Delhi Smog Crisis Artificial Rain Fails ದೆಹಲಿಯ ವಾಯು ಮಾಲಿನ್ಯ ನಿಯಂತ್ರಣದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಮೋಡ ಬಿತ್ತನೆಯಂತಹ ಪ್ರಯತ್ನಗಳು ಶೂನ್ಯ ಫಲಿತಾಂಶ ನೀಡಿವೆ.
ಡೆಲ್ಲಿ ಮಂಜು, ಏಷ್ಯಾನೆಟ್ ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ನವದೆಹಲಿ (ಅ.29): ಅಕ್ಟೋಬರ್, ನವೆಂಬರ್ ತಿಂಗಳು ಅಂದ್ರೆ ದೆಹಲಿಗರಲ್ಲಿ ಒಂದು ರೀತಿ ಎದೆ ನೋವು ಶುರುವಾಯ್ತು ಅನ್ನೋ ವಾರ್ನಿಂಗ್ ಕೇಳಿ ಬರುತ್ತೆ. ಈ ಆತಂಕ ಬಿಪಿಯನ್ನು ಹೆಚ್ಚಿಸುತ್ತೆ. ಗಾಳಿ ವಿಷಮ ರೂಪ ಪಡೆದು ಕೆಮ್ಮು, ಉಬ್ಬಸ, ತಲೆನೋವು, ಶಾಖ ದಿಂದ ಒದ್ದಾಡಿದ್ದ ಮೈ ಗೆ, ತಂಪುಗೊಳ್ಳುವ ಈ ಹಂತದಲ್ಲಿ ಹತ್ತು ಹಲವು ಕಾಯಿಲೆಗಳು ಅಂಟುತ್ತಿವೆ. ಬಿಜೆಪಿಯ ರೇಖಾ ಗುಪ್ತಾ ಅವರ ಸರ್ಕಾರಕ್ಕೆ ಇದು ಮೊದಲ ವಾಯು ಮಾಲಿನ್ಯದ ವರ್ಷ. ಕಳೆದ ಒಂದೂವರೆ ದಶಕದಿಂದ ಆಪ್ ಪಕ್ಷದ ಮೇಲೆ ಮಾತಿನ ಕೆಂಡವನ್ನೇ ಸುರಿಸುತ್ತಿದ್ದ ಬಿಜೆಪಿಗೆ ಈ ಭಾರಿ ನಿಜವಾಗಿಯೂ ವಾಯು ಮಾಲಿನ್ಯ ಎಂಬ ಕೆಂಡದ ಮೇಲೆ ಕುಂತು ಅನುಭವಾಗಿದೆ.
ಈತನಕ ಪಂಜಾಬ್, ಹರಿಯಾಣ , ರಾಜಸ್ಥಾನ ರೈತರ ಮೇಲೆ ದೂರುತ್ತಿದ್ದ ದೆಹಲಿಯ ಬಿಜೆಪಿಗರಿಗೆ ಈ ಭಾರಿ ಹರಿಯಾಣ, ರಾಜಸ್ಥಾನದ ಹೆಸರು ಹೇಳುವುದು ಕಷ್ಟವಾಯ್ತು. ಕಾರಣ- ಇಲ್ಲಿ ಅವರದ್ದೇ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿದೆ. ವಾಯುಮಾಲಿನ್ಯ ಅಳೆಯುವ ಮಾಪನಾ ಯಂತ್ರದ ಸುತ್ತು ಗಾಣ ಸುತ್ತುವ ಎತ್ತಿನಂತೆ ವಾಟರ್ ಟ್ಯಾಂಕರ್ ಗಳು ಸುತ್ತಿದ ವಿಡಿಯೋ ವೈರಲ್ ಆಗಿ ಇಡೀ ಬಿಜೆಪಿ ಸರ್ಕಾರ ಮತ್ತು ಖುದ್ದು ಸಿಎಂ ನಗೆಪಾಟೀಲಿಗೆ ಈಡಾಗಿದ್ದು ವಿಶೇಷವಾಗಿತ್ತು.
ವಿಪಕ್ಷವಾಗಿರುವ ಆಮ್ ಆದ್ಮಿ ಪಕ್ಷದ ನಾಯಕರು ಖುದ್ದು ಮಾಪನಾ ಯಂತ್ರದ ಬಳಿ ಹೋಗಿ ಟಿವಿ ವರದಿಗಾರರಂತೆ ವಾಕ್ ಥ್ರೂ ಮಾಡಿದರು. ಲೈವ್ ಅಪ್ಡೇಟ್ ಗಳನ್ನು x ಖಾತೆಯಲ್ಲಿ ಹಂಚಿಕೊಂಡರು. ಡೆಲ್ಲಿ ಸರ್ಕಾರದ ನಕಲಿ ಕ್ರಮವನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತಾ ಇಡೀ ಭಾನುವಾರ ದೆಹಲಿಗರ ವೀಕ್ ಎಂಡ್ ಡೇ ಗೆ ಆಹಾರವಾಗುವಂತೆ ನೋಡಿಕೊಂಡಿದ್ದು ಬಿಜೆಪಿಗೆ ಮತ್ತೂ ಕಷ್ಟವಾಯ್ತು.
ದೆಹಲಿಯ ಮಾಲಿನ್ಯಕ್ಕೆ ಈ ಭಾರಿ ಅಂತ್ಯ ಬರೆಯುತ್ತೇವೆ ಎಂದು ಬಿಜೆಪಿ ಚುನಾವಣಾ ಹೊತ್ತಲ್ಲಿ ಬೀಗಿತ್ತು. ಅಲ್ಲದೇ ಈ ವಿಚಾರವಾಗಿ ಆಪ್ ಸೃಷ್ಟಿಸಿದ್ದ ಭ್ರಮೆ, ಕ್ರಮಗಳು, ಅವಾಂತರಗಳನ್ನು ಗಲ್ಲಪಟ್ಟಿ ಹಿಡಿದು ವಿಪಕ್ಷವಾಗಿ ಕೇಳಿತ್ತು ಬಿಜೆಪಿ.
ವಿಫಲವಾಯ್ತು ಮೋಡಬಿತ್ತನೆ
ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಗೆ ತಾವು ನೀಡಿದ್ದ ಭರವಸೆಗಳು ಅಥವಾ ವಚನ ಮೊದಲ ವರ್ಷವೇ ವೈಫಲ್ಯ ಕಾಣುವಂತಾಯಿತು. ಬಿಜೆಪಿಯ ಮೋಡ ಬಿತ್ತನೆಯ ಕ್ರಮ ಫೇಲ್ ಆಯ್ತು. ಐಐಟಿ ಕಾನ್ಪುರ್ ತಜ್ಞರು ಮೋಡ ಬಿತ್ತನೆಗೆ ದೆಹಲಿಯಲ್ಲಿ ಸಿಗಲೇ ಇಲ್ಲ ದಟ್ಟ ಮೋಡ ಅಥವಾ ಗಾಳಿಯಲ್ಲಿರುವ ನೀರಿನ ಆವಿಯ ಪ್ರಮಾಣವನ್ನು ಸೂಚಿಸುವ ಆರ್ದ್ರತೆ.
ರಾಸಾಯನಿಕಗಳನ್ನು ತುಂಬಿಕೊಂಡು ದೆಹಲಿಯಲ್ಲಿ ಆಕಾಶಕ್ಕೆ ಹಾರಿದ ವಿಮಾನವು ಸುಮಾರು 400 ಕಿ.ಮೀ. ಹಾರಾಟ ನಡೆಸಿತು. ಬುರಾರಿ, ಮಯೂರ್ ವಿಹಾರ್ ಮತ್ತು ಕರೋಲ್ ಬಾಗ್ ಪ್ರದೇಶಗಳ ಮೇಲೆ ಮೋಡಗಳ ಬಿತ್ತನೆ ಮಾಡಿತ್ತು. ಸ್ವಲ್ಪ ವಿರಾಮ ಪಡೆದು ಎರಡನೇ ಭಾರಿಯೂ ದೆಹಲಿಯ ಆಗಸದಲ್ಲಿ ಮೋಡ ಬಿತ್ತಿ, ಕೃತಕ ಮಳೆ ಸುರಿಸುವ ಯತ್ನ ಮಾಡಿತು. ಆದರೆ ಬಿತ್ತಿದ ಮೋಡ ಕೃತಕ ಮಳೆಯಾಗಿ ಸುರಿಯಲಿಲ್ಲ. ಕನಿಷ್ಟು ಹನಿ ಹನಿಯಾಗಿಯಾದರೂ ಸುರಿದು ಬಿಜೆಪಿ ಸರ್ಕಾರದ ಮಾನ ಉಳಿಸಲಿಲ್ಲ. ಮೂರು ಕೋಟಿಯ ಖರ್ಚಿನ ಬಾಬ್ತಿಗೆ ಅಂತಿಮವಾಗಿ ಸಿಕ್ಕಿದ್ದು ಶೂನ್ಯ ಫಲ.
ಹನಿ ಹನಿ ನೀರನ್ನು ಉಗುಳುವ ತುಂತುರು ಯಂತ್ರಗಳು ಡೆಲ್ಲಿಯ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿವೆ. ರಸ್ತೆಯ ವಿಭಜಕಗಳಲ್ಲಿ ಅಳವಡಿಸಿರುವ ಸಣ್ಣ ಸಣ್ಣ ಹನಿ ಉಗುಳುವ ಸ್ಪಿಂಕಲರ್ಸ್ ವಾಹನಗಳ ದಟ್ಟಣೆ ಹೊತ್ತಲ್ಲಿ ಕೆಲಸ ನಿರ್ವಹಿಸುತ್ತಿವೆ. ಆದರೆ ಇವ್ಯಾವು ವಾಯು ಮಾಲಿನ್ಯ ನಿಯಂತ್ರಿಸುತ್ತಿಲ್ಲ. ವಿಷಪೂರಿತ ಧೂಳು ಮನೆ ಗಳು ಸೇರುತ್ತಿರುವುದು ತಪ್ಪುತ್ತಿಲ್ಲ.
ದೆಹಲಿಗರಲ್ಲಿ ಬಿಜೆಪಿ ಸೃಷ್ಟಿಸಿದ ಭ್ರಮೆ ಕೊನೆಗೆ ಭ್ರಮೆಯಾಗಿಯೇ ಉಳಿಯಿತು. ಆಪ್ ಗದ್ದಲ ಮುಂದುವರೆಯಿತು ಎನ್ನುವಂತಾಗಿದೆ. ಪಕ್ಷ ಬದಲಾಯಿತೇ ಹೊರತು ಜನರನ್ನು ಅನಾರೋಗ್ಯಕ್ಕೀಡು ಮಾಡುವ ವಿಷ ಪೂರಿತ ಧೂಳಿನ ವರಸೆ ಬದಲಾಗಲಿಲ್ಲ. ಇನ್ನು ಶಶಿರ ಋತುವಿನ ಚಳಿ ಕಡಿಮೆಯಾಗುವ ಹೊತ್ತಿಗೆ ಎಷ್ಟು ಮಂದಿ ಆಸ್ಪತ್ರೆ ಸೇರುತ್ತಾರೋ ಗೊತ್ತಿಲ್ಲ. ಇಷ್ಟರ ನಡುವೆ ಶುದ್ದ ಗಾಳಿ ನೀಡುವ ಏರ್ ಫ್ಯೂರಿಫೈರ್ ಗೆ ಶೇ 30 ರಿಂದ 40 ರಷ್ಟು ಮಾರಾಟ ಹೆಚ್ಚಿದಂತೆಯಂತೆ.
