Kurnool bus fire case:19 ಜನರ ಸಜೀವ ದಹನಕ್ಕೆ ಕಾರಣವಾದ ಬೆಂಕಿಗಾಹುತಿಯಾದ ಬಸ್‌ನಲ್ಲಿ 234 ಸ್ಮಾರ್ಟ್‌ಫೋನ್‌ಗಳಿದ್ದವು, ಇವುಗಳ ಸ್ಫೋಟ ಅನಾಹುತದ ತೀವ್ರತೆಯನ್ನು ಹೆಚ್ಚಿಸಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ.
ಬೆಂಕಿಗಾಹುತಿಯಾದ ಬಸ್‌ನಲ್ಲಿತ್ತು 234 ಹೊಸ ಸ್ಮಾರ್ಟ್‌ಫೋನ್
ಹೈದರಾಬಾದ್: 19 ಜನರ ಸಜೀವ ದಹನಕ್ಕೆ ಕಾರಣವಾದ, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಏಸಿ ಬಸ್ ದುರಂತದ ಬಗ್ಗೆ ತನಿಖೆ ಮುಂದುವರಿದಿದ್ದು, ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ವೇಳೆ ಈ ಬಸ್‌ನಲ್ಲಿ 40 ಲಕ್ಷ ಮೌಲ್ಯದ 234 ಹೊಸ ಸ್ಮಾರ್ಟ್‌ಫೋನ್‌ಗಳಿದ್ದವು. ಇವು ಅಪಘಾತದ ವೇಳೆ ಸ್ಫೋಟಗೊಂಡಿದ್ದವು. ಇವುಗಳನ್ನು ಬೆಂಗಳೂರಿನಲ್ಲಿರುವ ಗ್ರಾಹಕರಿಗೆ ಪಾರ್ಸೆಲ್ ಮೂಲಕ ಬಸ್‌ನಲ್ಲಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಶುಕ್ರವಾರ ನಸುಕಿನ ಜಾವ ಸಂಭವಿಸಿದ ಈ ದುರಂತದಲ್ಲಿ ಬಸ್ ಚಾಲಕ, ಸಿಬ್ಬಂದಿಯೂ ಸೇರಿ 43 ಜನರಿದ್ದರು. ಈ ಘಟನೆಯಲ್ಲಿ 19 ಜನ ಬಸ್‌ನಿಂದ ಹೊರಗೆ ಬರಲಾಗದೇ ಸಜೀವ ದಹನಗೊಂಡರೆ ಇತರರು ಕಿಟಕಿಯನ್ನು ಒಡೆದು ಪಾರಾಗುವಲ್ಲಿ ಯಶಸ್ವಿಯಾಗಿದ್ದರು. ಅವರಲ್ಲೂ ಅನೇಕರಿಗೆ ಗಂಭೀರ ಗಾಯಗಳಾಗಿವೆ.
ಇ-ಕಾಮರ್ಸ್ ಕಂಪನಿಗೆ ಕಳುಹಿಸಲಾಗಿದ್ದ 46 ಲಕ್ಷ ರೂ. ಮೌಲ್ಯದ ಹೊಸ ಸ್ಮಾರ್ಟ್‌ಫೋನ್
ಈ ಘಟನೆಯ ತನಿಖೆ ನಡೆಸುತ್ತಿರುವ ವಿಧಿವಿಜ್ಞಾನ ತಜ್ಞರು ಈ ಹೊಸ ಫೋನ್‌ಗಳ ಬ್ಯಾಟರಿಗಳು ಸ್ಫೋಟಗೊಂಡಿದ್ದರಿಂದಲೇ ಬಸ್‌ಗೆ ಹೊತ್ತಿ ಉರಿದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಿದ್ದು, 19 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದ್ದಾರೆ. 234 ಸ್ಮಾರ್ಟ್‌ಫೋನ್‌ಗಳು 46 ಲಕ್ಷ ರೂ. ಮೌಲ್ಯದ್ದಾಗಿದ್ದವು. ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಅವರು ಅವುಗಳನ್ನು ಬೆಂಗಳೂರಿಗೆ ಪಾರ್ಸೆಲ್ ಆಗಿ ರವಾನಿಸಿದ್ದರು. ಇವುಗಳನ್ನು ಬೆಂಗಳೂರಿನ ಇ-ಕಾಮರ್ಸ್ ಕಂಪನಿಗೆ ಕಳುಹಿಸಲಾಗಿತ್ತು ಅಲ್ಲಿಂದ ಗ್ರಾಹಕರಿಗೆ ಫೋನ್‌ಗಳನ್ನು ಪೂರೈಸಬೇಕಿತ್ತು. ಫೋನ್‌ಗೆ ಬೆಂಕಿ ಹೊತ್ತಿಕೊಂಡಾಗ ಬ್ಯಾಟರಿಗಳು ಸ್ಫೋಟಗೊಳ್ಳುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹವಾನಿಯಂತ್ರಣ ವ್ಯವಸ್ಥೆಗೆ ಇರಿಸಿದ್ದ ವಿದ್ಯುತ್ ಬ್ಯಾಟರಿಯೂ ಸ್ಫೋಟ
ಆಂಧ್ರಪ್ರದೇಶ ಅಗ್ನಿಶಾಮಕ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಪಿ ವೆಂಕಟರಾಮನ್ ಈ ಬಗ್ಗೆ ಮಾತನಾಡಿದ್ದು, ಸ್ಮಾರ್ಟ್‌ಫೋನ್‌ಗಳ ಸ್ಫೋಟದ ಜೊತೆಗೆ, ಬಸ್‌ನ ಹವಾನಿಯಂತ್ರಣ ವ್ಯವಸ್ಥೆಗೆ ಬಳಸಲಾದ ವಿದ್ಯುತ್ ಬ್ಯಾಟರಿಗಳು ಸಹ ಸ್ಫೋಟಗೊಂಡಿವೆ ಎಂದು ಹೇಳಿದ್ದಾರೆ. ಬೆಂಕಿಯ ದಾಹ ಎಷ್ಟು ತೀವ್ರವಾಗಿತ್ತೆಂದರೆ ಬಸ್‌ನ ನೆಲಹಾಸಿಗೆ ಹಾಕಲಾದ ಅಲ್ಯೂಮಿನಿಯಂ ಶೀಟುಗಳು ಕರಗಿಹೋದವು ಎಂದು ವೆಂಕಟರಾಮನ್ ಹೇಳಿದರು.
ಇಂಧನ ಸೋರಿಕೆಯಿಂದಾಗಿ ಬಸ್‌ನ ಮುಂದಿನ ಭಾಗದಲ್ಲಿ ಆರಂಭಿಕ ಬೆಂಕಿ ಕಾಣಿಸಿಕೊಂಡಿತ್ತು. ಇದರ ಜೊತೆಗೆ. ಬಸ್ಸಿನ ಕೆಳಗೆ ಬೈಕೊಂದು ಸಿಲುಕಿಕೊಂಡ ಪರಿಣಾಮ ಪೆಟ್ರೋಲ್ ಚಿಮ್ಮಲು ಶುರುವಾಗಿ ಕಿಡಿಯೊಂದಿಗೆ ಸೇರಿ, ಬೆಂಕಿಯನ್ನು ಹೊತ್ತಿಸಿತು ಅದು ಬೇಗನೆ ಇಡೀ ವಾಹನವನ್ನು ಸುಟ್ಟುಹಾಕಿತು ಎಂದು ಅವರು ಹೇಳಿದ್ದಾರೆ.
ಕರಗಿನ ಅಲೂಮಿನಿಯಂ ನೆಲಹಾಸು, ಕೆಳಗೆ ಬೀಳುತ್ತಿತ್ತು, ಬೂದಿಯ ಜೊತೆ ಮೂಳೆ
ಕರಗಿದ ಅಲೂಮಿನಿಯಂ ಸೀಟಿನ ಮೂಲಕ ಮೂಳೆಗಳು ಮತ್ತು ಬೂದಿ ಬೀಳುತ್ತಿರುವುದನ್ನು ನಾವು ನೋಡಿದೆವು ಇದು ಜೀವಹಾನಿಯ ಭೀಕರತೆಯನ್ನು ಸೂಚಿಸುತ್ತದೆ ಎಂದು ವೆಂಕಟರಮಣ ಅವರು ಆ ಬೆಂಕಿ ಅನಾಹುತದ ಕರಾಳತೆಯನ್ನು ವಿವರಿಸಿದ್ದಾರೆ. ಹಾಗೆಯೇ ಬಸ್ಸಿನ ನಿರ್ಮಾಣದಲ್ಲಿನ ರಚನಾತ್ಮಕ ದೋಷದ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ. ವಾಹನದ ತೂಕವನ್ನು ಕಡಿಮೆ ಮಾಡಲು ಮತ್ತು ವೇಗವನ್ನು ಹೆಚ್ಚಿಸಲು ಸಾಮಾನ್ಯವಾಗಿ ಕಬ್ಬಿಣದ ಬದಲು ಬಳಸುವ ಹಗುರವಾದ ಅಲ್ಯೂಮಿನಿಯಂ ಬಳಕೆಯು ತುರ್ತು ಸಮಯದಲ್ಲಿ ಯಾವ ರೀತಿ ಮಾರಕವಾಗಬಹುದು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಇದು ಅನಾಹುತದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.
ಘಟನೆ ನಡೆದಿದ್ದು ಹೇಗೆ?
43 ಜನರನ್ನು ಹೊತ್ತಿದ್ದ ದಿಯು-ದಮನ್ ನೋಂದಾಯಿತ ವೆಮೂರಿ ಕಾವೇರಿ ಟ್ರಾವೆಲ್ಸ್ ಸ್ಲೀಪರ್ ಬಸ್ ಗುರುವಾರ ಬೆಳಗಿನ ಜಾವ 2:30ರ ಸುಮಾರಿಗೆ ಕರ್ನೂಲ್ ಬಳಿ ಸಾಗಿಬರುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ 400 ಮೀ. ದೂರದವರೆಗೂ ಬೈಕ್ ಅನ್ನು ಬಸ್ ತಳ್ಳಿಕೊಂಡು ಹೋಗಿದೆ. ಈ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಿಂದ ಇಂಧನ ಸೋರಿಕೆಯಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ವೈರ್ ತುಂಡಾಗಿ ಶಾರ್ಟ್ ಸರ್ಕೀಟ್ ಉಂಟಾದ ಕಾರಣ ಬಸ್‌ನ ಬಾಗಿಲು ಲಾಕ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಧಗಧಗಿಸಿದ ಬೆಂಕಿಯಿಂದ ಎಚ್ಚರಗೊಂಡ ಪ್ರಯಾಣಿಕರು ಬಾಗಿಲು ತೆರೆಯಲು ಪ್ರಯತ್ನಿಸಿದರೂ ತೆರೆಯದ ಕಾರಣ ತುರ್ತುನಿರ್ಗಮನ ದ್ವಾರ ಮತ್ತು ಕಿಟಕಿ ಗಾಜುಗಳನ್ನು ಒಡೆದು ಹೊರಜಿಗಿದಿದ್ದಾರೆ. 19 ಪ್ರಯಾಣಿಕರು ಮಾತ್ರ ಹೊರಬರಲಾರದೆ ಬಸ್‌ನಲ್ಲಿಯೇ ಕರಕಲಾಗಿ ದಾರುಣ ಅಂತ್ಯ ಕಂಡಿದ್ದಾರೆ. ಬೈಕರ್ ಕೂಡ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಗಡಿ ಬಂದ್ ಮಾಡಿದ ಅಫ್ಘಾನಿಸ್ತಾನ: ಪಾಕಿಸ್ತಾನದಲ್ಲಿ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಟೊಮೆಟೋಗೆ ಕೇಜಿಗೆ 600
ಇದನ್ನೂ ಓದಿ: ಮರ ಬೀಳಿಸಿ ರೋಡ್ ಬ್ಲಾಕ್ ಮಾಡಿದ ಕಬಾಲಿ: ಕಾಡಾನೆ ದರ್ಬಾರ್‌ಗೆ 18 ಗಂಟೆ ಹೆದ್ದಾರಿ ಬಂದ್
