ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ ಗುಜರಾತ್ ಉದ್ಯಮಿ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆ, ಈ ಉದ್ಯಮಿ ಕೇರಳಕ್ಕೆ ವ್ಯವಹಾರ ಸಲುವಾಗಿ ತೆರಳಿದ್ದ, ಬಳಿಕ ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ, ಇದೀಗ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆಯಾಗಿ ರೋಚಕ ಘಟನೆ ಬಹಿರಂಗವಾಗಿದೆ.

ಬೆಂಗಳೂರು (ಅ.18) ಲಕ್ಷ ಲಕ್ಷ ರೂಪಾಯಿ ವ್ಯವಹಾರ ಮಾಡುವ ಗುಜರಾತ್ ಉದ್ಯಮಿ. ತನ್ನ ವ್ಯವಹಾರದ ಭಾಗವಾಗಿ ಕೇರಳಕ್ಕೆ ತೆರಳಿ ಡೀಲ್ ಕುದುರಿಸಿದ್ದ. ರಬ್ಬರ್ ಬ್ಯಾಂಡ್ ಸೇರಿದಂತೆ ಇತರ ಉತ್ಪನ್ನಗಳ ವ್ಯವಹಾರದ ಮಾತುಕತೆ ನಡೆಸಿದ್ದ. ಡೀಲ್ ಬಳಿಕ ಪತ್ನಿಗೆ ನದಿಯ ಫೋಟೋ ಒಂದನ್ನು ಹಾಕಿ ಬದುಕು ಸಾಕು ಎಂದು ಮೆಸೇಜ್ ಮಾಡಿದ್ದ. ಪತ್ನಿ ಓಡೋಡಿ ಕೇರಳಕ್ಕೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ನದಿ ಬಳಿಕ ಉದ್ಯಮಿಯ ವ್ಯವಹಾರದ ಪುಸ್ತಕ ಸೇರಿದಂತೆ ಕೆಲ ವಸ್ತುಗಳು ಸಿಕ್ಕಿದೆ. ಮುಳುಗು ತಜ್ಞರ ಕರೆಯಿಸಿ ನದಿಯಲ್ಲಿ ಹುಡುಕಾಡಿದ್ದಾರೆ. ಯಾವುದೇ ಸುಳಿವಿಲ್ಲ. ಪತಿ ನದಿಗೆ ಹಾರಿದ್ದಾರೆ ಅನ್ನೋ ಅನುಮಾನಗಳು ಬಲವಾಗತೊಡಗಿತ್ತು. ಇತ್ತ ಪೊಲೀಸರ ತನಿಖೆ ರೋಚಕ ಟ್ವಿಸ್ಟ್ ಕೊಟ್ಟಿತ್ತು. ನೇರವಾಗಿ ಕೇರಳ ಪೊಲೀಸರು ಬೆಂಗಳೂರಿಗೆ ಆಗಮಿಸಿ ಹುಡುಕಾಟ ನಡೆಸಿದಾಗ ಇದೇ ಉದ್ಯಮಿ ಬೆಂಗಳೂರಲ್ಲಿ ಉಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ಹುನಾನಿ ಸಿರಾಜ್ ಅಹಮ್ಮದ್ ಭಾಯಿ ಕೇರಳ ಟೂರ್

ಗುಜರಾತ್‌ನ ಉದ್ಯಮಿ ಹುನಾನಿ ಸಿರಾಜ್ ಅಹಮ್ಮದ್ ಭಾಯಿ ರಬ್ಬರ್ ಬ್ಯೂಸಿನೆಸ್‌ಗಾಗಿ ಕೇರಳದ ಪಾಲಕ್ಕಾಡ್‌ನ ಶೊರಾನೂರ್‌ಗೆ ಆಗಮಿಸಿದ್ದಾನೆ. ಕೆಲ ರಬ್ಬರ್ ಕಂಪನಿ, ರಬ್ಬರ್ ಮಾರಾಟದ ಡೀಲರ್ ಸೇರಿದಂತೆ ಹಲವೆಡೆ ತೆರಳಿ ಮಾತುಕತೆ ನಡೆಸಿದ್ದಾನೆ. ಡೀಲ್ ಕುದಿರಿಸಿ ಗುಜರಾತ್‌ನಲ್ಲಿ ಭಾರಿ ಉದ್ಯಮದ ಪ್ಲಾನ್ ವಿವರಿಸಿದ್ದಾನೆ.

ಪತ್ನಿಗೆ ವ್ಯಾಟ್ಸಾಪ್ ಮೆಸೇಜ್

ಸಿರಾಜ್ ಅಹಮ್ಮದ್ ಭಾಯಿ ತಮ್ಮ ಪತ್ನಿಗೆ ವ್ಯಾಟ್ಸಾಪ್ ಮೂಲಕ ಒಂದು ಫೋಟೋ ಹಾಗೂ ಮೆಸೇಜ್ ಕಳುಹಿಸಿದ್ದಾನೆ. ಕೇರಳದ ಪ್ರಸಿದ್ಧ ಭಾರತಪುಝ ನದಿ ಬಳಿ ನಿಂತು ತೆಗೆದ ಫೋಟೋ ಒಂದನ್ನು ಪತ್ನಿಗೆ ಕಳುಹಿಸಿದ್ದಾನೆ. ಬದುಕು ಸಾಕು ಅನ್ನೋ ಅರ್ಥದಲ್ಲಿ ಒಂದು ಸಂದೇಶವನ್ನು ಪತ್ನಿಗೆ ಕಳುಹಿಸಿದ್ದಾನೆ. ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ. ಸಿರಾಜ್ ಕುರಿತು ಯಾವುದೇ ಸುಳಿವಿಲ್ಲ, ಫೋನ್ ಸಂಪರ್ಕವಿಲ್ಲ.

ಹುಡುಕಾಟ ಆರಂಭಿಸಿದ ಕೇರಳ ಪೊಲೀಸ್

ಪತ್ನಿ ನೀಡಿದ ದೂರಿನ ಆಧಾರದಲ್ಲಿ ಕೇರಳ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ನದಿ ಬಳಿ ಮುಳುಗುತಜ್ಞರ ಕರೆಯಿಸಿ 2 ದಿನ ಹುಡುಕಿದ್ದಾರೆ. ಯಾವುದೇ ಸುಳಿವಿಲ್ಲ. ಇತ್ತ ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿರಾಜ್ ಅಹಮ್ಮದ್ ನದಿ ದಡದಿಂದ ಮರಳಿರುವುದು ಪತ್ತೆಯಾಗಿದೆ. ಹೀಗಾಗಿ ಮತ್ತಷ್ಟು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಈತ ಬೆಂಗಳೂರು ಪ್ರಯಾಣ ಮಾಡಿರುವುದು ಪತ್ತೆಯಾಗಿದೆ.

ಬೆಂಗಳೂರಿಗೆ ಆಗಮಿಸಿದ ಕೇರಳ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಈ ಸಿರಾಜ್ ಅಹಮ್ಮದ್ ಬೆಂಗಳೂರಿನಲ್ಲಿ ಉಬರ್ ಚಾಲಕನಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ಈತನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಸತ್ತನೆಂದು ಬಿಂಬಿಸಿದ ಹಿಂದಿನ ಕತೆ ಹೇಳಿದ್ದಾನೆ.

50 ಲಕ್ಷ ರೂಪಾಯಿ ಸಾಲ, ತೀರಿಸಲು ಸಾಧ್ಯವಾಗದೆ ಸತ್ತ ನಾಟಕ

ಉದ್ಯಮದಲ್ಲಿ 50 ಲಕ್ಷ ರೂಪಾಯಿ ಸಾಲವಾಗಿದೆ. ಪ್ರತಿ ದಿನ ಸಾಲಗಾರರು ಕಿರುಕುಳ ತಾಳಲಾರದೆ ಉಪಾಯ ಮಾಡಿದ್ದ. ಸತ್ತನೆಂದು ನಾಟಕ ಮಾಡಿ ಯಾರಿಗೂ ತಿಳಿಯದಂತೆ ಕೆಲಸ ಮಾಡಿಕೊಂಡು ಜೀವನ ಸಾಗಿಸಲು ಮುಂದಾಗಿದ್ದ. ಈತನ ಜಿಲ್ಲಾ ನ್ಯಾಯಾಲಕ್ಕೆ ಹಾಜರುಪಡಿಸಿದ ಪೊಲೀಸರು ಬಳಿಕ ಬಿಡುಡೆ ಮಾಡಿದ್ದಾರೆ. ಸಾಲದಿಂದ ತಪ್ಪಿಸಿಕೊಳ್ಳಲು ಮಾಡಿದ ನಾಟಕ ಉಲ್ಟಾ ಹೊಡದಿದೆ. ಇದೀಗ ಈತನ ಪತ್ನಿ ಸಾಲ ಮರುಪಾವತಿಸಲು ಸಮ ಕೇಳಿರುವುದಾಗಿ ವರದಿಯಾಗಿದೆ.