ಕಾಂಗ್ರೆಸ್ ಪಕ್ಷದ 'ಮತಗಳವು' ಅಭಿಯಾನದಲ್ಲಿ ತಮ್ಮ ವೀಡಿಯೊವನ್ನು ಒಪ್ಪಿಗೆಯಿಲ್ಲದೆ ಬಳಸಿಕೊಂಡಿರುವುದಕ್ಕೆ ನಟ ಕೆ.ಕೆ. ಮೆನನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಸ್ಪೆಷಲ್ ಆಪ್ಸ್' ವೆಬ್ ಸರಣಿಯ ತಮ್ಮ ಪಾತ್ರದ ವೀಡಿಯೊವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಆ.12): ಕಾಂಗ್ರೆಸ್ ಪಕ್ಷದ 'ಮತಗಳವು' ಅಭಿಯಾನದಲ್ಲಿ ನಾನು ಭಾಗಿಯಾಗಿಲ್ಲ ಎಂದು ನಟ ಕೇ ಕೇ ಮೆನನ್ ಸ್ಪಷ್ಟಪಡಿಸಿದ್ದಾರೆ. ತಮ್ಮ ವೀಡಿಯೊವನ್ನು ಒಪ್ಪಿಗೆಯಿಲ್ಲದೆ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ವಂಚನೆಯ ವಿರುದ್ಧ ನಟ ತಮ್ಮ ಅಭಿಯಾನವನ್ನು ಅನುಮೋದಿಸುತ್ತಿರುವುದನ್ನು ತೋರಿಸುವ ಕ್ಲಿಪ್ ಅನ್ನು ಕಾಂಗ್ರೆಸ್ ಪಕ್ಷ ತನ್ನ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲಿಯೇ ಈ ವಿವಾದ ಹುಟ್ಟುಕೊಂಡಿತ್ತು.
ವೀಡಿಯೊಗೆ ಪ್ರತಿಕ್ರಿಯೆಯಾಗಿ, ನಟ ಕಾಮೆಂಟ್ ವಿಭಾಗದಲ್ಲಿ ಪೋಸ್ಟ್ ಮಾಡಿದ್ದು, "ದಯವಿಟ್ಟು ನಾನು ಈ ಜಾಹೀರಾತಿನಲ್ಲಿ ನಟಿಸಿಲ್ಲ ಎಂಬುದನ್ನು ಗಮನಿಸಿ. ನನ್ನ ಸ್ಪೆಷಲ್ ಆಪರೇಷನ್ ವೆಬ್ ಸಿರೀಸ್‌ನ ಪ್ರಚಾರದ ಕ್ಲಿಪ್ ಅನ್ನು ಅನುಮತಿಯಿಲ್ಲದೆ ಇಲ್ಲಿ ಬಳಸಲಾಗಿದೆ (sic)." ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವು ಪೋಸ್ಟ್ ಮಾಡಿದ ಕ್ಲಿಪ್‌ನಲ್ಲಿ, 'ಸ್ಪೆಷಲ್ ಆಪರೇಷನ್' ವೆಬ್ ಸರಣಿಯ ಗುಪ್ತಚರ ಅಧಿಕಾರಿ ಮೆನನ್ ಪಾತ್ರ ಹಿಮ್ಮತ್ ಸಿಂಗ್, ವೀಕ್ಷಕರನ್ನು ಅಭಿಯಾನಕ್ಕೆ ಸೇರಲು ಒತ್ತಾಯಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಆ ವೀಡಿಯೊವನ್ನು ಕಾರ್ಯಕ್ರಮವೊಂದರ ಪ್ರಮೋಷನ್ ಕಂಟೆಂಟ್‌ನಿಂದ ತೆಗೆದುಕೊಳ್ಳಲಾಗಿದೆ ಮತ್ತು ಯಾವುದೇ ರಾಜಕೀಯ ಉದ್ದೇಶವನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ನಟ ಸ್ಪಷ್ಟಪಡಿಸಿದರು.
"ಹಿಮ್ಮತ್ ಸಿಂಗ್ ಕುಚ್ ಕೆಹ್ ರಹೇ ಹೈಂ, ಜಲ್ದಿ ಸೆ ಕರ್ ಆವೋ! ಬಂದ್ ಕರೋ (ಹಿಮ್ಮತ್ ಸಿಂಗ್ ಏನೋ ಹೇಳುತ್ತಿದ್ದಾರೆ, ಬೇಗ ಹೋಗಿ ಇದನ್ನು ಮಾಡಿ! ಅದನ್ನು ನಿಲ್ಲಿಸಿ)" ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ಈ ನಡುವೆ, ರಾಹುಲ್ ಗಾಂಧಿಯವರ ಪದೇ ಪದೇ ಚುನಾವಣಾ ಅಕ್ರಮಗಳ ಆರೋಪಗಳನ್ನು ಆಧರಿಸಿ, ಮತದಾರರ ಪಟ್ಟಿಯ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ತನ್ನ ಪ್ರಚಾರವನ್ನು ತೀವ್ರಗೊಳಿಸಿದೆ. ಸಾರ್ವಜನಿಕ ಬೆಂಬಲವನ್ನು ಕ್ರೋಢೀಕರಿಸಲು, ಪಕ್ಷವು ವೆಬ್‌ಪೇಜ್ ಕೂಡ ಪ್ರಾರಂಭಿಸಿದೆ, ಅಲ್ಲಿ ನಾಗರಿಕರು ಭಾರತೀಯ ಚುನಾವಣಾ ಆಯೋಗವನ್ನು (ECI) ಹೊಣೆಗಾರರನ್ನಾಗಿ ಮಾಡಲು ಮತ್ತು ಡಿಜಿಟಲ್ ಮತದಾರರ ಪಟ್ಟಿಗಳ ಬೇಡಿಕೆಯನ್ನು ಬೆಂಬಲಿಸಲು ಸೈನ್ ಅಪ್ ಮಾಡಬಹುದಾಗಿದೆ.
