Dunki Route turned Dead route: ಡಂಕಿ ರೂಟ್ ಮೂಲಕ ಅಮೆರಿಕಾ ಸೇರಲು ಮುಂದಾಗಿದ್ದ ಹರ್ಯಾಣದ 18ರ ಹರೆಯದ ಯುವಕನನ್ನು ಆತನನ್ನು ಡಂಕಿ ರೂಟ್ ಮೂಲಕ ಕರೆದೊಯ್ದ ಮಾನವ ಕಳ್ಳಸಾಗಣೆದಾರರೇ ಕೊಲೆ ಮಾಡಿದ್ದಾರೆ. ಮಾರ್ಚ್‌ನಲ್ಲಿ ಈ ಕೊಲೆ ನಡೆದಿದ್ದು, ಪೋಷಕರಿಗೆ ಈಗ ವಿಚಾರ ತಿಳಿದಿದೆ.

ಅಮೆರಿಕಾ ಕನಸಿಗೆ ಬಲಿಯಾದ ಹರ್ಯಾಣದ ಯುವಕ

ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ನೇಮಕವಾದಾಗಿನಿಂದಲೂ ವೀಸಾ ನಿಯಮಗಳು ಸಾಕಷ್ಟು ಕಠಿಣವಾಗಿವೆ. ಅಕ್ರಮ ವಲಸಿಗರನ್ನು ಟ್ರಂಪ್ ಮೂಟೆ ಕಟ್ಟಿ ವಿಮಾನ ಏರಿಸುತ್ತಿದ್ದಾರೆ. ಆದರೂ ಬಹುತೇಕ ವಿಶೇಷವಾಗಿ ಪಂಜಾಬ್, ಹರ್ಯಾಣದ ಜನರಿಗೆ ಅಮೆರಿಕಾ ಎಂದರೆ ಏನೋ ಹುಚ್ಚು. ಅಮೆರಿಕಾದಲ್ಲಿ ಮಕ್ಕಳು ಉದ್ಯೋಗದಲ್ಲಿರುವುದು ಎಂದರೆ ಅದೇನೋ ಒಂದು ಹೈ ಸ್ಟೆಟಸ್ ಸ್ಟ್ಯಾಂಡರ್ಡ್‌ನ ಸಂಕೇತ. ಅಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕುವವನಾಗಿ, ಸ್ಟೋರ್‌ಗಳಲ್ಲಿ ಸೇಲ್ಸ್ ಮ್ಯಾನ್‌ಗಳಾಗಿ ಅಥವಾ ಇನ್ನೇನೋ ಸಣ್ಣಪುಟ್ಟ ಕೆಲಸ ಮಾಡುವುದಾದರೂ ಸರಿ ಒಟ್ಟಿನಲ್ಲಿ ಮಕ್ಕಳು ಅಮೆರಿಕಾದಲ್ಲಿ ಇರಬೇಕು ಅಷ್ಟೇ. ಇದಕ್ಕಾಗಿ ಅನೇಕ ಪೋಷಕರು ಇರುವ ಭೂಮಿಯನ್ನು ಮಾರಿ ಮಕ್ಕಳನ್ನು ಅಮೆರಿಕಾಗೆ ಕಳುಹಿಸಲು ಪ್ರಯತ್ನಿಸಿದ್ದಾರೆ. ಹೀಗೆ ಮಾಡಲು ಹೋಗಿ ಅತ್ತ ಅಮೆರಿಕಾವೂ ಇಲ್ಲ ದೇಶದಲ್ಲಿರುವ ಭೂಮಿಯೂ ಇಲ್ಲ ಎಂಬಂತಾಗಿದೆ ಅಲ್ಲಿನ ಕೆಲ ಕುಟುಂಬಗಳ ಸ್ಥಿತಿ. ಆದರೂ ಜನ ಬುದ್ಧಿ ಕಲಿಯುವುದಿಲ್ಲ, 

ಏನಿದು ಅಮೆರಿಕಾ ಕನಸಿಗೆ ನೀರೆರೆಯುವ ಡಂಕಿ ರೂಟ್‌

ಅಕ್ರಮವಾಗಿಯಾದರೂ ಸರಿ ಅಮೆರಿಕಾ ಸೇರಬೇಕು ಎಂಬ ಆಸೆ ಅನೇಕ ಭಾರತೀಯರದ್ದು, ಭಾರತದ ಜನರ ಇಂತಹ ಅಮೆರಿಕಾ ಕನಸಿಗೆ ನೀರೆರೆಯುತ್ತೇ ಈ ಡಂಕಿ ರೂಟ್. ಅಕ್ರಮವಾಗಿ ಹೊರದೇಶಿಗರನ್ನು ಅಮೆರಿಕಾದೊಳಗೆ ತೂರಿಸಿ ಬಿಡುವ ಈ ಡಾಂಕಿ ರೂಟ್‌ ನಿರ್ವಹಿಸುವವರಿಗೆ ಭಾರತ ಸೇರಿದಂತೆ ಏಷ್ಯಾದಲ್ಲಿರುವ ಅಮೆರಿಕಾದ ಕನಸು ಕಾಣುವ ಸಾವಿರಾರು ಜನರು ಒಂದು ರೀತಿಯ ಎಟಿಎಂನಂತೆಯೇ ಎಂದು ಹೇಳಬಹುದು. ಹೀಗೆ ಕಳ್ಳಮಾರ್ಗದಲ್ಲಿ ಅಮೆರಿಕಾವನ್ನು ತಲುಪಲು ಬಯಸುವ ಹೊರದೇಶಿಗರಿಂದ ಈ ಡಂಕಿ ರೂಟ್ ಗ್ಯಾಂಗ್ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡುತ್ತದೆ. ಇಷ್ಟು ಹಣ ಕೊಟ್ಟ ನಂತರವೂ ಇವರು ಅಮೆರಿಕಾದೊಳಗೆ ನಿಮ್ಮನ್ನು ತಲುಪಿಸಿ ಬಿಡುತ್ತಾರೆ ಎಂಬ ಯಾವ ಭರವಸೆಯೂ ಇಲ್ಲ. ಹಾಗೂ ಈ ಹಾದಿ ಸುಗಮವೂ ಅಲ್ಲ ಹಲವು ದೇಶಗಳ ಗಡಿಗಳಲ್ಲಿ ಅಕ್ರಮವಾಗಿ ನುಸುಳಬೇಕು ಅಧಿಕಾರಿಗಳು, ಕಳ್ಳಕಾಕರು ಖದೀಮರು ನೈಸರ್ಗಿಕ ವಿಕೋಪಗಳು ಈ ಡಂಕಿ ರೂಟ್‌ನಲ್ಲಿ ಎದುರಾಗುತ್ತಲೇ ಇರುತ್ತವೆ. ಆದರೂ ಜನ ಇವರ ಡಂಕಿ ರೂಟ್‌ನಲ್ಲಿ ಅಮೆರಿಕಾಗೆ ಹೋಗಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಕಳ್ಳಸಾಗಣೆದಾರರೇ ಒತ್ತೆಯಾಳಾಗಿರಿಸಿ ಪೋಷಕರಿಂದ ಹಣಕ್ಕೆ ಬೇಡಿಕೆ, ಬಳಿಕ ಹತ್ಯೆ

ಇಲ್ಲೊಂದು ಕಡೆ ಡಂಕಿ ರೂಟ್‌ನಲ್ಲಿ ಅಕ್ರಮವಾಗಿ ಅಮೆರಿಕಾ ಸೇರುವುದಕ್ಕೆ ಯತ್ನಿಸಿದ ಹರಿಯಾಣದ ಯುವಕನೋರ್ವನನ್ನು ಕಳ್ಳಸಾಗಣೆದಾರರೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೇವಲ 18ರ ಹರೆಯದ ಯುವರಾಜ್ ಹೀಗೆ ಅಮೆರಿಕಾ ಸೇರುವ ಭರದಲ್ಲಿ ಲೋಕವನ್ನೇ ತೊರೆದ ತರುಣ. ಡಂಕಿ ರೂಟ್‌ನಲ್ಲಿ ಅಮೆರಿಕಾಗೆ ಹೋಗುತ್ತಿದ್ದ ಈತನನ್ನು ಗ್ವಾಟೆಮಾಲಾದಲ್ಲಿ ಒತ್ತೆಯಾಳುವಿನಂತೆ ಇರಿಸಿಕೊಂಡ ಕಳ್ಳಸಾಗಣೆದಾರರು ನಂತರ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಆತನ ಕುಟುಂಬದವರು ಹೇಳಿದ್ದಾರೆ.

ಹರ್ಯಾಣದ ಕೈತಾಲ್ ಜಿಲ್ಲೆಯ ಪುಂಡ್ರಿ ಪಟ್ಟಣದ ಮೋಹ್ನಾ ಗ್ರಾಮದ ಯುವರಾಜ್‌ ಅವರು ತಮ್ಮ ಪೋಷಕರ ಒಬ್ಬನೇ ಒಬ್ಬ ಮಗ. 2024ರ ಅಕ್ಟೋಬರ್ 13ರಂದು ಯುವರಾಜ್ ಅಮೆರಿಕಾಗೆ ತೆರಳುವುದಾಗಿ ಭಾರತವನ್ನು ತೊರೆದಿದ್ದರು. ಆದರೆ ಅಮೆರಿಕಾ ತಲುಪುವುದಕ್ಕೆ ಮೊದಲೇ ಅವರು ಶವವಾಗಿದ್ದಾರೆ. ದೇಶ ಬಿಟ್ಟು ವರ್ಷವೇ ಕಳೆದಿದೆ ಅದರೂ ಅವರು ಅಮೆರಿಕಾ ತಲುಪಿಲ್ಲ ಹಾಗೂ ತಲುಪುವುದಕ್ಕೆ ಮೊದಲೇ ಮೃತರಾದರು ಎಂದರೆ ಈ ಡಂಕಿ ರೂಟ್ ಎಷ್ಟೊಂದು ರಿಸ್ಕ್‌ನಿಂದ ಕೂಡಿದ್ದು ಎಂಬುದು ಅರ್ಥವಾಗುತ್ತದೆ.

ಅಮೆರಿಕಾ ಕನಸು ಭಗ್ನ:ಮಾರ್ಚ್‌ನಲ್ಲೇ ಯುವರಾಜ್ ಸಾವು

ಈಗ ಅವರ ಸಾವಿನ ಬಗ್ಗೆ ಮೆಕ್ಸಿಕೋದಿಂದ ನೀಡಲಾಗಿದೆ ಎನ್ನಲಾದ ಕಳ್ಳಸಾಗಾಣಿಕೆದಾರರೊಬ್ಬರು ಕಳುಹಿಸಲಾದ ಮರಣ ಪ್ರಮಾಣಪತ್ರದಲ್ಲಿ ಮಾರ್ಚ್ 4 ರಂದೇ ಅವರು ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಆತನ ಸಾವಿನ ಬಗ್ಗೆ ಪೋಷಕರಿಗೆ ಕಳೆದ ವಾರವಷ್ಟೇ ಈ ಪತ್ರ ಸಿಕ್ಕಿದ್ದು, ಅಮೆರಿಕಾಗೆ ತೆರಳಲು ವಿಮಾನ ಏರಿದ ತಮ್ಮ ಪುತ್ರ ಸತ್ತು ಹಲವು ತಿಂಗಳುಗಳೇ ಕಳೆದಿದೆ ಎಂಬ ಘೋರ ಸತ್ಯದ ಅರಿವಾಗಿದೆ.

ಯುವರಾಜ್ ಪೋಷಕರೊಂದಿಗೆ 41 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ ಕುಟುಂಬ

ಹೀಗೆ ಡಂಕಿ ರೂಟ್‌ನಲ್ಲಿ ಯುವರಾಜ್‌ ಅವರನ್ನು ಅಮೆರಿಕಾದ ತಲುಪಿಸುವ ಭರವಸೆ ನೀಡಿದ ಮಾನವ ಕಳ್ಳಸಾಗಣೆದಾರ ಏಜೆಂಟ್‌ಗಳು ಯುವರಾಜ್ ಅವರ ಪೋಷಕರ ಬಳಿ ಈ ಕಾರ್ಯಕ್ಕಾಗಿ 41 ಲಕ್ಷರೂಗಳ ಒಪ್ಪಂದ ಮಾಡಿಕೊಂಡಿದ್ದರು. ಪೋಷಕರು ತಮ್ಮ ಪುತ್ರ ಅಮೆರಿಕಾ ತಲುಪಿದ ನಂತರವೇ ಹಣವನ್ನು ಪಾವತಿ ಮಾಡುವುದಾಗಿ ಹೇಳಿದ್ದರು. ಆದರೂ ಈ ಕಳ್ಳಸಾಗಣೆದಾರರು ಹಲವು ನೆಪಗಳನ್ನು ಹೇಳಿ ಸುಮಾರು 25 ಲಕ್ಷ ರೂಪಾಯಿಗಳನ್ನು ಯುವರಾಜ್ ಅವರ ಪೋಷಕರ ಕೈನಿಂದ ಮೊದಲೇ ವಸೂಲಿ ಮಾಡಿದ್ದಾರೆ ಎಂದು ಯುವರಾಜ್ ತಂದೆ ಕುಲ್‌ದೀಪ್ ಮಾಹಿತಿ ನೀಡಿದ್ದಾರೆ.

25 ಲಕ್ಷ ಪಾವತಿಯ ನಂತರ ಮಗನೊಂದಿಗಿನ ಸಂಪರ್ಕ ಕಡಿತ

25 ಲಕ್ಷ ಮೊದಲೇ ಪಾವತಿಸಿದ ನಂತರ ಕುಟುಂಬದೊಂದಿಗೆ ಯುವರಾಜ್‌ನ ಸಂಪರ್ಕ ಕಡಿತಗೊಂಡಿದೆ. ಸಂಪರ್ಕ ಕಕಡಿತಗೊಂಡು ಕೆಲವು ತಿಂಗಳುಗಳ ನಂತರ, ಯುವರಾಜ್ ಮತ್ತು ಮತ್ತೊಬ್ಬ ಪಂಜಾಬ್‌ನ ಯುವಕನನ್ನು ಗ್ವಾಟೆಮಾಲಾದಲ್ಲಿ ಈ ಕಳ್ಳಸಾಗಣೆದಾರರು ಒತ್ತೆಯಾಳಾಗಿ ಇರಿಸಿಕೊಂಡಿರುವ ವೀಡಿಯೊಗಳು ಪೋಷಕರನ್ನು ತಲುಪಿದೆ. ಈ ವೀಡಿಯೊಗಳಲ್ಲಿ, ಕಳ್ಳಸಾಗಣೆದಾರರು ಇಬ್ಬರೂ ಯುವಕರನ್ನು ನೆಲದ ಮೇಲೆ ಮುಖ ಕೆಳಗಾಗಿ ಮಲಗಲು ಒತ್ತಾಯಿಸುತ್ತಾ, ಅವರ ಕೆನ್ನೆಗೆ ಬಾರಿಸಿ ಹಲ್ಲೆ ಮಾಡುವುದನ್ನು ಕಾಣಬಹುದು.

ಹಣ ಕಳುಹಿಸಿ ಅಪ್ಪ ಅವರು ನಮ್ಮನ್ನು ಕೊಂದು ಬಿಡುತ್ತಾರೆ

ಅಲ್ಲದೇ ಗನ್ ಲೋಡ್ ಮಾಡಿ ಕೊಲ್ಲುವುದಾಗಿ ಬೆದರಿಸಿದ್ದಲ್ಲದೇ ಯುವರಾಜ್ ಬಿಡುಗಡೆಗೆ ಸುಮಾರು 17.5 ಲಕ್ಷ ರೂ.ಗಳನ್ನು ನೀಡುವಂತೆ ಬೇಡಿಕೆ ಇಟ್ಟರು ಎಂದು ಕುಲದೀಪ್ ಹೇಳಿದ್ದಾರೆ. ಈ ಕಳ್ಳಸಾಗಣೆದಾರರು ಕೊನೆಯದಾಗಿ ರೆಕಾರ್ಡ್ ಮಾಡಿ ಕಳುಹಿಸಿದ ಸಂದೇಶದಲ್ಲಿ, ಯುವರಾಜ್ ತನ್ನ ಕುಟುಂಬದೊಂದಿಗೆ ಹಣ ಕಳುಹಿಸುವಂತೆ ಬೇಡುವುದನ್ನು ಕಾಣಬಹುದು. ಪಾಪಾ ಜಿ, ಅವರು ನಮ್ಮನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅವರು ನಮ್ಮನ್ನು ಕೆಟ್ಟದಾಗಿ ಹೊಡೆಯುತ್ತಿದ್ದಾರೆ. ಅವರು ನಮ್ಮನ್ನು ಕೊಲ್ಲುತ್ತಾರೆ. ದಯವಿಟ್ಟು ಹಣ ಕಳುಹಿಸಿ. ಇಲ್ಲದಿದ್ದರೆ, ಅವರು ನಮ್ಮನ್ನು ಕೊಲ್ಲುತ್ತಾರೆ ಎಂದು ಅವರು ಬೇಡಿಕೊಂಡಿದ್ದಾರೆ.

ಮಗನು ಸಂಕಟದಲ್ಲಿರುವ ವಿಚಾರ ತಿಳಿದ ಕುಟುಂಬದವರು ಮಾರ್ಚ್‌ನಲ್ಲಿ ಕೈತಾಲ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಭೇಟಿಯಾಗಿ ಈ ಡಂಕಿ ರೂಟ್ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಯುವಕ ಸುರಕ್ಷಿತವಾಗಿ ಮರಳಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆದರೆ ಅವರ ಭರವಸೆಗಳು ಹುಸಿಯಾದವು. ಈ ಕುಟುಂಬ ಕಳ್ಳಸಾಗಣೆದಾರರಲ್ಲಿ ಒಬ್ಬರಾದ ನೇಪಾಳದ ಪ್ರಜೆ ಪಾಲ್ ಅವರನ್ನು ಹೇಗೋ ಸಂಪರ್ಕಿಸಿದಾಗ, ಆತ ಯುವರಾಜ್ ಸಾವಿಗೀಡಾಗಿರುವ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾರೆ.

ಯುವರಾಜ್ ಕೊಲ್ಲಲ್ಪಟ್ಟಿದ್ದಾನೆ ಎಂದು ಅಲ್ಲಿನ ಕಳ್ಳಸಾಗಣೆದಾರ ನಮಗೆ ಹೇಳಿದನು. ನಾವು ಸಾಕ್ಷಿ ಕೇಳಿದಾಗ, ಅವನು ಹಣಕ್ಕಾಗಿ ಬೇಡಿಕೆ ಇಟ್ಟನು. ನಾವು ಅವನ ಖಾತೆಗೆ 1,500 ಯುಎಸ್ ಡಾಲರ್‌ಗಳನ್ನು ವರ್ಗಾಯಿಸಿದ ನಂತರ, ಅವನು ನಮಗೆ ಯುವರಾಜ್ ದೇಹದ ಛಾಯಾಚಿತ್ರಗಳು ಮತ್ತು ಮರಣ ಪ್ರಮಾಣಪತ್ರದ ಪ್ರತಿಯನ್ನು ಕಳುಹಿಸಿದನು ಎಂದು ಯುವರಾಜ್‌ನ ಚಿಕ್ಕಪ್ಪ ಕುಲ್ವಂತ್ ಹೇಳಿದ್ದಾರೆ.

ನಮ್ಮವರೇ ನಮಗೆ ಎರವಾದರು: ಕಳ್ಳಸಾಗಣೆ ಜಾಲದ ಹಿಂದಿರುವವರು ಭಾರತೀಯರೇ?

ಈ ಪ್ರಕಣದಲ್ಲಿ ಹರಿಯಾಣದ ಮೂವರು ಏಜೆಂಟರಾದ ದೇವೇಂದ್ರ ಚೀಮ್, ನವಜೋತ್ ದುಶೈನ್ ಮತ್ತು ನವನೀತ್ ಅಲಿಯಾಸ್ ನೀತು ಅಲಿಯಾಸ್ ಮೈಕೆಲ್ ಭಾಗಿಯಾಗಿದ್ದಾರೆ ಎಂದು ಕುಲ್ವಂತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಲ್ಲಿನ ಕುರುಕ್ಷೇತ್ರದ ಹಸನ್‌ಪುರ ಗ್ರಾಮದ ನವನೀತ್, ಇಡೀ ಪಿತೂರಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಅವರು ಆರೋಪಿಸಿದ್ದಾರೆ. ಎಲ್ಲವೂ ಈಗ ನಾಶವಾಗಿದೆ, ನನ್ನ ಬದುಕಿನ ಬೆಂಬಲ ಶಾಶ್ವತವಾಗಿ ಹೋಗಿರುವುದರಿಂದ ನಾನು ಜೀವನದಲ್ಲಿ ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದೇನೆ ಎಂದು ಯುವರಾಜ್ ತಾಯಿ ಸರಬ್ಜಿತ್ ಕೌರ್ ಹೇಳಿದ್ದಾರೆ ನನ್ನ ಮಗನಿಗೆ ಹೀಗೆ ಮಾಡಿದವರನ್ನು ದೇವರು ಬಿಡುವುದಿಲ್ಲ ಎಂದು ಅವರು ಕಣ್ಣೀರಾಕಿದ್ದಾರೆ.

ಇದನ್ನೂ ಓದಿ: ಪ್ರದೀಪ್ ಪ್ರತಾಪ್ ಕಿತ್ತಾಟ: ಕಿವಿ ಮಾತು ಹೇಳಿದ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್

ಇದನ್ನೂ ಓದಿ: ಹೊಸ ಪಕ್ಷ ಕಟ್ತಾರಾ ಅಣ್ಣಾಮಲೈ? ಗನ್ ತೋರಿಸಿ ಯಾರನ್ನೂ ಪಕ್ಷದಲ್ಲಿ ಉಳಿಸಲು ಸಾಧ್ಯವಿಲ್ಲ ಎಂದ ಅಣ್ಣಾಮಲೈ