ಪಶ್ಚಿಮ ಬಂಗಾಳದಲ್ಲಿ ಸುರಿದ 37 ವರ್ಷಗಳ ದಾಖಲೆಯ ಮಳೆಯಿಂದಾಗಿ ಕೋಲ್ಕತ್ತಾ ಸಂಪೂರ್ಣ ಜಲಾವೃತವಾಗಿದೆ. ಈ ದುರಂತದಲ್ಲಿ ವಿದ್ಯುತ್ ಆಘಾತದಿಂದ ಕನಿಷ್ಠ 8 ಮಂದಿ ಮೃತಪಟ್ಟಿದ್ದು, ದುರ್ಗಾ ಪೂಜೆಯ ಸಂಭ್ರಮಕ್ಕೆ ಅಡ್ಡಿಯಾಗಿದೆ. ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವರುಣನ ಆರ್ಭಟ ನವರಾತ್ರಿ ಸಂಭ್ರಮವನ್ನು ಕಸಿದಿದೆ. ಹೇಳಿ ಕೇಳಿ ಬೆಂಗಾಳಿಗಳಿಗೆ ನವರಾತ್ರಿ ಹಬ್ಬವೆಂದರೆ ಅದರ ಆಚರಣೆಗಳೇ ಬೇರೆ ಹಂತದಲ್ಲಿರುತ್ತದೆ. ಆದರೆ ಹಬ್ಬದ ವಾತಾವರಣ ದುಃಖಕ್ಕೆ ದೂಡಿದೆ. ಪಶ್ಚಿಮ ಬಂಗಾಳದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ಸುರಿದ ಭಾರೀ ಮಳೆಯಿಂದ ರಾಜಧಾನಿ ಕೋಲ್ಕತ್ತಾ ಸಂಪೂರ್ಣ ಸ್ಥಬ್ದಗೊಂಡಿದೆ. ನಗರದಲ್ಲಿ 11:30 ರಿಂದ ಬೆಳಗಿನ 5:30ರವರೆಗೆ ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಕನಿಷ್ಠ 8 ಮಂದಿ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ಈವರೆಗಿನ ವರದಿ ತಿಳಿಸಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ. ಕಳೆದ 37 ವರ್ಷಗಳಲ್ಲಿ ಸುರಿದ ದಾಖಲೆಯ ಮಳೆ ಇದಾಗಿದೆ.
ನಗರದ ರಸ್ತೆ, ಮನೆ, ವಸತಿ ಸಂಕೀರ್ಣ, ಅಂಗಡಿ ಮತ್ತು ವಾಹನಗಳೆಲ್ಲವೂ ನೀರಿನಲ್ಲಿ ಮುಳುಗಿದ್ದು, ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಪಾರ್ಕ್ ಸರ್ಕಸ್, ಗರಿಯಾಹತ್, ಬೆಹಾಲಾ ಮತ್ತು ಕಾಲೇಜು ಸ್ಟ್ರೀಟ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮೊಣಕಾಲು–ಸೊಂಟದ ಆಳದವರೆಗೂ ನೀರು ನಿಂತು, ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿತ್ತು.
ಇಂತಹ ಮಳೆಯನ್ನು ಎಂದೂ ನೋಡಿಲ್ಲ: ಮಮತಾ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಮಳೆಯನ್ನು ಎಂದು ನೋಡೆ ಇಲ್ಲ ಎಂದು ತೆರೆದ ತಂತಿಗಳಿಂದ 7-8 ಮಂದಿ ಸಾವನ್ನಪ್ಪಿರುವುದು ಅತ್ಯಂತ ದುಃಖಕರ. ಮೃತರ ಕುಟುಂಬಗಳಿಗೆ ನಾವು ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ. ಸಿಇಎಸ್‌ಸಿ (CESC) ಕಂಪನಿಯ ನಿರ್ಲಕ್ಷ್ಯ ಕಾರಣವಾಗಿದೆ ಅವರು ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ಹೇಳಿದ್ದಾರೆ. ಜನರನ್ನು ಮನೆ ಹೊರಗೆ ಹೋಗದಂತೆ ಮನವಿ ಮಾಡಿದ್ದು ಜನಜೀವನವನ್ನು ಸುರಕ್ಷಿತವಾಗಿಡುವುದು ಈಗ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.
3 ಗಂಟೆಯಲ್ಲಿ 185 ಮಿಮೀ ಮಳೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕೋಲ್ಕತ್ತಾದಲ್ಲಿ ಕೇವಲ ಮೂರು ಗಂಟೆಗಳಲ್ಲೇ 185 ಮಿ.ಮೀ ಮಳೆ ದಾಖಲಾಗಿದೆ.
- ಗರಿಯಾ ಕಾಮದಹರಿಯಲ್ಲಿ 332 ಮಿ.ಮೀ
- ಜೋಧ್‌ಪುರ ಪಾರ್ಕ್‌ನಲ್ಲಿ 285 ಮಿ.ಮೀ
- ಕಾಲಿಘಾಟ್‌ನಲ್ಲಿ 280 ಮಿ.ಮೀ ಮಳೆಯಾಗಿದೆ.
ಐಎಂಡಿ ಅಧಿಕಾರಿಗಳ ಪ್ರಕಾರ, ಇಂತಹ ಮಳೆ 37 ವರ್ಷಗಳಲ್ಲಿ ಕಂಡೇ ಇಲ್ಲ. 1988ರ ನಂತರ ಇದು ದಾಖಲಾದ ಅತ್ಯಂತ ಹೆಚ್ಚಿನ ಮಳೆಯಾಗಿದೆ.
ಸಾರ್ವಜನಿಕ ಜೀವನ ಅಸ್ತವ್ಯಸ್ತ
ಮಳೆಯ ಪರಿಣಾಮವಾಗಿ ಮೆಟ್ರೋ, ಬಸ್ ಮತ್ತು ರೈಲು ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿದೆ. ಹಳಿಗಳಲ್ಲಿ ನೀರು ನಿಂತ ಕಾರಣ, ಹೌರಾ ಮತ್ತು ಕೋಲ್ಕತ್ತಾ ಟರ್ಮಿನಲ್ ರೈಲು ಸೇವೆಗಳು ಭಾಗಶಃ ಸ್ಥಗಿತಗೊಂಡಿವೆ. ಇಎಂ ಬೈಪಾಸ್, ಎಜೆಸಿ ಬೋಸ್ ರಸ್ತೆ, ಸೆಂಟ್ರಲ್ ಅವೆನ್ಯೂ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಉದ್ದವಾದ ಟ್ರಾಫಿಕ್ ಜಾಮ್ ಉಂಟಾಗಿದೆ. ಹಲವಾರು ಸಣ್ಣ ಲೇನ್‌ಗಳಲ್ಲಿ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ನಗರದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನತೆ ಸಂಕಷ್ಟದಲ್ಲಿದ್ದಾರೆ.
ಅಧಿಕಾರಿಗಳ ತುರ್ತು ಕ್ರಮ
ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಆಘಾತದಿಂದ ಎಂಟು ಮಂದಿ ಮೃತಪಟ್ಟಿದ್ದಾರೆ. ಕೆಎಂಸಿ ಸಿಬ್ಬಂದಿಗಳು 24/7 ಕೆಲಸ ಮಾಡುತ್ತಿದ್ದಾರೆ. ಆದರೆ ಕಾಲುವೆಗಳು ಮತ್ತು ನದಿಗಳು ನೀರಿನಿಂದ ತುಂಬಿ ಹರಿಯುತ್ತಿರುವುದರಿಂದ ನೀರು ಹೊರಹಾಕಲು ಅಡಚಣೆ ಎದುರಾಗುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ಆತಂಕವಿದೆ ಎಂದು ಕೋಲ್ಕತ್ತಾ ಮೇಯರ್ ಮತ್ತು ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ದುರ್ಗಾ ಪೂಜೆ ಮೇಲೆ ನೆರಳು
ದುರ್ಗಾ ಪೂಜೆಯ ಸಂಭ್ರಮದಲ್ಲಿದ್ದ ಕೋಲ್ಕತ್ತಾ ಜನತೆಗೆ ಈ ಭಾರೀ ಮಳೆ ದೊಡ್ಡ ಆಘಾತವನ್ನುಂಟು ಮಾಡಿದೆ. ಪೆಂಡಾಲ್‌ಗಳು ನೀರಿನಲ್ಲಿ ಮುಳುಗಿದ್ದು, ಅನೇಕ ಕಾರ್ಯಕ್ರಮಗಳು ರದ್ದಾಗಿವೆ. ಸರ್ಕಾರ ಈಗಾಗಲೇ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಿದೆ ಮತ್ತು ಮುಂದಿನ ಎರಡು ದಿನಗಳವರೆಗೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸಲಹೆ ನೀಡಿದೆ.
