ದೀಪಾವಳಿಗೆ ಬೆಂಗಳೂರು, ದೆಹಲಿ ಆಗಸದಿಂದ ಹೀಗೆ ಕಾಣ್ತಿದೆ ಎಂದ ಮಹಿಳೆಗೆ ವಾಸ್ತವ ತಿಳಿಸಿದ ನೆಟ್ಟಿಗರು, ಈ ಎರಡು ವಿಡಿಯೋದಲ್ಲಿ ಯಾವುದು ಬೆಂಗಳೂರು, ಯಾವುದು ದೆಹಲಿ? ಮಹಿಳೆ ಪೋಸ್ಟ್‌ಗೆ ನೆಟ್ಟಿಗರು ವಾಸ್ತವ ತಿಳಿಸಿದ್ದೇಕೆ?
ಬೆಂಗಳೂರು (ಅ.20) ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಅಯೋಧ್ಯೆಯಲ್ಲಿ 26 ಲಕ್ಷ ದೀಪಗಳನ್ನು ಬೆಳಗಲಾಗಿದೆ. ಈ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿದೆ. ಇನ್ನು ದೇಶದ ಎಲ್ಲೆಡೆ, ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಹಣತೆ ಸೇರಿದಂತೆ ದೀಪಾಂಲಕಾರ ಮಾಡಲಾಗಿದೆ. ಹೀಗಾಗಿ ಪ್ರತಿ ಗ್ರಾಮಗಳು ದೀಪಗಳಿಂದ ಕಂಗೊಳಿಸುತ್ತಿದೆ. ಹಬ್ಬದ ವಾತವಾರಣ, ದೀಪ, ಸಿಹಿ, ಪಟಾಕಿ ಮೂಲಕ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಗುತ್ತಿದೆ. ಹೀಗಾಗಿ ಡ್ರೋನ್ ಹಾರಿಸಿದರೆ ಭಾರತದ ಬಹುತೇಕ ಕಡೆ ದೀಪಗಳು ಬೆಳಗುತ್ತಿರುವುದ ಕಾಣಸಿಗುತ್ತದೆ. ಇದರ ನಡುವೆ ಮಹಿಳೆಯೊಬ್ಬರು ವಿಮಾನ ಪ್ರಯಾಣದ ವೇಳೆ ಬೆಂಗಳೂರು, ದೆಹಲಿ ನಗರ ದೀಪಾವಳಿ ವೇಳೆ ಹೇಗೆ ಕಾಣುತ್ತಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ನೋಡಿದ ಹಲವರು ಮಹಿಳೆಗೆ ವಾಸ್ತವ ಏನು ಅನ್ನೋದು ವಿವರಿಸಿದ್ದಾರೆ.
ವಿಡಿಯೋದಲ್ಲಿ ಹೇಗೆ ಕಾಣುತ್ತಿದೆ ಬೆಂಗಳೂರು-ದೆಹಲಿ
ಮಹಿಳೆ ವಿಮಾನ ಬೆಂಗಳೂರು ಹಾಗೂ ದೆಹಲಿ ವಿಮಾನ ಪ್ರಯಾಣದ ವೇಳೆ ಈ ಎರಡು ನಗರಗಳು ದೀಪಗಳಿಂದ ಹೇಗೆ ಕಂಗೊಳಿಸುತ್ತಿದೆ ಎಂಬ ವಿಡಿಯೋ ಪೋಸ್ಟ್ ಮಾಡಿದ್ದಾರೆ. ದೀಪಾವಳಿ ಹಬ್ಬದ ವೇಳೆ ದೆಹಲಿ ಹಾಗೂ ಬೆಂಗಳೂರು ನಗರದ ವ್ಯತ್ಯಾಸ ಎಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ದೆಹಲಿ ನನ್ನ ಹೃದಯದಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ದೀಪಗಳು ಕಾಣಿಸುತ್ತಿಲ್ಲ. ಬೆಂಗಳೂರು ಹೆಚ್ಚು ಕತ್ತಲಾಗಿ ಕಾಣಿಸುತ್ತಿದೆ. ಆದರೆ ದೆಹಲಿ ಸಂಪೂರ್ಣ ಬೆಳಕು, ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ವಾಸ್ತವದ ಪಾಠ
ರಾತ್ರಿ ಪ್ರಯಾಣದ ವೇಳೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರಿ ವ್ಯತ್ಯಾಸ ಕಾಣುತ್ತಿರುವ ಈ ಎರಡು ನಗರಗಳನ್ನು ಕೇವಲ ಒಂದು ವಿಡಿಯೋದಿಂದ ಅಳೆಯಬೇಡಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಪ್ರಮುಖವಾಗಿ ಬೆಂಗಳೂರು ವಿಮಾನ ನಿಲ್ದಾಣ ನಗರದಿಂದ 30 ಕಿಲೋಮೀಟರ್ ದೂರದಲ್ಲಿದೆ. ದೆಹಲಿ ವಿಮಾನ ನಿಲ್ದಾಣ ನಗರದ ಮಧ್ಯಭಾಗದಲ್ಲಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ದೀಪಗಳು ಕಾಣುತ್ತಿಲ್ಲ ಎಂದು ಇಲ್ಲಿ ಹಬ್ಬ ಆಚರಣೆ ಇಲ್ಲ ಎಂದಲ್ಲ. ನೀವು ನಗರಕ್ಕೆ ಬಂದು ನೋಡಿದರೆ ಅರ್ಥಾವಾಗುತ್ತದೆ. ಅತೀ ಹೆಚ್ಚು ಹಬ್ಬಗಳನ್ನು ಅತ್ಯಂತ ವಿಶೇಷವಾಗಿ ಅದೇ ಪಾವಿತ್ರ್ಯತೆಯೊಂದಿಗೆ ಬೆಂಗಳೂರು ಆಚರಿಸುತ್ತದೆ. ನವರಾತ್ರಿ ಪೆಂಡಾಲ್, ಗಣೇಶ ಹಬ್ಬ, ದೀಪಾವಳಿ ಹಬ್ಬಗಳು ಭಾರಿ ವಿಶೇಷ. ಬೆಂಗಳೂರಿನ ನವರಾತ್ರಿ , ದುರ್ಗಾ ಪೆಂಡಾಲ್‌ಗಳ್ನು ಕೋಲ್ಕತಾಗೆ ಹೋಲಿಸುತ್ತಿಲ್ಲ. ಆದರೆ ಇಲ್ಲಿ ಅಷ್ಟೇ ವಿಜ್ರಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ಕಟ್ಟಡಗಳಿಗೆ ದೀಪಾಂಲಕಾರ ಮಾಡುವ ಬದಲು ದೀಪಾವಳಿ ಎಂದರೆ ದೀಪಗಳನ್ನು ಹಚ್ಚಿ ಆಚರಿಸುವುದು. ದಕ್ಷಿಣ ಭಾರತದಲ್ಲಿ ಹಬ್ಬಗಳು ಹೆಚ್ಚು ಸಾಂಪ್ರದಾಯಿಕ ಹಾಗೂ ಪರಂಪರೆ, ಸಂಸ್ಕೃತಿ ಆಧಾರಿತವಾಗಿದೆ. ಉತ್ತರದಂತೆ ಹಬ್ಬ ಬದುಕಿಂತ, ವಾಸ್ತವಕ್ಕಿಂತ ದೊಡ್ಡದಾಗಿ ತೋರ್ಪಡಿಯ ವಸ್ತುವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ದೀಪಾವಳಿ, ಹೋಳಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಬೆಂಗಳೂರಲ್ಲಿ ದೀಪಾವಳಿ, ಹೋಳಿ ಮಾತ್ರವಲ್ಲ, ಶ್ರೀಕೃಷ್ಣ ಜನ್ಮಾಷ್ಟಮಿ, ಯುಗಾದಿ, ಮಕರ ಸಂಕ್ರಾತಿ ಸೇರಿದಂತೆ ಸಾಲು ಸಾಲು ಹಬ್ಬ ಅಷ್ಟೇ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
