ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಪದೇ ಪದೇ ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ, (ಆ.7): ನಿನ್ನೆ ಸುಪ್ರೀಂ ಕೋರ್ಟ್ ಬಗ್ಗೆ ಮಾತನಾಡಿದ್ದರು. ಇಂದು ಚುನಾವಣೆ ಆಯೋಗದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಇವರು ಯಾರನ್ನು ನಂಬುತ್ತಾರೆ ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರವಾಗಿ ಟೀಕಿಸಿದರು.

ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಪದೇ ಪದೇ ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ರಾಹುಲ್ ಗಾಂಧಿ ಒಂದು ದಿನ ಮೊದಲು ಸುಪ್ರೀಂ ಕೋರ್ಟ್ ಬಗ್ಗೆ ಪ್ರಶ್ನೆ ಎತ್ತಿದ್ದರು. ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ನಂಬಿಕೆ ಇಡದಿದ್ದರೆ, ಯಾರನ್ನು ನಂಬುತ್ತದೆ? ಎಂದು ಸಚಿವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅಸಂಬಂದ್ಧ ಹೇಳಿಕೆಯಿಂದ ಸಮಯ ವ್ಯರ್ಥ:

ರಾಹುಲ್ ಗಾಂಧಿಯವರನ್ನು 'ಸರ್ಕಾರೇತರ ಸಂಸ್ಥೆಯೊಂದು' ಹಿಂದಿನಿಂದ ತಳ್ಳುತ್ತಿದೆ ಎಂದು ಆರೋಪಿಸಿದ ಸಚಿವರು, ಅವರು(ರಾಹುಲ್ ಗಾಂಧಿ) ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೇ ತಿಳಿದಿಲ್ಲ. ಕಾಂಗ್ರೆಸ್‌ನ ಕೆಲವರು ಅಸಂಬದ್ಧ ಹೇಳಿಕೆಗಳಿಂದ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಗೆದ್ದಾಗ ಚುನಾವಣಾ ಆಯೋಗ ಸರಿಯಿತ್ತೇ?

ರಾಹುಲ್ ಗಾಂಧಿಯವರ ಚುನಾವಣಾ ಆಯೋಗದ ವಿರುದ್ಧದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ನಕಲಿ ಆರೋಪಗಳು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಲವು ಬಾರಿ ನಡೆದಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ ಅದೇ ಮತದಾರರ ಪಟ್ಟಿಯನ್ನು ಹೊಗಳಿದ್ದರು, ಆದರೆ ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ಅದು ಸಮಸ್ಯೆಯಾಯಿತಾ? ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿಗೆ ಕಿರಣ್ ರಿಜಿಜು ತಾಕೀತು:

ರಾಹುಲ್ ಗಾಂಧಿ ಮತ್ತು ಅವರ ತಂಡವು ಭಾರತದ ಚುನಾವಣಾ ಆಯೋಗದ ಪ್ರತಿಷ್ಠೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸಂಸತ್ತನ್ನು ಕಾರ್ಯನಿರ್ವಹಿಸಲು ಬಿಡಬೇಕು, ಗಮನವನ್ನು ಬೇರೆಡೆಗೆ ತಿರುಗಿಸಬಾರದು ಎಂದು ರಿಜಿಜು ತಾಕೀತು ಮಾಡಿದರು. ಈ ಆರೋಪ-ಪ್ರತ್ಯಾರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.