಬದವರ ಗೋಳಾಟ

ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿ 20 ಜನರ ಬಲಿ ಪಡೆದ ಕರ್ನೂಲ್ ಎಸಿ ಬಸ್ ದುರಂತದಲ್ಲಿ ಮಡಿದವರದ್ದು ಒಬ್ಬೊಬ್ಬರದ್ದು ಒಂದೊಂದು ಕತೆಯಾಗಿದೆ. ಈ ದುರಂತದಲ್ಲಿ ಬೆಂಗಳೂರಿನ ಆಕ್ಸೆಂಚರ್‌ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ 23 ವರ್ಷದ ಯುವತಿ ಅನುಷಾ ಕೂಡ ಸಜೀವ ದಹನಗೊಂಡಿದ್ದರು. ಅವರ ತಂದೆ ಈಗ ತನ್ನ ಮಗಳಿಗೆ ಬೆಂಗಳೂರಿನಲ್ಲಿ ಕೆಲಸವೇ ಸಿಗಬಾರದಿತ್ತು ಆಕೆ ಬದುಕಿರುತ್ತಿದ್ದಳು ಎಂದು ರೋದಿಸಿದ್ದಾರೆ.

20 ಜನರ ಬಲಿ ಪಡೆದ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಬೆಂಕಿಗಾಹುತಿಯಾಗಿತ್ತು. ಈ ಘಟನಾ ಸ್ಥಳದಲ್ಲಿ ಈಗ ಶೋಕ ಮಡುಗಟ್ಟಿದೆ. ಅಪಘಾತ ಸ್ಥಳದ ಸುತ್ತಲಿನ ಗಾಳಿಯು ದಟ್ಟ ಹೊಗೆಯ ದುರ್ವಾಸನೆಯಿಂದ ಮಾತ್ರವಲ್ಲ, ಛಿದ್ರಗೊಂಡ ಕುಟುಂಬಗಳ ದುಃಖದಿಂದ ಕೂಡಿದೆ. ಈ ದುರಾದರಷ್ಟಕರ ಬೆಂಕಿ ಕೇವಲ ಬಸ್‌ನ್ನು ಮಾತ್ರ ಸುಟ್ಟಿಲ್ಲ, ಅನೇಕರ ಕನಸನ್ನು ಕೂಡ ಜೊತೆಗೆ ಸುಟ್ಟಿದೆ.

2 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಅನುಷಾ

ಅದರಲ್ಲಿ ಈ ಅನುಷಾಳ ಹೆತ್ತವರ ಕನಸು ಕೂಡ ಭಸ್ಮವಾಗಿದೆ. ಅನುಷಾ ಕಳೆದ ಆಗಸ್ಟ್ ಅಂದರೆ ಕೇವಲ 2 ತಿಂಗಳ ಹಿಂದಷ್ಟೇ ಬೆಂಗಳೂರಿನ ಆಕ್ಸೆಂಚರ್‌ಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಆಯ್ಕೆಯಾಗಿದ್ದಳು. ಮಗಳು ಕಾಲೇಜು ಓದುವಾಗಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಅವರಿಗೆ ಬಹಳ ಹೆಮ್ಮೆಯ ವಿಚಾರ ಆಗಿತ್ತು. ಆದರೆ ಈಗ ಆ ಹೆಮ್ಮೆಯ ಅವರನ್ನು ಕಾಡುತ್ತಿದೆ. ಅವರ ಹೆಮ್ಮೆಯ ಮೂಲವೇ ಬೆಂಕಿಗಾಹುತಿಯಾಗಿ ಭಸ್ಮವಾಗಿದೆ.

ಆಕೆಗೆ ಕೆಲಸ ಸಿಗದೇ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು: ಮಗಳ ಸಾವಿಗೆ ರೋಧಿಸಿದ ಅಪ್ಪ

ನನ್ನ ಮಗಳಿಗೆ ಬೆಂಗಳೂರಿನಲ್ಲಿ ಆ ಕೆಲಸ ಸಿಗದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನುಷಾಳ ತಂದೆ ವಿಷಾದದಿಂದ ರೋದಿಸಿದ್ದಾರೆ. ಅವರ ಪತ್ನಿ ತಮ್ಮ ಮಗಳೊಂದಿಗಿನ ಕೊನೆಯ ಕ್ಷಣಗಳನ್ನು ನೆನೆಸಿಕೊಂಡು ವಾಸ್ತವವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ರೋದಿಸಿದ್ದಾರೆ. ನಾವು ನನ್ನ ಮಗಳನ್ನು ಬಸ್ ನಿಲ್ದಾಣದಲ್ಲಿ ಬೀಳ್ಕೊಟ್ಟೆವು ಆಕೆಗೆ ಮಾಮೂಲಿಯಾಗಿ ಹೇಳಿದ ವಿದಾಯ ಈಗ ಜೀವಮಾನದ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ನಾನು ನನ್ನ ಮಗಳಿಗೆ ಇನ್ನೂ ಕೆಲ ದಿನ ಉಳಿಯುವಂತೆ ಹೇಳಿದೆ. ಆದರೆ ಆಕೆ ಕೆಲಸದ ಕಾರಣಕ್ಕೆ ನಿರಾಕರಿಸಿದಳು ಎಂದು ಆಕೆಯ ತಾಯಿ ರೋದಿಸಿದ್ದಾರೆ. ಆಕೆ ದೀಪಾವಳಿಗಾಗಿ ಮನೆಗೆ ಬಂದಿದ್ದಳು.

ಮಗನಿಲ್ಲದೇ ಹೇಗೆ ಬದುಕಲಿ: ತಾಯಿಯ ರೋಧನೆ

ಅನುಷಾಳ ಕುಟುಂಬದಂತೆ ಮಗನನ್ನು ಕಳೆದುಕೊಂಡು ರೋದಿಸುತ್ತಿದೆ ಮತ್ತೊಂದು ಕುಟುಂಬ. ಅದು ದುರಂತದಲ್ಲಿ ಪ್ರಾಣ ಕಳೆದುಕೊಂಡ ಯುವಕ ಮೇಘನಾಥ್‌ದು. ಮೇಘನಾಥ್ ಐದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದ. ಆತನ ತಾಯಿ ಕೂಡ ಘಟನಾ ಸ್ಥಳಕ್ಕೆ ಅಳುತ್ತಲೇ ಆಗಮಿಸಿ ಮಗ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ನಿರಾಕರಿಸಿದ್ದಾರೆ. ನನ್ನ ಮಗ ಹೀಗೆ ಹೋಗಲು ಸಾಧ್ಯವಿಲ್ಲ, ನನ್ನ ಮಗನಿಲ್ಲದೆ ನಾನು ಹೇಗೆ ಬದುಕಲಿ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಆ ಮಾರ್ಗದಲ್ಲಿ ಆಗಾಗ್ಗೆ ಪ್ರಯಾಣಿಸುತ್ತಿದ್ದ, ಈ ದುರಂತದಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಣಸಾಯಿ ಅವರು ಆ ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಕತ್ತಲೆಯಾಗಿತ್ತು ಮತ್ತು ಹೊಗೆಯಿಂದ ಕೂಡಿತ್ತು. ನಮ್ಮಲ್ಲಿ ಎಷ್ಟು ಮಂದಿ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದೇವೆಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ನಾನು ಕಿಟಕಿಯಿಂದ ಹಾರಿದೆ ಅಲ್ಲಿ ಯಾವುದೇ ತುರ್ತು ಸುರಕ್ಷತಾ ನಿಯಮಗಳಿರಲಿಲ್ಲ, ಕಿಟಕಿ ಒಡೆಯಲು ಹ್ಯಾಮರ್‌ಗಳಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಚಾಲಕ ಸಹಾಯ ಮಾಡಲಿಲ್ಲ, ನಾವು ಒಳಗಿನಿಂದ ಗಾಜನ್ನು ಒಡೆಯಲು ಪ್ರಯತ್ನಿಸಿದೆವು ಆದರೆ ಅಂತಿಮವಾಗಿ ಯಾರೋ ಹೊರಗಿನಿಂದ ಅದನ್ನು ಒಡೆದು ನಮಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿರಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಅನಾಹುತ: ಶಿಕಾರಿಪುರ ಮಾಜಿ ಶಾಸಕನ ತಿವಿದು ಕೆಳಕ್ಕೆ ಬೀಳಿಸಿದ ಹೋರಿ

ಇದನ್ನೂ ಓದಿ: 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾದ ಬಸ್‌ನಲ್ಲಿತ್ತು 46 ಲಕ್ಷ ಮೌಲ್ಯದ 234 ಹೊಸ ಸ್ಮಾರ್ಟ್‌ ಫೋನ್