ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ 'ಜನ್ ಸುನ್‌ವಾಯಿ' ಕಾರ್ಯಕ್ರಮದಲ್ಲಿ ದಾಳಿ ನಡೆದಿದೆ. ದಾಳಿಕೋರನನ್ನು ರಾಜೇಶ್ ಸಕಾರಿಯಾ ಎಂದು ಗುರುತಿಸಲಾಗಿದ್ದು, ದಾಳಿಯ ಹಿಂದಿನ ನಿಖರ ಕಾರಣ ಇನ್ನೂ ತನಿಖೆಯ ಹಂತದಲ್ಲಿದೆ.
ನವದೆಹಲಿ (ಆ.20): ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ರಾಜೇಶ್ ಸಕಾರಿಯಾ ಎಂದು ಗುರುತಿಸಲಾಗಿದ್ದು, ಮೂಲತಃ ಗುಜರಾತ್‌ನ ರಾಜ್‌ಕೋಟ್‌ನವರು. ದೆಹಲಿ ಪೊಲೀಸರು ಅವರ ಕುಟುಂಬವನ್ನು ಸಂಪರ್ಕಿಸಿದ್ದು, ಅವರ ತಾಯಿ ಭಾನು ಘಟನೆಯ ಬಗ್ಗೆ ಮಾತನಾಡಿದ್ದಾರೆ. ರಾಜೇಶ್ ಶ್ವಾನ ಪ್ರಿಯನಾಗಿದ್ದು, ದೆಹಲಿ ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳನ್ನು ಒಟ್ಟುಗೂಡಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಕೆಲವು ವರದಿಗಳ ಪ್ರಕಾರ, 41 ವರ್ಷದ ಸಕಾರಿಯಾ ತಮ್ಮ ಸಂಬಂಧಿಯನ್ನು ಬಂಧನ ಮಾಡಿದ್ದ ಕಾರಣಕ್ಕೆ ಮುಖ್ಯಮಂತ್ರಿಯ ಸಹಾಯ ಪಡೆಯಲು ಸಾರ್ವಜನಿಕ ಸಭೆಗೆ ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.
ಜನ್ ಸುನ್‌ವಾಯಿ ಕಾರ್ಯಕ್ರಮಕ್ಕೆ ಹೋಗಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಜೇಶ್ ಸಕಾರಿಯಾ ಕೆಲವು ದಾಖಲೆಗಳೊಂದಿಗೆ ಮುಖ್ಯಮಂತ್ರಿಯ ಬಳಿ ಹೋಗಿದ್ದರು. ಅವರೊಂದಿಗೆ ಮಾತನಾಡುವ ವೇಳೆ, ರೇಖಾ ಗುಪ್ತಾ ಅವರನ್ನು ಮೊದಲು ದುರುಗುಟ್ಟುಕೊಂಡು ನೋಡಲು ಆರಂಭಿಸಿದ್ದರು. ಇದರ ಬೆನ್ನಲ್ಲಿಯೇ ಅವರು ದಾಳಿ ಮಾಡಿದರು. ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಜೇಶ್ ಸಕಾರಿಯಾ ಮದ್ಯಪಾನ ಮಾಡಿದ್ದವನಂತೆ ಕಂಡಿದ್ದ ಎಂದಿದ್ದಾರೆ. ಆದರೆ, ಈ ವಿಚಾರ ಇನ್ನೂ ಖಚಿತವಾಗಿಲ್ಲ.
ಮುಖ್ಯಮಂತ್ರಿಯ ಮೇಲೆ ದಾಳಿ ಮಾಡಿದ ತಕ್ಷಣ ಮುಖ್ಯಮಂತ್ರಿಯ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಬಂಧಿಸಿದರು ಮತ್ತು ದೆಹಲಿ ಪೊಲೀಸರು ದಾಳಿಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿರುವುದರಿಂದ ಈಗ ಆತನನ್ನು ಪ್ರಶ್ನಿಸಲಾಗುತ್ತಿದೆ.
ಮುಖ್ಯಮಂತ್ರಿ ಗುಪ್ತಾ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಆಲಿಕೆ ಸಂದರ್ಭದಲ್ಲಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು 'ಜನ್ ಸುನ್‌ವಾಯಿ' ಸಭೆಯಲ್ಲಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಬಿಜೆಪಿ ಶಂಕಿಸಿದೆ. ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಮುಖ್ಯಮಂತ್ರಿಯವರ ಕೆಲಸವನ್ನು ಪ್ರತಿಸ್ಪರ್ಧಿಗಳು ಸಹಿಸುವುದಿಲ್ಲ ಮತ್ತು ದಾಳಿಕೋರನ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಈ ದಾಳಿಯನ್ನು ಖಂಡಿಸಿದ್ದು, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ ಎಂದು ಹೇಳಿದ್ದಾರೆ. "ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗೆ ಸ್ಥಳವಿದೆ, ಆದರೆ ಹಿಂಸಾಚಾರಕ್ಕೆ ಸ್ಥಳವಿಲ್ಲ. ದೆಹಲಿ ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಮುಖ್ಯಮಂತ್ರಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಆಶಿಸುತ್ತೇವೆ," ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯೂ ಆಗಿರುವ ಅತಿಶಿ ಹೇಳಿದರು.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಈ ದೊಡ್ಡ ಭದ್ರತಾ ಉಲ್ಲಂಘನೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು. ದೆಹಲಿ ಪೊಲೀಸ್ ಆಯುಕ್ತ ಎಸ್‌ಬಿಕೆ ಸಿಂಗ್ ಈ ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
