ಭಾರತ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ಗ್ರಾಮ ತೀತ್ವಾಲ್ ನಲ್ಲಿ ಭಾನುವಾರ ಗಣಪತಿ ವಿಗ್ರಹ ಸಾರ್ವಜನಿಕ ಮೆರವಣಿಗೆ ವಿಜೃಂಭಣೆಯಿಂದ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಯಿತು.
ಭಾರತ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ಗ್ರಾಮ ತೀತ್ವಾಲ್ ನಲ್ಲಿ ಭಾನುವಾರ ಗಣಪತಿ ವಿಗ್ರಹ ಸಾರ್ವಜನಿಕ ಮೆರವಣಿಗೆ ವಿಜೃಂಭಣೆಯಿಂದ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಯಿತು. ಗಣೇಶನ ಮಣ್ಣಿನ ಮೂರ್ತಿಯನ್ನು ಬೆಂಗಳೂರಿನ ಶೃಂಗೇರಿ ಶಂಕರಮಠ ದಿಂದ ಒಯ್ದು ಅಲ್ಲಿ ಪ್ರತಿಷ್ಠಾಪಿಸಿದ್ದರು.
ಮುಂಜಾನೆ ಕುಪ್ವಾರಾ ಜಿಲ್ಲಾಧಿಕಾರಿ ಶ್ರೀಕಾಂತ್ ಬಾಳಾ ಸಾಹೇಬ್ ಸೂಸೆ ಮತ್ತು ಭಾರತೀಯ ಸೇನೆಯ ಅನೇಕ ಅಧಿಕಾರಿಗಳ ನಡುವೆ ಜರುಗಿದ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪಂಡಿತರ ವೇದ ಘೋಷಣೆಗಳ ನಡುವೆ ಪೂಜೆ ಆರತಿ ನಂತರ ಜಿಲ್ಲಾಧಿಕಾರಿಗಳು ಖುದ್ದು ಗಣೇಶ ಮೂರ್ತಿಯನ್ನು ಹೊತ್ತು ಗ್ರಾಮದ ಮುಖ್ಯ ರಸ್ತೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೂಡಾ ಮೆರವಣಿಗೆಯಲ್ಲಿ ಸಾಗಿದರು.
ಇದಕ್ಕೂ ಮುನ್ನ ಗ್ರಾಮದ ನಡುವೆ ಶೃಂಗೇರಿ ಮಠದ ವತಿಯಿಂದ ನಿರ್ಮಿಸಲಾದ ಶಿಲಾಮಯ ಶಾರದಾ ಮಂದಿರದಲ್ಲಿ ಆಪರೇಶನ್ ಸಿಂಧೂರ ಹಿನ್ನೆಲೆಯಲ್ಲಿ ತಯಾರಿಸಿದ ಮಣ್ಣಿನ ಗಣಪತಿಯನ್ನು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿತ್ತು.
ಕಾಶ್ಮೀರಿ ಪಂಡಿತ ಸಮುದಾಯದ ಅನೇಕರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೆರವಣಿಗೆಯು ಊರಿನ ಬೀದಿಗಳಲ್ಲಿ ನಡೆದು ಸಾಗಿದ ಮೆರವಣಿಗೆ ಭಾರತ ಪಾಕಿಸ್ತಾನದ ನಡುವೆ ಸಂಪರ್ಕಕ್ಕೆ ಇರುವ ಕ್ರಾಸಿಂಗ್ ಬ್ರಿಡ್ಜ್ ಮೇಲೆ ತೆರಳಿ ಶಾಂತಿ ಮಂತ್ರ ಪಠಣದ ನಂತರ ಜೈ ಹಿಂದ್ ಭಾರತ ಮಾತಾ ಜೈ, ಗಣಪತಿ ಬಪ್ಪ ಮೋರಿಯ, ಜೈ ಗಣೇಶ ಘೋಷಣೆಗಳ ನಡುವೆ ಕಿಶನ್ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದರು.
