ವಿದೇಶಿ ಮದ್ಯ ಮತ್ತು ಬಿಯರ್‌ಗೆ ತೆಲಂಗಾಣದ ಗ್ರಾಮೀಣರು ವಾರ್ಷಿಕವಾಗಿ ತಲಾ 3,061 ರೂ. ಖರ್ಚು ಮಾಡುತ್ತಾರೆ. ನಗರ ಪ್ರದೇಶದಲ್ಲಿ ಸಿಕ್ಕಿಂ 4232 ರೂ. ಖರ್ಚು ಮಾಡಿ ಮುಂದಿದೆ. ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ.

ನವದೆಹಲಿ (ಆ.20): ವಿದೇಶಿ ಮದ್ಯ ಮತ್ತು ಬಿಯರ್‌ಗಾಗಿ ವಾರ್ಷಿಕವಾಗಿ ಸರಾಸರಿ ತಲಾ 3,061 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ತೆಲಂಗಾಣದ ಗ್ರಾಮೀಣ ಪ್ರದೇಶದ ಜನರು ಅತಿ ಹೆಚ್ಚು ವೆಚ್ಚದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ನಗರ ವಿಭಾಗದಲ್ಲಿ, 4232 ರೂಪಾಯಿ ಖರ್ಚು ಮಾಡುವ ಮೂಲಕ ಸಿಕ್ಕಿಂ ಮೊದಲ ಸ್ಥಾನ ಪಡೆದಿದೆ ಎಂದು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ವರದಿ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರದಿಯಲ್ಲಿ ಭಾರತದ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ದೇಶಿ ಮದ್ಯ, ವಿದೇಶಿ ಮದ್ಯ, ಬೀಡಿ, ಗುಟ್ಕಾ, ತಂಬಾಕಿನ ಎಲೆ ಹಾಗೂ ಸಿಗರೇಟ್ ಸೇವನೆಯ ತಲಾ ಖರ್ಚನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ.

ಗ್ರಾಮೀಣ ವಿಭಾಗದಲ್ಲಿ, ಬೀಡಿಗೆ ವಾರ್ಷಿಕ ಸರಾಸರಿ ತಲಾ 438 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಸಿಗರೇಟ್ ಸೇವನೆ ಯಲ್ಲಿ 1313 ರೂಪಾಯಿ ಖರ್ಚು ಮಾಡುವ ಮಿಜೋರಾಂ, ಗುಟ್ಕಾ ಮತ್ತು ತಂಬಾಕಿನ ಎಲೆ ಸೇವನೆಯಲ್ಲಿ 792 ರೂಪಾಯಿ ಖರ್ಚು ಮಾಡುವ ಮಧ್ಯ ಪ್ರದೇಶ, ದೇಶಿ ಮದ್ಯ ಸೇವನೆಯಲ್ಲಿ 1053 ರೂಪಾಯಿ ಖರ್ಚಿನಮೂಲಕ ಛತ್ತೀಸಗಢ ಹಾಗೂ ವಿದೇಶಿ ಮದ್ಯ ಸೇವನೆಯಲ್ಲಿ 3061 ರೂಪಾಯಿ ಖರ್ಚು ಮಾಡುವ ತೆಲಂಗಾಣ ಮೊದಲ ಸ್ಥಾನ ಪಡೆದಿವೆ.

ನಗರ ವಿಭಾಗದಲ್ಲಿ ಬೀಡಿಗೆ ವಾರ್ಷಿಕ ಸರಾಸರಿ ತಲಾ 277 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಹರ್ಯಾಣ ಮೊದಲ ಸ್ಥಾನದಲ್ಲಿದೆ. ಸಿಗರೇಟ್ ಸೇವನೆಯಲ್ಲಿ 1719 ರೂಪಾಯಿ ಖರ್ಚು ಮಾಡುವ ಸಿಕ್ಕಿಂ, ಗುಟ್ಕಾ ಮತ್ತು ತಂಬಾಕಿನ ಎಲೆ ಸೇವೆನೆಯಲ್ಲಿ 735 ರೂಪಾಯಿ ಖರ್ಚು ಮಾಡುವ ಮಧ್ಯ ಪ್ರದೇಶ, ದೇಶಿ ಮದ್ಯ ಸೇವನೆಯಲ್ಲಿ 694 ರೂಪಾಯಿ ಖರ್ಚು ಮಾಡುವ ಮಣಿಪುರ ಹಾಗೂ ವಿದೇಶಿ ಮದ್ಯ ಸೇವನೆಯಲ್ಲಿ 4232 ರೂಪಾಯಿ ಖರ್ಚು ಮಾಡುವ ಸಿಕ್ಕಿಂ ಮೊದಲ ಸ್ಥಾನ ಪಡೆದಿವೆ.